ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರದ ರಾಣಿ ಚೆನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ಇದೇ ದಿನಾಂಕ ೨೪ ರಿಂದ ಮೂರು ದಿನಗಳ ಕಾಲ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ೪೫ ನೇ ಪ್ರಾಂತ ಸಮ್ಮೇಳನ ನಡೆಯಲಿದೆ ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ್ ಕುಳಗೇರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಾಂತ ಸಮ್ಮೇಳನದ ಕುರಿತು ವಿವರಣೆ ನೀಡಿದ ಅವರು, ಈಗಾಗಲೇ ಸಮ್ಮೇಳನಕ್ಕೆ ಸಕಲ ಸಿದ್ಧತೆಗಳನ್ನು ಭರದಿಂದ ಕೈಗೊಳ್ಳಲಾಗುತ್ತಿದೆ, ೬ ವಿಭಾಗಗಳ ೧೬ ಜಿಲ್ಲೆಯಿಂದ ಸುಮಾರು ೭೦೦ ವಿದ್ಯಾರ್ಥಿಗಳು, ೩೦೦ ವಿದ್ಯಾರ್ಥಿನಿಯರು ಮತ್ತು ೧೦೦ ಕ್ಕೂ ಹೆಚ್ಚು ಅಧ್ಯಾಪಕರು ಮತ್ತು ಶಿಕ್ಷಣ ತಜ್ಞರು ಸೇರಿ ಒಟ್ಟು ೧೧೦೦ ಕ್ಕೂ ಅಧಿಕ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದರು.
ದಿ.೨೩ ರಂದು ಎಲ್ಲ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ, ರಾತ್ರಿ ೯ ಗಂಟೆಗೆ ರಾಜ್ಯದ ವಿದ್ಯಾರ್ಥಿ ಪರಿಷತ ನ ಚಟುವಟಿಕೆಗಳು ಹಾಗೂ ವಿಶೇಷ ಅಭಿಯಾನಗಳನ್ನು ಒಳಗೊಂಡ ಪ್ರದರ್ಶಿನಿಯನ್ನು ನಗರದ ಶ್ರೀ ಸಿದ್ದೇಶ್ವರ ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿ ಉದ್ಘಾಟಿಸಲಿದ್ದಾರೆ.
ದಿ.೨೪ ರಂದು ಬೆಳಿಗ್ಗೆ ಧ್ವಜಾರೋಹಣದಿಂದ ಸಮ್ಮೇಳನ ಪ್ರಾರಂಭವಾಗಲಿದೆ. ರಾಜ್ಯ ಅಧ್ಯಕ್ಷರ ಮತ್ತು ರಾಜ್ಯ ಕಾರ್ಯದರ್ಶಿಗಳ ಚುನಾವಣಾ ಪ್ರಕ್ರಿಯೆ ನಡೆಯಲಿದ್ದು, ನಂತರ ಎಬಿವಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಶಿಷ ಚವಾಣ ಮುಖ್ಯ ಅತಿಥಿಗಳಾಗಿ ಭಾಗವಿಸಲಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಪ್ರಚಾರಕ ನರೇಂದ್ರ ಅವರಿಂದ ವಿಶೇಷ ಭಾಷಣ ನಡೆಯಲಿದೆ ಎಂದು ಸಚಿನ್ ವಿವರಿಸಿದರು.
ದಿ.೨೬ ರಂದು ಸಹಸ್ರಬುದ್ಧಿ ವಿಜಯಪುರಕ್ಕೆ
ದಿ.೨೫ ರಂದು ಪ್ರಚಾರಕ ವಾದಿರಾಜ ಅವರಿಂದ ಸಂವಿಧಾನದ ವಿಷಯದ ಕುರಿತು ಭಾಷಣ ನಡೆಯಲಿದೆ. ೨೫ ರಂದು ಸಂಜೆ ೪ ಕ್ಕೆ ನಗರದ ಗೋದಾವರಿ ಹೋಟೆಲ್ ನಿಂದ ಗಾಂಧಿ ಚೌಕ್ ಸಿದ್ದೇಶ್ವರ ದೇವಸ್ಥಾನ, ಗಣಪತಿ ಚೌಕ, ಬಸವೇಶ್ವರ ವೃತ್ತ ಮಾರ್ಗವಾಗಿ ಯಾತ್ರೆ ನಡೆಯಲಿದೆ. ನಂತರ ದರಬಾರ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.
ಸಭೆಯಲ್ಲಿ ಎಬಿವಿಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ವೀರೇಂದ್ರಸಿಂಗ್ ಸೋಲಂಕಿ ಹಾಗೂ ರಾಜ್ಯದ ವಿದ್ಯಾರ್ಥಿ ನಾಯಕರ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ದಿ.೨೬ ರಂದು ಗಣರಾಜ್ಯೋತ್ಸವ ಆಚರಣೆ ನಡೆಯಲಿದ್ದು, ನಂತರ ನ್ಯಾಕ್ ಚೇರಮನ್ ರಾದ ಅನಿಲ ಸಹಸ್ರಬುದ್ದಿ ಅತಿಥಿಗಳಾಗಿ ಭಾಗವಿಸಲಿದ್ದಾರೆ. ಸಮ್ಮೇಳನದಲ್ಲಿ ರಾಜ್ಯದ ಶೈಕ್ಷಣಿಕ ಸ್ಥಿತಿಗತಿ ವರ್ತಮಾನ ಪರಿಸ್ಥಿತಿ ಹಾಗೂ ನೇಮಕಾತಿಗಳ ಕುರಿತಂತೆ ಚರ್ಚೆ ನಡೆಯಲಿದೆ ಎಂದರು.
ಸ್ಟೀನ್ ಟೈಮ್ ಟು ಆಕ್ಟಿವಿಟಿ ಟೈಮ್ ಕುರಿತು ರಾಜ್ಯಾದ್ಯಂತ ಅಭಿಯಾನ ತೆಗೆದುಕೊಳ್ಳುವ ಕುರಿತು ಚರ್ಚೆ ನಡೆಯಲಿದೆ, ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷ, ವಂದೇ ಮಾತರಂ ಗೆ ೧೫೦ ವರ್ಷ, ರಾಣಿ ಅಬ್ಬಕ್ಕ ಅವರ ೫೦೦ನೇ ಜಯಂತೋತ್ಸವ, ಸರ್ದಾರ ವಲ್ಲಭಾಯಿ ಪಟೇಲ ಅವರ ೧೫೦ ಜಯಂತೋತ್ಸವ, ಸಂವಿಧಾನಕ್ಕೆ ೭೫ ವರ್ಷ, ತುರ್ತು ಪರಿಸ್ಥಿತಿಗೆ ೫೦ ವರ್ಷ, ರಾಷ್ಟ್ರೀಯ ಭದ್ರತೆ, ಸೈಬರ್ ಸೆಕ್ಯೂರಿಟಿ ಈ ವಿಷಯಗಳ ಸಮಾನಾಂತರ ಗೋಷ್ಠಿಗಳು ನಡೆಯಲಿವೆ.
ಡಾ.ಅಮೀತ್ ಬಿರಾದಾರ, ಸುಧೀರ ಟಂಕಸಾಲಿ, ಬಸವರಾಜ ಯಾದವಾಡ, ಡಾ.ಶೀಲಾ ಬಿರಾದಾರ, ಪ್ರೊ.ಸುಮಾ ಬೋಳರೆಡ್ಡಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

