ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಾರಾಗೃಹವು ಕೇವಲ ಬಂದಿಗಳ ಕೇಂದ್ರವಲ್ಲ, ಇದೊಂದು ಸುಧಾರಣಾ ಕೇಂದ್ರವಾಗಿದೆ ಎಂದು ಕಾರಾಗೃಹದ ಅಧೀಕ್ಷಕರಾದ ಮಲ್ಲಿಕಾರ್ಜುನ ಎಸ್. ಮಾಳಿ ಅವರು ಹೇಳಿದರು.ಅವರು ನಗರದ ಕೇಂದ್ರ ಕಾರಾಗೃಹದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಯೋಗ ದಿನಾಚಾರಣೆಯ ಅಂಗವಾಗಿ ಯೋಗ ತರಬೇತಿ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಂದಿಗಳಲ್ಲಿ ಪರಿವರ್ತನೆ ತರುವ ಪರಿವರ್ತನಾ ನಿಲಯವೂ ಆಗಿದೆ. ದೈನಂದಿನ ಯೋಗಾಭ್ಯಾಸವು ಬಂದಿಗಳ ಪುನರ್ವಸತಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಅತ್ಯಂತ ಸಹಕಾರಿಯಾಗಿದ್ದು, ಪ್ರತಿಯೊಬ್ಬರೂ ನಿಯಮಿತವಾಗಿ ಯೋಗಾಭ್ಯಾಸವನ್ನು ರೂಢಿಸಿಕೊಳ್ಳಬೇಕು. ಮುಂಬರುವ ದಿನಗಳಲ್ಲಿ ಕಾರಾಗೃಹದಲ್ಲಿ ನಿರಂತರವಾಗಿ ಯೋಗಾಭ್ಯಾಸ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುವುದು. ಕಾರಾಗೃಹದ ಬಂದಿಗಳನ್ನು ಉತ್ತಮ ನಾಗರೀಕರಾಗಿ ಸಮಾಜದ ಮುಖ್ಯ ವಾಹಿನಿಗೆ ಕಳುಹಿಸಲು ಶ್ರಮಿಸುವುದಾಗಿ ಹೇಳಿದರು.
ಆರ್ಟ ಆಪ್ ಲಿವಿಂಗ್ ಶ್ರೀ ಬಿ.ಎಂ. ಪಾಟೀಲ ಗುರೂಜಿ ಮಾತನಾಡಿ, ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿಯಾಗುವುದರ ಜೊತೆಗೆ ಒತ್ತಡ ನಿವಾರಣೆ, ಏಕಾಗ್ರತೆ ಮತ್ತು ಆತ್ಮವಿಶ್ವಾಸ ಹೆಚ್ಚಿಸಲು ನೆರವಾಗುತ್ತದೆ ಎಂದು ಹೇಳಿದರು.
ಶಿಕ್ಷಕ ಡಿ.ಎಸ್.ದೀಕ್ಷಿತ ನಿರೂಪಿಸಿದರು. ಸಹಾಯಕ ಅಧಿಕ್ಷಕರಾದ ಅಭಿಜಿತ್ ಜಾಯಕ್ಕನವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

