ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೧೯೫೯ ರ ಕರ್ನಾಟಕ ಪ್ರಾಣಿ ಬಲಿ ಪ್ರತಿಬಂಧಕ ಕಾಯ್ದೆ ಅನ್ವಯ ಯಂಕಂಚಿಯ ದಾವಲ್ ಮಲಿಕ್ ಉರುಸು (ಜಾತ್ರಾ ಮಹೋತ್ಸವ)ದಲ್ಲಿ ನಡೆಯುವ ಪ್ರಾಣಿ ಬಲಿಯನ್ನು ಕೂಡಲೇ ತಡೆಯಬೇಕು ಎಂದು ಪಶು ಪ್ರಾಣಿ ಬಲಿ ನಿರ್ಮೂಲನಾ ಜಾಗೃತ ಮಹಾಸಂಘದ ಪ್ರಮುಖರಾದ ದಯಾನಂದ ಸ್ವಾಮೀಜಿ ಒತ್ತಾಯಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಂಕಂಚಿಯ ದಾವಲ್ ಮಲಿಕ್ ಜಾತ್ರೆ (ಉರುಸು) ಸಂದರ್ಭದಲ್ಲಿ ಸಾವಿರಾರು ಪ್ರಾಣಿ ಬಲಿ ನಡೆಯುತ್ತದೆ, ಕಳೆದ ಬಾರಿಯೂ ಸಹ ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದೆ, ಈ ಬಾರಿಯೂ ಸಹ ನಾನು ಈ ವಿಷಯವನ್ನು ಗಮನಕ್ಕೆ ತಂದಿರುವೆ, ಕೂಡಲೇ ಅಲ್ಲಿ ನಡೆಯುವ ಪ್ರಾಣಿ ಬಲಿಯನ್ನು ತಡೆಯಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಸಂಪೂರ್ಣ ಪ್ರಾಣಿ ಬಲಿ ಮುಕ್ತ ರಾಜ್ಯ ಎಂದು ಘೋಷಿಸಿಕೊಂಡಿದೆ, ೧೯೫೯ ರಲ್ಲಿ ಕರ್ನಾಟಕ ಪ್ರಾಣಿ ಬಲಿ ಪ್ರತಿಬಂಧಕ ಕಾಯ್ದೆ ಅನ್ವಯ ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಪ್ರಾಣಿಬಲಿ ಕೊಡುವಂತಿಲ್ಲ, ಬಲಿಗೆ ಪ್ರೇರಣೆ ಕೊಡುವಂತಿಲ್ಲ, ಈ ಮೊದಲು ಕೇವಲ ಹಿಂದೂ ದೇವಾಲಯಕ್ಕೆ ಸೀಮಿತವಾಗಿದ್ದ ಈ ಕಾಯ್ದೆಯನ್ನು ತಿದ್ದುಪಡಿ ತಂದು ಎಲ್ಲ ಧಾರ್ಮಿಕ ಪ್ರದೇಶಗಳನ್ನು ಸೇರ್ಪಡೆ ಮಾಡಲಾಗಿದೆ, ಎಲ್ಲಿಯೂ ಪ್ರಾಣಿ ಬಲಿಗೆ ಅವಕಾಶವಿಲ್ಲ, ಅನೇಕ ಹೈಕೋರ್ಟ್ ತೀರ್ಪುಗಳು ಸಹ ಈ ವಿಷಯವನ್ನು ಬೆಂಬಲಿಸಿವೆ ಎಂದು ವಿವರಿಸಿದರು.
ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು, ಪ್ರಾಣಿ ಬಲಿ ನಡೆಯುತ್ತಿರುವ ದೂರು ಬಂದರೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಲು ಅವಕಾಶವಿದೆ, ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಸ್ವಯಂ ಪ್ರೇರಣೆ ದೂರು ದಾಖಲಿಸಿಕೊಳ್ಳಿ ಎಂದು ಒತ್ತಾಯಿಸಿದರು.
ಪ್ರಾಣಿಬಲಿಗೆ ಎಲ್ಲಿಯೂ ಅವಕಾಶವಿಲ್ಲ, ಯಾವ ದೇವಾಲಯ, ದರ್ಗಾದಲ್ಲಿ ಈ ಪ್ರಾಣಿ ಬಲಿ ನಡೆಯಬಾರದು, ಈ ನಿಟ್ಟಿನಲ್ಲಿ ಕೋಟ್ಯಂತರ ಪ್ರಾಣಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ, ಮಾನವ ಸ್ವಾರ್ಥ ಸಾಧನೆಗಾಗಿ ಪ್ರಾಣಿಗಳಿಗೆ ಬಲಿ ನೀಡುತ್ತಿದ್ದಾನೆ, ಬಸವಾದಿ ಶರಣರು ಸಹ ಪ್ರಾಣಿಗಳ ಮೇಲೆ ದಯೆ ಇರಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.
ಲಕ್ಷಾಂತರ ಹಿಂದೂ ಮಂದಿರಗಳಲ್ಲಿಯೂ ಸಹ ಪ್ರಾಣಿ ಬಲಿ ನಡೆಯುತ್ತಿದೆ, ಹೀಗಾಗಿ ಹಿಂದೂ ದೇವಾಲಯಗಳನ್ನು ಶುದ್ಧೀಕರಿಸಿ ಅಲ್ಲಿ ಪ್ರಾಣಿ ಬಲಿ ನಿಲ್ಲಬೇಕು, ಪ್ರಾಣಿ ಬಲಿ ಅಂಧ ಶ್ರದ್ಧೆ ಈ ಅಂಧ ಶ್ರದ್ಧೆ ತೊಲಗಬೇಕಿದೆ ಎಂದರು.
ಭಕ್ತರಿಗೆ ಮನವೊಲಿಸುವ ಪ್ರಯತ್ನ
ನಾನು ಸಹ ಯಂಕಂಚಿಯ ದಾವಲ್ ಮಲಿಕ್ ದರ್ಗಾಕ್ಕೆ ಭೇಟಿ ನೀಡಿ ಅಲ್ಲಿ ಭಕ್ತರಿಗೆ ಕೈ ಮುಗಿದು ಕೋರಿಕೊಳ್ಳುವೆ, ದೇವಾಲಯಗಳು ವಧಾಲಯ ಆಗಬಾರದು, ಅಲ್ಲಿ ರಕ್ತಪಾತ ಆಗಬಾರದು ಎಂದು ಮನವಿ ಮಾಡಿಕೊಳ್ಳುವೆ ಎಂದು ದಯಾನಂದ ಸ್ವಾಮೀಜಿ ಹೇಳಿದರು.
ಮೂಕ ಪ್ರಾಣಿಗಳಿಗೆ ಬದುಕುವ ಹಕ್ಕಿದೆ, ಈ ಹಕ್ಕನ್ನು ಕಸಿದುಕೊಳ್ಳುವುದು ಬೇಡ, ನಾನು ಯಾವ ಧಾರ್ಮಿಕ ಪರಂಪರೆಗೆ ವಿರೋಧಿಸುತ್ತಿಲ್ಲ, ಆಚರಣೆಗೆ ನಾನು ವಿರೋಧ ವ್ಯಕ್ತಪಡಿಸುತ್ತಿಲ್ಲ ಎಂದು ದಯಾನಂದ ಸ್ವಾಮೀಜಿ ಹೇಳಿದರು.

