ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ವಿವಿಧ ತೆರನಾದ ಹಣ್ಣು, ತರಕಾರಿ, ಮಣ್ಣಿನ ವಿಧಗಳು, ಪರಿಸರ ಸಂರಕ್ಷಣೆ ಸಹಿತ ವಿಜ್ಞಾನ, ಆಹಾರ, ಕೃಷಿ, ಅರಣ್ಯಗಳ ಕುರಿತು ಮಕ್ಕಳು ನೀಡಿದ ಮಾಹಿತಿ ಕೇಳುಗರ ಕಣ್ಮನ ಸೆಳೆದವು.
ಪಟ್ಟಣದ ಇಂದುಮತಿ ಸಾವಳಗಿ ಆಂಗ್ಲ್ ಮಾಧ್ಯಮ ಶಾಲೆಯಲ್ಲಿ ಸೋಮವಾರ ಜರುಗಿದ ಒಂದು ದಿನದ ವಿಜ್ಞಾನ, ಆಹಾರ, ಕೃಷಿ, ಅರಣ್ಯಗಳ ಕುರಿತಾದ ಪ್ರದರ್ಶನ ಮೇಳದಲ್ಲಿ ಚಿಕ್ಕ ಮಕ್ಕಳು ತಮ್ಮ ತೊದಲು ನುಡಿಗಳ ಮೂಲಕ ತಾವೇ ತಯಾರಿಸಿದ ವಿಜ್ಞಾನದ ಕೌತುಕಗಳ ಮಾದರಿಗಳನ್ನು ಪ್ರದರ್ಶಿಸಿದರು. ಅಲ್ಲದೇ ಜ್ವಾಲಾಮುಖಿಯ ಮೂಲಕ ಹೊರಹೊಮ್ಮುವ ಲಾವಾರಸ ಮಾದರಿ, ನೀರು ಶುದ್ಧಿಕರಣ ಮಾಡುವ ವಿಧಾನಗಳು, ನೀರಿನಲ್ಲಿ ತೇಲುವ ಮನೆ ಮಾದರಿ, ಪರಿಸರ ಮಾಲಿನ್ಯ, ಅರಣ್ಯೀಕರಣಗಳ ಕುರಿತು ಮಾಹಿತಿ ನೀಡುತ್ತಾ ಮಾತನಾಡಿದ ಮಕ್ಕಳು ನೋಡುಗರ ಗಮನ ಸೆಳೆದರು.
ಸಂಸ್ಥೆಯ ಅಧ್ಯಕ್ಷ ಶಾಂತಪ್ಪ ಸಾವಳಗಿ, ಶಂಕರಗೌಡ ಪಾಟೀಲ(ಆಲಗೂರ), ಸಂಗನಗೌಡ ಪಾಟೀಲ, ದೇವೇಂದ್ರ ಹಳಿಮನಿ ಸಹಿತ ಪಾಲಕರು ಭೇಟಿ ನೀಡಿ ಮಕ್ಕಳ ಪ್ರತಿಭೆಗೆ ತಮ್ಮ ಸಂತೋಷ ವ್ಯಕ್ತಪಡಿಸಿದರು.
ಸಂಸ್ಥೆಯ ಕಾರ್ಯದರ್ಶಿ ಸಂತೋಷ ಸಾವಳಗಿ, ಶಿಕ್ಷಕಿಯರಾದ ಪವಿತ್ರಾ ಹಳಿಮನಿ, ರಾಧಿಕಾ ಗುಡಿಮನಿ, ಕಾಶೀಬಾಯಿ ಬಾಣಕಾರ, ಕವಿತಾ ರಾಮಗೊಂಡ, ಪ್ರಿಯಾಂಕಾ ಬಾಣಕಾರ ಇದ್ದರು.

