ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಾಮರಸ್ಯ, ಪರಿಸರ ಸಂರಕ್ಷಣೆ, ಸ್ವದೇಶಿ ಚಿಂತನೆ ಎಂಬ ಉದಾತ್ತ ತತ್ವಗಳ ಆಶಯಗಳೊಂದಿಗೆ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ನೇತೃತ್ವದಲ್ಲಿ ಇದೇ ದಿ.೨೪ ರಂದು ಮಧ್ಯಾಹ್ನ ೩ ಕ್ಕೆ ಭವ್ಯ ಭಕ್ತಿಭಾವದ ಶೋಭಾಯಾತ್ರೆ ನಡೆಯಲಿದೆ ಎಂದು ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ಸಂಚಾಲಕ ಸದಾನಂದ ದೇಸಾಯಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರದ ನಾಲ್ಕು ಕಡೆಗಳಲ್ಲಿ ಈ ಅರ್ಥಪೂರ್ಣ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ, ವಿಜಯಪುರದ ನಾಲ್ಕು ದಿಕ್ಕುಗಳಲ್ಲಿಯೂ ಸಹ ಈ ಕಾರ್ಯಕ್ರಮ ನಡೆಯಲಿದೆ, ಜಲನಗರ ಮೊದಲಾದ ಬಡಾವಣೆಗಳ ಭಾಗಗಳನ್ನು ಬಸವೇಶ್ವರ ಭಾಗ ಎಂದು ಗುರುತಿಸಿ ಅಲ್ಲಿ ಈ ಕಾರ್ಯಕ್ರಮಗಳ ಸರಣಿ ನಡೆಯಲಿದೆ, ದಿ.೨೪ ರಂದು ಭವ್ಯ ಶೋಭಾಯಾತ್ರೆ ನಡೆಯಲಿದ್ದು, ಮುರಾಣಕೇರಿಯ ಶ್ರೀ ಈಶ್ವರಲಿಂಗ ದೇವಸ್ಥಾನದಿಂದ ಭಾರತ ಮಾತೆ ಹಾಗೂ ವಿವಿಧ ಮಹಾಪುರುಷರ ಭಾವಚಿತ್ರಗಳ ಮೆರವಣಿಗೆ ಸಂಜೆ ೩ ರಿಂದ ಆರಂಭಗೊಳ್ಳಳಿದೆ, ಮಕ್ಕಳು ಮಹಾಪುರುಷರ ವೇಷಗಳನ್ನು ಧರಿಸಿ ಭವ್ಯ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು, ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿದ್ದು, ಮುರಾಣಕೇರಿ ಕೋರ್ಟ್ ವೃತ್ತ, ಜಲನಗರ ಸೇರಿದಂತೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪ ತಲುಪಲಿದೆ. ಅಲ್ಲಿರುವ ವಿಶಾಲ ಮೈದಾನದಲ್ಲಿ ಸಂಜೆ ೫.೩೦ ಕ್ಕೆ ಸಾರ್ವಜನಿಕ ಸಮಾರಂಭ ನಡೆಯಲಿದ್ದು ಹಲವಾರು ಮಠಾಧೀಶರ ಪಾವನ ಸಾನಿಧ್ಯದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದರು.
ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಕನ್ನೂರ ಶಾಂತಿ ಕುಟೀರದ ಸಾಧಕರಾದ ಕೃಷ್ಣ ಸಂಪಗಾಂವಕರ, ಕೆಸರಟ್ಟಿಯ ಶ್ರೀ ಸೋಮಲಿಂಗ ಮಹಾಸ್ವಾಮೀಜಿ, ಮಾತೋಶ್ರೀ ಯೋಗೇಶ್ವರಿ ಮಾತಾಜಿ ಸಾನಿಧ್ಯ ವಹಿಸಲಿದ್ದು, ಧರ್ಮ ಜಾಗರಣ ಪ್ರಾಂತದ ವಕ್ತಾರ ಹಣಮಂತ ಮಳಲಿ ಪ್ರಧಾನ ಭಾಷಣ ಮಾಡಲಿದ್ದಾರೆ ಎಂದರು.
ಜಗತ್ತಿನಲ್ಲಿಯೇ ದೊಡ್ಡದಾಗಿರುವ ಸ್ವಯಂಸೇವಕ ಸಂಘಟನೆಯಾಗಿರುವ ಆರ್‌ಎಸ್‌ಎಸ್ ಆಶಯಗಳ ಬೆಳಕಿನಲ್ಲಿ ಈ ಕಾರ್ಯಕ್ರಮ ಸಂಘಟಿಸಲಾಗುತ್ತಿದ್ದು, ಯಾವ ಪ್ರಕೃತಿ ವಿಕೋಪ ಸಂಭವಿಸಿದಾಗ ಆ ಸ್ಥಳಕ್ಕೆ ಹೋಗಿ ಅಸಹಾಯಕರಿಗೆ ಸಹಾಯ ಮಾಡುವವರು ಸಂಘ ಪರಿವಾರದ ಸ್ವಯಂ ಸೇವಕರು, ಹಿಂದೂ ಸಮಾಜ ಜಾತಿ ಬೇಧಗಳನ್ನು ಬದಿಗಿಟ್ಟು, ನಾವಲ್ಲ ಹಿಂದೂ ನಾವೆಲ್ಲ ಬಂಧು ಎಂಬ ಭಾವ ಬೆಳೆಸುವಲ್ಲಿಯೂ ಸಂಘ ಪರಿವಾರದ ಪಾತ್ರ ಅನನ್ಯ ಈ ನಿಟ್ಟಿನಲ್ಲಿ ಪಂಚ ಪರಿವರ್ತನೆ ಅನ್ನುವ ಹೆಸರಿನಲ್ಲಿ ಸಮಾಜಕ್ಕೆ ೦೫ ವಿಷಯಗಳನ್ನು ಜಾರಿ ತರಲು ಸಂಘ ಪರಿವಾರ ಕರೆ ಕೊಟ್ಟಿದ್ದು ಈ ಪಂಚ ಆಶಯಗಳಾದ ಸಾಮರಸ್ಯ, ಪರಿಸರ ಸಂರಕ್ಷಣೆ, ಕುಟುಂಬ ಪ್ರಬೋಧನೆ, ಸ್ವದೇಶಿ, ನಾಗರಿಕ ಕರ್ತವ್ಯ ಎಂಬ ಆಶಯಗಳನ್ನಿರಿಸಿಕೊಂಡು ಈ ಶೋಭಾಯಾತ್ರೆ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಡಾ.ಪ್ರಾಣೇಶ ಜಹಾಗೀರದಾರ, ಲಿಂಗರಾಜ ಹಿರೇಮಠ, ಉಪೇಂದ್ರ ದೇಸಾಯಿ, ಮಹಾದೇವ ದೊಡಮನಿ, ಎಲ್.ಬಿ. ಪಾಟೀಲ, ಚಂದ್ರು ಚೌಧರಿ, ಡಾ.ಬಾಬು ರಾಜೇಂದ್ರ ನಾಯಕ, ಶ್ರೀಧರ ನಾರಾಯಣಕರ, ಕರಬಸಪ್ಪ ಅರಕೇರಿ, ನಾರಾಯಣಸಿಂಗ್ ಹಜೇರಿ, ಭುವನೇಶ್ವರಿ ಕೋರವಾರ, ಸುನೀತಾ ಪಾಟೀಲ, ಪ್ರಕಾಶ ಅಕ್ಕಲಕೋಟ, ವಿಕಾಸ ಪದಕಿ, ವಿಜಯ ಜೋಶಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

