ಕಾರ್ಯಪಾಲಕ ಇಂಜಿನಿಯರ್ ರಂಗಯ್ಯ ಕಿಡಿಗೇಡಿಗಳಿಗೆ ಎಚ್ಚರಿಕೆ
ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ: ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯದ ಹಿನ್ನೀರಿಗೆ ಮಾನವ ಮಲ ಮತ್ತು ತ್ಯಾಜ್ಯ ನೀರು ಬಿಟ್ಟಿರುವ ಬಗ್ಗೆ ಅಂತರಸಂತೆ ಪೊಲೀಸ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಜರಗಿಸುವಂತೆ ಒತ್ತಾಯ ಮಾಡಲಾಗಿದೆ ಎಂದು ಕಬಿನಿ ಜಲಾಶಯ ಉಪವಿಭಾಗದ ಕಾರ್ಯಪಾಲಕ ಇಂಜನಿಯರ್ ರಂಗಯ್ಯ ಹೇಳಿದರು.
ಬೀಚನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕಬಿನಿ ಹಿನ್ನೀರಿನಲ್ಲಿ ತ್ಯಾಜ್ಯ ಸುರಿದಿದ್ದ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ರಂಗಯ್ಯ ಅವರು, ಮಾನವ ತ್ಯಾಜ್ಯ ಮತ್ತು ಇತರೆ ತ್ಯಾಜ್ಯವನ್ನ ಕಬಿನಿ ಹಿನ್ನೀರಿಗೆ ಸುರಿದಿರುವುದು ಸ್ಥಳ ಪರಿಶೀಲನೆ ವೇಳೆ ತಿಳಿದುಬಂದಿದೆ. ಕಬಿನಿ ಹಿನ್ನೀರಿಗೆ ತ್ಯಾಜ್ಯ ಸುರಿಯುವುದು, ನೀರು ಕಲುಷಿತಗೊಳಿಸುವುದು ಅಕ್ಷ್ಯಮ್ಯ ಅಪರಾಧ. ಇದೊಂದು ಗಂಭೀರ ಪ್ರಕರಣವಾಗಿದ್ದು, ಈ ಸಂಬಂಧ ಪೊಲೀಸ್ ಠಾಣೆ ಜೊತೆಗೆ ಪರಿಸರ ಇಲಾಖೆಗೆ ಪತ್ರ ಬರೆಯಲಾಗಿದ್ದು, ಶೀಘ್ರವೇ ಕಿಡಿಗೇಡಿಗಳ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಹೋಂ ಸ್ಟೇ ಮತ್ತು ರೆಸಾರ್ಟ್ ಗಳಿಂದ ತ್ಯಾಜ್ಯ ಹಾಗೂ ಮಾನವ ಮಲವನ್ನು ಕಬಿನಿ ಹಿನ್ನೀರಿಗೆ ಹರಿಯಬಿಡಲಾಗುತ್ತಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದು ಸತ್ಯಕ್ಕೆ ದೂರವಾದದ್ದು. ತ್ಯಾಜ್ಯವನ್ನು ತಂದು ಸುರಿದಿರುವುದು ನಿಜ. ಆದರೆ ಅದು ಕಬಿನಿ ಹಿನ್ನೀರನ್ನು ಸೇರಿಲ್ಲ. ಕೇವಲ 20 ಮೀಟರ್ ನಷ್ಟೇ ದೂರ ಹರಿದಿದೆಯಷ್ಟೆ, ತ್ಯಾಜ್ಯ ಸುರಿದಿರುವ ಸ್ಥಳಕ್ಕೂ, ಕಬಿನಿ ನೀರು ಇರುವ ಸ್ಥಳಕ್ಕೂ ಅಂದಾಜು 100 ಮೀಟರ್ ದೂರ ಇದೆ. ಹೀಗಾಗಿ ಸುಳ್ಳು ಸುದ್ದಿ ಹಬ್ಬಿಸಿ, ಜನರಲ್ಲಿ ಆತಂಕ ಸೃಷ್ಟಿಸಬಾರದು ಎಂದು ರಂಗಯ್ಯ ಮನವಿ ಮಾಡಿದರು.

