ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜ್ ಘೋಷಣೆ | ಸಚಿವ ಶಿವಾನಂದ ಪಾಟೀಲ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಧೀರ್ಘಾವಧಿ ಮುಖ್ಯಮಂತ್ರಿ ಎಂಬ ದಾಖಲೆಯನ್ನು ಬರೆದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಿಜಯಪುರ ಜಿಲ್ಲೆಗೆ ಬರುವ ಮುನ್ನವೇ ಸರ್ಕಾರಿ ವೈದ್ಯಕೀಯ ಕಾಲೇಜ್ ಘೋಷಣೆ ಮಾಡುವ ಮೂಲಕ ಅಪೂರ್ವ ಕೊಡುಗೆ ನೀಡಿದ್ದಾರೆ. ವಿವಿಧ ಸಂಘಟನೆಗಳ ಹೋರಾಟ ಹಾಗೂ ಜನಪ್ರತಿನಿಧಿಗಳ ಮನವಿಗೆ ಮನ್ನಣೆ ನೀಡಿದ್ದಾರೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ಗುರುವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಮೆಡಿಕಲ್ ಕಾಲೇಜ್‌ಗಾಗಿ ಅನೇಕ ಸಂಘಟನೆಗಳು ಹೋರಾಟ ಮಾಡಿದ್ದವು. ಜನಪ್ರತಿನಿಧಿಗಳಾದ ನಾವುಗಳು ಸಹ ಈ ಬಗ್ಗೆ ಮನವಿ ಮಾಡಿಕೊಂಡಿದ್ದೆವು, ಈ ಎಲ್ಲ ಮನವಿಗೆ ಮುಖ್ಯಮಂತ್ರಿಗಳು ಮನ್ನಣೆ ನೀಡಿದ್ದಾರೆ. ನಾಳೆಯೂ ಇನ್ನೊಮ್ಮೆ ಈ ಬಗ್ಗೆ ಪುನರುಚ್ಚರಿಸಬಹುದು. ಯಾರು ಈ ಬಗ್ಗೆ ಹೋರಾಟ ಮಾಡಿದ್ದಾರೋ ಅವರಿಗೆ ಈ ಕ್ರೆಡಿಟ್ ಹೋಗಲಿ ಎಂದರು.
ವಿಜಯಪುರ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಅನುದಾನದ ಅಡಿಯಲ್ಲಿ ಇಲ್ಲಿ ಮೆಡಿಕಲ್ ಕಾಲೇಜ್ ನಿರ್ಮಾಣವಾಗುತ್ತದೆ. ಉಳಿದ ಜಿಲ್ಲೆಗಳಲ್ಲಿ ೫೦೦, ಇನ್ನೂ ಕೆಲವು ಕಡೆ ೭೦೦ ಕೋಟಿ ರೂ. ಅನುದಾನ ಬೇಕಾಗಬಹುದು. ಆದರೆ ವಿಜಯಪುರದಲ್ಲಿ ೧೫೦ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದರೆ ಇಲ್ಲಿ ಮೆಡಿಕಲ್ ಕಾಲೇಜ್ ನಿರ್ಮಾಣಗೊಳ್ಳಲಿದೆ. ಕೇವಲ ಆಡಿಟೋರಿಯಂ, ಎಕ್ಸಾಮಿನೇಷನ್ ಹಾಲ್ ಸೇರಿದಂತೆ ವಿವಿಧ ಪೂರಕ ಸೌಲಭ್ಯ ಕಲ್ಪಿಸಿದರೆ ಸಾಕು ಕೆಲವೇ ಕೋಟಿ ರೂ. ಅನುದಾನದಲ್ಲಿ ಮೆಡಿಕಲ್ ಕಾಲೇಜ್ ನಿರ್ಮಾಣಗೊಳ್ಳಲಿದೆ. ಹೀಗಾಗಿ ಸರ್ಕಾರಕ್ಕೂ ಯಾವ ರೀತಿಯ ಹೆಚ್ಚುವರಿ ಹೊರೆ ಆಗುವುದಿಲ್ಲ ಎಂದರು.
ಈ ಹಿಂದೆ ನಾನು ಆರೋಗ್ಯ ಸಚಿವನಾಗಿದ್ದ ವೇಳೆ ಟ್ರಾಮಾ ಸೆಂಟರ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿರುವೆ. ಕ್ಯಾನ್ಸರ್ ಆಸ್ಪತ್ರೆ ಸಹ ಘೋಷಣೆ ಮಾಡಿಸಿದ್ದೆನೆ. ಈ ಆಸ್ಪತ್ರೆಯೂ ಪ್ರಾರಂಭವಾದರೆ ಅನುಕೂಲ, ಪ್ರಸ್ತುತ ೧೫೦ ರಿಂದ ಮುಂದೆ ೨೫೦ ಸೀಟುಗಳ ಇಂಟೇಕ್ ಸಾಧ್ಯವಾಗುವ ಮೆಡಿಕಲ್ ಕಾಲೇಜ್ ನಿರ್ಮಾಣಕ್ಕೆ ವಿಜಯಪುರ ಜಿಲ್ಲಾ ಆಸ್ಪತ್ರೆ ಸರ್ವ ಸನ್ನಧ್ಧವಾಗಿದೆ ಎಂದು ವಿವರಿಸಿದರು.
ಈ ಸರ್ಕಾರಿ ಮೆಡಿಕಲ್ ಕಾಲೇಜ್ ನಿರ್ಮಾಣಗೊಂಡರೆ ಅನೇಕ ಆರೋಗ್ಯ ಸೌಲಭ್ಯಗಳು ಸುಲಭವಾಗಿ ದೊರಕಲು ಸಾಧ್ಯವಾಗಲಿದ್ದು, ಮೀರಜ್, ಸಾಂಗ್ಲಿ, ಕೊಲ್ಹಾಪೂರ, ಬೆಂಗಳೂರು ಮೊದಲಾದ ಕಡೆಗಳಿಗೆ ಹೋಗುವ ಪ್ರಮೇಯ ತಪ್ಪುತ್ತದೆ ಎಂಬ ಆಶಯ ವ್ಯಕ್ತಪಡಿಸಿದರು.

ಹೋರಾಟಗಾರರ ಕ್ಷಮೆ ಕೇಳುವೆ
ಸರ್ಕಾರಿ ಮೆಡಿಕಲ್ ಕಾಲೇಜ್ ಹೋರಾಟಗಾರರಿಗೆ ಅಸಭ್ಯ ವರ್ತನೆ, ಅವರೊಂದಿಗೆ ದುರ್ವರ್ತನೆಯಾಗಿದ್ದರೆ ನಾನು ಅವರನ್ನು ಕ್ಷಮೆ ಕೋರುವೆ. ಹೋರಾಟ ಎಲ್ಲರ ಹಕ್ಕು, ನಾನು ಇಂದಿಗೂ ಸಹ ಹೋರಾಟಗಾರರ ಜೊತೆಗಿದ್ದೇನೆ. ನನ್ನ ಮನಸ್ಸು ಅವರೊಂದಿಗೆ ಇದೆ. ಅವರ ಮೇಲೆ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವಂತೆ ನಾನು ಸರ್ಕಾರಕ್ಕೆ ಒತ್ತಾಯಿಸುವೆ ಎಂದು ಶಿವಾನಂದ ಪಾಟೀಲ ಹೇಳಿದರದೀರ್ಘಾವಧಿ

