ಋಣ ತೀರಿಸಲು ಸಾಧ್ಯವಿಲ್ಲ – ಶಾಸಕ ಅನೀಲ ಚಿಕ್ಕಮಾದು ಭಾವುಕ ನುಡಿ
ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ಹುಣಸೂರು ತಾಲೂಕಿನಲ್ಲಿ ನಮ್ಮ ಕುಟುಂಬಕ್ಕೆ ಅವಕಾಶ ಸಿಕ್ಕಿದ್ದು ಒಂದು ಬಾರಿ ಮಾತ್ರ. ಆದರೆ ಹೆಚ್ ಡಿ ಕೋಟೆ ಕ್ಷೇತ್ರದ ಜನ ನಮ್ಮ ಕುಟುಂಬಕ್ಕೆ ಮೂರು ಬಾರಿ ಅವಕಾಶ ಕೊಟ್ಟಿದ್ದಾರೆ. ಈ ಮೂಲಕ ನಮಗೆ ರಾಜಕೀಯ ಪುನರ್ಜನ್ಮ ನೀಡಿದ್ದಾರೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಡಾ. ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನ ನೀಡದಿದ್ದರೆ. ಎಸ್ಸಿ-ಎಸ್ಟಿಯವರಾದ ನಾವು ಗ್ರಾ.ಪಂ., ತಾಲೂಕು ಜಿ.ಪಂ. ಜಿಲ್ಲಾ ಪಂಚಾಯತ್ ಸದಸ್ಯರೂ ಆಗುತ್ತಿರಲಿಲ್ಲ. ಇವತ್ತು ನಾನು ಎರಡು ಬಾರಿ ಶಾಸಕರಾಗಿ ಇನ್ನೂ ಸರ್ಕಾರಿ ಕಾರಿನಲ್ಲಿ ಓಡಾಡುತ್ತಿದ್ದೇನೆ ಎಂದರೆ ಅದಕ್ಕೆ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವೇ ಕಾರಣ. ಅವರ ಆದರ್ಶ ತತ್ವಗಳನ್ನು ನಾವು ಮೈಗೂಡಿಸಿಕೊಂಡು ಮುನ್ನಡೆಯಬೇಕಾಗಿದೆ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 20 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಆದರೆ ಇದು ಸಾಕಾಗಲ್ಲ ಎಂದು ಹೇಳುತ್ತಿದ್ದೀರಿ. ಮದುವೆ ಸೇರಿದಂತೆ ಶುಭಾರಂಭಗಳನ್ನು ಭವನದಲ್ಲೇ ನಡೆಸಲು ಅನುಕೂಲವಾಗುವಂತೆ ಭವನ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುವುದು. ಫೆಬ್ರವರಿ ಒಂದು ಅಥವಾ ಎರಡರಂದು ಕಾಮಗಾರಿ ಆರಂಭಿಸಬೇಕೆಂದು ಎಂಜನಿಯರ್ ಗೆ ಶಾಸಕ ಅನಿಲ್ ಚಿಕ್ಕಮಾದು ಸೂಚಿಸಿದರು. ಅಲ್ಲದೆ ಗ್ರಾಮದಲ್ಲಿರುವ ಬೋಳನಕಟ್ಟೆ ಕೆರೆ ಏರಿಯಾದಲ್ಲಿ ಒಂದು ಕಡೆ ಮಾತ್ರ ತಡೆಗೋಡೆ ನಿರ್ಮಾಣಕ್ಕೆ 6 ತಿಂಗಳ ಹಿಂದೆಯೇ 6 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ಯಾಕೆ ಕಾಮಗಾರಿ ಆರಂಭಿಸಿಲ್ಲ ಎಂಬುದರ ಬಗ್ಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳ ಜೊತೆ ಮಾತನಾಡಿ ಕೆಲಸ ಪ್ರಾರಂಭಿಸಲು ಸೂಚನೆ ನೀಡಲಾಗುವುದು. ಜೊತೆಗೆ ಮುಂದಿನ ದಿನಗಳಲ್ಲಿ ಜಕ್ಕಹಳ್ಳಿಯಿಂದ ಚೌಡಹಳ್ಳಿವರೆಗೆ ಡಾಂಬರೀಕರಣ ರಸ್ತೆ ಮಾಡಿಸಿಕೊಡಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ವಕೀಲರಾದ ಜವರಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಚೆಲುವಯ್ಯ, ಕಾಂಗ್ರೆಸ್ ಮುಖಂಡ ಮಲ್ಲೇಶ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಅಜರುದ್ದೀನ್, ಮೇಟಿಕುಪ್ಪೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ವಾಮಿ, ನಿರ್ಮಿತಿ ಕೇಂದ್ರದ ಅಸಿಸ್ಟೆಂಟ್ ಎಂಜಿನಿಯರ್ ಲೋಹಿತ್,
ನಾಗೇಶ್, ನಿಂಗಯ್ಯ, ಕೆಂಪಸಿದ್ದಯ್ಯ, ಚಂದ್ರು, ಗೋಪಾಲ್, ನಾಗೇಶ್, ಸೇರಿದಂತೆ ಗ್ರಾಮದ ಮುಖಂಡರು, ಯುವಕರು, ಮಹಿಳೆಯರು ಉಪಸ್ಥಿತರಿದ್ದರು.
ದೃವನಾರಾಯಣ್ ಸ್ಮರಿಸಿದ ಶಾಸಕರು
ಹುಣಸೂರು ತಾಲೂಕಿನಲ್ಲಿ ನಮ್ಮ ತಂದೆ ಎರಡು-ಮೂರು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಅಲ್ಲಿನ ಜನ ಒಂದು ಬಾರಿ ಮಾತ್ರ ನಮಗೆ ಅವಕಾಶ ಮಾಡಿಕೊಟ್ಟರು. ಆದರೆ ನನ್ನ ರಾಜಕೀಯ ಗುರುಗಳಾದ ಮಾಜಿ ಸಂಸದ ದೃವನಾರಾಯಣ್ ಅವರು ಜೆಡಿಎಸ್ ಪಕ್ಷದಿಂದ ನನ್ನನ್ನು ಕಾಂಗ್ರೆಸ್ ಗೆ ಕರೆತಂದು, ಹೆಚ್ ಡಿ ಕೋಟೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟರು. ಅವರ ಆಶೀರ್ವಾದ ಹಾಗೂ ತಾಲೂಕಿನ ಜನರ ಕೃಪಾಕಟಾಕ್ಷದಿಂದ ಎರಡು ಬಾರಿ ಶಾಸಕರಾಗಿದ್ದೇನೆ. ಅದರ ಋಣ ನಮ್ಮ ಕುಟುಂಬದ ಮೇಲಿದ್ದು, ಅದನ್ನು ಎಂದಿಗೂ ತೀರಿಸಲು ಸಾಧ್ಯವೇ ಇಲ್ಲ ಎಂದು ಶಾಸಕ ಅನಿಲ್ ಚಿಕ್ಕಮಾದು ಭಾವುಕರಾಗಿ ನುಡಿದರು.

