ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ದೇಶಕ್ಕೆ ಸ್ವಾಮಿ ವಿವೇಕಾನಂದರು ದೊಡ್ಡ ಘನತೆಯಾಗಿದ್ದಾರೆ. ಇವರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ಸುಂದರವಾದ ಜೀವನ ಸಾಗಿಸಬಹುದು ಎಂದು ದೇವರಹಿಪ್ಪರಗಿಯ ಜಿ.ಎಫ್.ಜಿ.ಸಿ. ಕಾಲೇಜಿನ ದೈಹಿಕ ನಿರ್ದೇಶಕ ಮಲ್ಲಿಕಾರ್ಜುನ ಲಕ್ಷ್ಮೀಶ ಹೇಳಿದರು.
ಪಟ್ಟಣದ ಬಿ.ಎಲ್.ಡಿ.ಇ. ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಎನ್.ಎಸ್.ಎಸ್. ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಅವರ ಜಯಂತಿ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಮಾತನಾಡಿದ ಅವರು, ಅಮೇರಿಕಾದ ಚಿಕ್ಯಾಗೋ ಸರ್ವಧರ್ಮದಲ್ಲಿ ವಿವೇಕಾನಂದರ ಭಾಷಣವು ಭಾರತದ ಬಗ್ಗೆ ಮೂಡಿದ್ದ ತಪ್ಪು ಕಲ್ಪನೆಯನ್ನು ಹೋಗಲಾಡಿಸಿ ದೇಶಕ್ಕೊಂದು ಘನತೆ ಗೌರವ ತಂದುಕೊಡುವಲ್ಲಿ ಯಶಸ್ವಿಯಾಯಿತು. ಇದು ಇಡೀ ಪಾಶ್ಚಿಮಾತ್ಯ ದೇಶಗಳು ಭಾರತದ ಪಾದಕ್ಕೆರಗಿದ್ದು ಐತಿಹಾಸಿಕ ದಿನವಾಗಿದೆ ಎಂದರು.
ಜ್ಞಾನ, ವಿಜ್ಞಾನ, ಆಧ್ಯಾತ್ಮಿಕತೆ, ಸಂಸ್ಕೃತಿ ಹಾಗೂ ಸಂಸ್ಕಾರಗಳಿಗೆ ತವರು ಮನೆಯಂತಿದ್ದ ಭಾರತದ ಬಗ್ಗೆ ಪಾಶ್ಚಿಮಾತ್ಯ ದೇಶಗಳು ತುಚ್ಛ ಭಾವನೆಯನ್ನುಇಟ್ಟುಕೊಂಡಿದ್ದವು. ಪ್ರಾಚೀನ ಕಾಲದಿಂದಲೂ ಭಾರತ ವಿಜ್ಞಾನದ ಎಲ್ಲ ಕ್ಷೇತ್ರಗಳಲ್ಲಿ ಅಪಾರವಾದ ಜ್ಞಾನವನ್ನು ಜಗತ್ತಿಗೆ ಧಾರೆಯೆದಿದೆ. ಭಾರತದ ತತ್ವ ಚಿಂತನೆಗಳ ಆಧಾರದಲ್ಲಿಯೇ ಪಾಶ್ಚಾತ್ಯ ವಿಜ್ಞಾನಿಗಳು ಸಂಶೋಧನೆಗಳನ್ನು ಮಾಡಿದ್ದ ಸಾಕಷ್ಟು ಉದಾಹರಣೆಗಳಿವೆ ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಹಾಗೂ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.

