ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಆಗ್ರಹಿಸಿ ವಿಜಯಪುರದಲ್ಲಿ ನಡೆಸುತ್ತಿರುವ ಹೋರಾಟವನ್ನು ೧೦೬ ನೇ ದಿನ ಕರ್ನಾಟಕ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತವು ಪೋಲಿಸ್ ದೌರ್ಜನ್ಯದ ಮೂಲಕ ಸದೆ ಬಡೆಯಲು ಪ್ರಯತ್ನಿಸುವುದು ತೀವ್ರ ಖಂಡನಾರ್ಹ ಮತ್ತು ಸರಕಾರಕ್ಕೆ ನಾಚಿಕೆ ಉಂಟು ಮಾಡುವ ಸಂಗತಿಯಾಗಿದೆ. ಸುಳ್ಳು ಪ್ರಕರಣಗಳನ್ನು ದಾಖಲಿಸಿ ೬ ಜನ ಹೋರಾಟಗಾರರನ್ನು ಜೈಲಿಗಟ್ಟಿರುವ ಕ್ರಮವನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ತೀವ್ರವಾಗಿ ಖಂಡಿಸುತ್ತದೆ ಮತ್ತು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಹಾಗು ಉಳಿದ ೨೧ ಜನ ಹೋರಾಟಗಾರರ ಮೇಲೆ ಹಾಕಿರುವ ಸುಳ್ಳು ಪ್ರಕರಣಗಳನ್ನೂ ಕೂಡಲೇ ಹಿಂಪಡೆಯಬೇಕು ಎಂದು ಸರ್ಕಾರಕ್ಕೆ ಕೆ ಆರ್ ಎಸ್ ಪಕ್ಷವು ಆಗ್ರಹಿಸಿದೆ.
ಈ ವೇಳೆ ಮಾತನಾಡಿದ ಕೆಆರೆಸ್ ಪಕ್ಷದ ಮುಖಂಡರು, ರಾಜ್ಯ ಸರ್ಕಾರ ಪೋಲಿಸ್ ಬಲದಿಂದ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಆದರೆ ಯಾವುದೇ ಕಾರಣಕ್ಕೂ ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಣೆಯಾಗುವವರೆಗೂ ಹೋರಾಟ ನಿಲ್ಲಲ್ಲ. ಹೋರಾಟದ ಸ್ವರೂಪ ಬದಲಾಗುತ್ತದೆ ಆದರೆ ಹೋರಾಟ ನಿರಂತರವಾಗಿರುತ್ತದೆ. ಮುಖ್ಯಮಂತ್ರಿಗಳು ವಿಜಯಪುರಕ್ಕೆ ಬಂದಾಗ ಒಂಬತ್ತನೇ ತಾರೀಖಿಗೆ ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಿಸಬೇಕು ಮತ್ತು ಹೋರಾಟಗಾರರ ಮೇಲಿನ ಎಲ್ಲಾ ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಎರಲ್ಲರನ್ನೂ ಒಳಗೊಂಡು ಯಾರ ವಿರುದ್ದವೂ ಅಲ್ಲದ, ಯಾರ ಪರವೂ ಅಲ್ಲದ ಜಿಲ್ಲೆಯ ಪರವಾದ ಹೋರಾಟ ಇದಾಗಿದೆ. ಜಿಲ್ಲೆಯ ಬಹುತೇಕ ಎಲ್ಲಾ ಸಚಿವರು, ಶಾಸಕರುಗಳು, ರಾಜಕಾರಣಿಗಳು ಈ ಹೋರಾಟ ಬೆಂಬಿಲಿಸಿದ್ದಾರೆ. ೧೦೬ ದಿನಗಳಿಂದ ಶಾಂತಿಯುತವಾಗಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ಧರಣಿ ನಡೆಸುತ್ತಿರುವ ಹೋರಾಟಗಾರರಿಗೆ ಸರ್ಕಾರ ಸ್ಪಂದಿಸದೆ ಇರುವುದರಿಂದ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಮನೆಯ ಮುಂದೆ ಧರಣಿ ಕೂಡುವುದರ ಭಾಗವಾಗಿ ಮೊದಲು ಜಿಲ್ಲಾ ಉಸ್ತುವಾರಿ ಸಚಿವರ ಮನೆಯ ಮುಂದೆ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು ಎಂದರು.
