ಉದಯರಶ್ಮಿ ದಿನಪತ್ರಿಕೆ
ಇಂಡಿ: ವಿದ್ಯಾರ್ಥಿಗಳು ಶಿಸ್ತು, ಸಮಯಪ್ರಜ್ಞೆ, ನಿರಂತರ ಅಧ್ಯಯನ, ಶೃದ್ಧೆ, ಕಠಿಣ ಪರಿಶ್ರಮ ರೂಢಿಸಿಕೊಂಡಾಗ ತಮ್ಮ ಬದುಕಿನ ಗುರಿ ತಲುಪಲು ಸಾಧ್ಯ. ಪಾಲಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಸದಾ ಮುತುವರ್ಜಿ ವಹಿಸಬೇಕು ಎಂದು ಶಿಕ್ಷಕ, ಸಾಹಿತಿ ಸಂತೋಷ ಬಂಡೆ ಹೇಳಿದರು.
ಸೋಮವಾರದಂದು ನಗರದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡ ‘ಪಾಲಕರ ವಿಶೇಷ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಾಲಕರ ಸಭೆಯು ಪಾಲಕ-ಶಿಕ್ಷಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಯ ಶೈಕ್ಷಣಿಕ, ವೃತ್ತಿಯ, ಜ್ಞಾನಾತ್ಮಕ, ಕೌಶಲ್ಯಯುತ ಪ್ರಗತಿ ಮನಗಾಣಲು ಪೂರಕವಾಗಿದೆ. ವಿದ್ಯಾರ್ಥಿಗಳ ವರ್ತನೆ, ನಡತೆಯನ್ನು ಸರಿ ಮಾಡಿ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಪಾಲಕರ ಜವಾಬ್ದಾರಿ ಮುಖ್ಯವಾಗಿದೆ ಎಂದು ಹೇಳಿದರು.
ಅತಿಯಾದ ಮೊಬೈಲ್ ಬಳಕೆಯಲ್ಲಿ ಇಂದಿನ ವಿದ್ಯಾರ್ಥಿಗಳು ಬದುಕಿನ ಭವಿಷ್ಯದ ಗುರಿ ಮರೆಯಬಾರದು. ತಂದೆ-ತಾಯಿಗಳ ಪರಿಶ್ರಮದ ದುಡಿಮೆ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬೇಕು. ಶಿಕ್ಷಕರ ಸಕಾಲಿಕ ಮಾರ್ಗದರ್ಶನ ಪಡೆದು, ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಚಾರ್ಯ ಪರಶುರಾಮ ರಜನಿಕರ ಮಾತನಾಡಿ, ವಿದ್ಯಾರ್ಥಿಗಳು ಆಸಕ್ತಿಯಿಂದ ಅಭ್ಯಾಸದಲ್ಲಿ ತೊಡಗಬೇಕು. ಶಿಸ್ತನ್ನು ಮೈಗೂಢಿಸಿಕೊಳ್ಳುವವರು ಮಾತ್ರ ಉತ್ತಮ ಭವಿಷ್ಯ ಪಡೆಯುತ್ತಾರೆ. ವಿದ್ಯಾರ್ಥಿ ಜೀವನದಲ್ಲಿ ಎಡವಿದರೆ ಮುಂದಿನ ಭವಿಷ್ಯ ಕಷ್ಟವಾಗಲಿದೆ ಎಂದರು.
ಉಪನ್ಯಾಸಕರಾದ ಗಂಗಾಧರ ಭಾಗೆಳ್ಳಿ, ರಮೇಶ ಮೇತ್ರಿ, ಸಂತೋಷ ಹಟ್ಟಿ, ಭಾಗ್ಯಜ್ಯೋತಿ, ರವಿ ಹಾದಿಮನಿ, ರೇಷ್ಮಾ ಹಾಗೂ ಪಾಲಕರಾದ ಬಸವರಾಜ ಕೋಷ್ಠಿ, ಯಲ್ಲಪ್ಪ ಕಲ್ಮನಿ, ಶಂಕರ ಬಿಸೆ ಸೇರಿದಂತೆ ಅನೇಕ ತಾಯಂದಿರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಭೀಮಾಶಂಕರ ಶಿವೂರ ಕಾರ್ಯಕ್ರಮ ನಿರ್ವಹಿಸಿದರು.

