ಸಿಂದಗಿ ಮತ್ತು ಆಲಮೇಲ ತಾಲೂಕುಗಳ ಕುಡಿಯುವ ನೀರಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಿಷಿ ಆನಂದ ಅಧಿಕಾರಿಗಳಿಗೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗ್ರಾಮೀಣ ಪ್ರದೇಶಗಳ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಶುದ್ಧ ಕುಡಿಯುವ ನೀರಿನ ನಿರಂತರ ಪೂರೈಕೆಗೆ ಅಗತ್ಯ ಮುಂಜಾಗ್ರತೆ ವಹಿಸಬೇಕು. ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಿಂದಗಿ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ಸಿಂದಗಿ ಮತ್ತು ಆಲಮೇಲ ತಾಲೂಕುಗಳ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ನಡೆದ ಕುಡಿಯುವ ನೀರಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಸಿಂದಗಿ ಹಾಗೂ ಆಲಮೇಲ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕುಡಿಯುವ ನೀರಿನ ಜಲಮೂಲಗಳು, ನೀರಿನ ಲಭ್ಯತೆ ಹಾಗೂ ಪ್ರಸ್ತುತ ಸ್ಥಿತಿ-ಗತಿ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ನೀರು ಪ್ರತಿಯೊಂದು ಜೀವಿಗೂ ಮೂಲಭೂತ ಅವಶ್ಯಕತೆಯಾಗಿದ್ದು, ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ಕ್ರಮ ವಹಿಸುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರಿನ ಮೂಲಗಳ ಎಫ್‌ಟಿಕೆ ಪರೀಕ್ಷೆಯನ್ನು ಬಾಕಿ ಉಳಿದಿರುವ ಕಡೆಗಳಲ್ಲಿ ಎರಡು ದಿನಗಳೊಳಗಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದ ಅವರು, ಯಾವುದೇ ಗ್ರಾಮಗಳಲ್ಲಿ ಕಲುಷಿತ ನೀರು ಪೂರೈಕೆಯಾಗದಂತೆ ಎಚ್ಚರಿಕೆ ವಹಿಸಬೇಕು. ಕಲುಷಿತ ನೀರು ಪೂರೈಕೆಯಂತಹ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪುನರುಚ್ಚರಿಸಿದರು.
ಜಲ ಜೀವನ ಮಿಷನ್ಗೆ ಸಂಬಂಧಿಸಿದಂತೆ ಫಲಾನುಭವಿಗಳ ಆಧಾರ್ ಕಾರ್ಡ್ ಅಪ್ಲೋಡ್ ಪ್ರಕ್ರಿಯೆ ಬಾಕಿ ಉಳಿದಿದ್ದು, ಅದನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಮುಂದಿನ ೧೦ ದಿನಗಳೊಳಗಾಗಿ ಹರ್ ಘರ್ ಜಲ್ ಡಿಕ್ಲೇರೇಷನ್ ಅಭಿಯಾನವನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತೆರಿಗೆ ವಸೂಲಾತಿ ಅಭಿಯಾನವನ್ನು ತ್ವರಿತವಾಗಿ ಹಮ್ಮಿಕೊಂಡು ಹೆಚ್ಚಿನ ಪ್ರಗತಿ ಸಾಧಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಸಿಂದಗಿ ಮತ್ತು ಆಲಮೇಲ ತಾಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮು ಜಿ. ಅಗ್ನಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ತಾರಾನಾಥ ರಾಠೋಡ, ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕರು ಶೋಭಾ ಮುದಗಲ್, ಇಲಾಖೆಯ ಕಿರಿಯ ಅಭಿಯಂತರರಾದ ಎಚ್.ಎಂ. ಸಾರವಾಡ, ಎ.ಎ. ದುರ್ಗದ, ಸಿಂದಗಿ ಮತ್ತು ಆಲಮೇಲ ತಾಲೂಕಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.