ಆರಂಭದಲ್ಲಿ ಆರುಜನ ಹೋರಾಟಗಾರರಾದ ಅರವಿಂದ ಕುಲಕರ್ಣಿ, ಬಿ.ಭಗವಾನರೆಡ್ಡಿ, ಅನಿಲ ಹೊಸಮನಿ, ಭೋಗೇಶ ಸೊಲ್ಲಾಪುರ, ಸಿದ್ರಾಮ ಹಳ್ಳೂರ, ಸಂಗನ ಬಸವ ಸ್ವಾಮಿಜಿ ಇವರನ್ನು ಬಂಧಿಸಿ ಜೈಲಿಗಟ್ಟಿದರು. ಉಳಿದ ೨೧ ಜನರನ್ನು ರಾತ್ರಿಯೇ ಬಿಡುಗಡೆ ಗೊಳಿಸಿದರು. ಆದರೆ ತಡ ರಾತ್ರಿ ಮತ್ತೆ ಇನ್ನಾರದೋ ಕುಮ್ಮಕ್ಕಿನಿಂದಲೋ ಅಥವಾ ಕಾಣದ ಕೈಗಳ ಕುತಂತ್ರದಿಂದಾಗಿ ಫೋಲಿಸರು ಉಳಿದ ೨೧ ಜನ ಹೋರಾಟಗಾರರ ಮೇಲೂ ಕೊಲೆಗೆ ಸಂಚು, ಜೀವ ಬೆದರಿಕೆ, ಅಕ್ರಮ ಕೂಟ, ಸರ್ಕಾರಿ ಕೆಲಸಕ್ಕೆ ಅಡೆತಡೆ ಇಲ್ಲಸಲ್ಲದ ಆರೋಪದಡಿ ಸುಳ್ಳು ಪ್ರಕರಣವನ್ನು ದಾಖಲಿಸಿದರು. ಅಲ್ಲದೇ ಅಂದೇ ಮಧ್ಯ ರಾತ್ರಿ ನೂರಾರು ಪೋಲಿಸರು ಅಂಬೇಡ್ಕರ್ ವೃತ್ತದಲ್ಲಿನ ಧರಣಿ ಸ್ಥಳಕ್ಕೆ ಬಂದು ಮಲಗಿರುವ ಹೋರಾಟಗಾರರನ್ನು ಗದರಿಸಿ, ಅವಾಚ್ಯವಾಗಿ ಬೈದು, ಹೊರತಳ್ಳಿ ಹೋರಾಟದ ಪೆಂಡಾಲ್ ಅನ್ನು ಕಿತ್ತು ಹಾಕಿದ್ದಾರೆ. ಇದು ಜನರ ಮೂಲಭೂತ ಹಕ್ಕಾದ ‘ಪ್ರತಿಭಟನೆಯ ಹಕ್ಕಿ’ ನ ಉಲ್ಲಂಘನೆಯಾಗಿದೆ. ಪ್ರಜಾತಾಂತ್ರಿಕ ಹಕ್ಕುಗಳ ಮೇಲೆ ಸ್ವತ: ರಾಜ್ಯ ಸರ್ಕಾರವೇ ದಾಳಿ ಮಾಡಿದಂತಾಗಿದೆ. ಇದೆಲ್ಲ ನೋಡಿದರೆ ಇದು ಕೇವಲ ಪೋಲಿಸ್ ಇಲಾಖೆಯ ಕೆಲಸವಲ್ಲ. ಇದರ ಹಿಂದೆ ರಾಜಕಾರಣಿಗಳ ಮತ್ತು ಕೆಲವು ಕಾಣದ ಕೈಗಳ ಕುತಂತ್ರವಡಗಿದೆ ಎಂದು ಜಿಲ್ಲೆಯ ಜನತೆ ಅರಿತುಕೊಂಡಿದೆ ಎಂದರು.
ಕೂಡಲೇ ಸರ್ಕಾರ ಪೆಂಡಾಲ್ ತಂದು ಅಂಬೇಡ್ಕರ್ ವೃತ್ತದಲ್ಲಿ ಹಾಕಿ ಹೋರಾಟ ಮುಂದುವರೆಸಲು ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ, ದುರ್ಗಪ್ಪ ಬೂದಿಹಾಳ, ವಿಕ್ರಮ ವಾಘಮೋರೆ, ಸೀನು ಹಿಪ್ಪರಗಿ, ರಾಕೇಶ ಇಂಗಳಗಿ, ಪ್ರವೀಣ ಕನಸೇ, ಸುರೇಂದ್ರ ಕುನಸಲೇ, ನಬಿರಸೂಲ ಹುಣಶ್ಯಾಳ, ಹಮಿದ ಇನಾಮದಾರ, ಸಿದ್ದರಾಯ ಬಿರಾದಾರ, ಅಣ್ಣಾ ಪೂಜಾರಿ, ಗಣಪತಿ ರಾಠೋಡ, ಮಲ್ಲಿಕಾರ್ಜುನ ಬಿರಾದಾರ ಇತರರು ಉಪಸ್ಥಿತರಿದ್ದರು.

