ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ರಾಜ್ಯ ಸಂಘದ ಹಿರಿಯ ಉಪಾಧ್ಯಕ್ಷರು ಹಾಗೂ ಜಿಲ್ಲಾ ಅಧ್ಯಕ್ಷ ಸುರೇಶ ಶೇಡಶ್ಯಾಳ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಕಾರ್ಯಕಾರಿಣಿ ಸಭೆ ನಡೆಯಿತು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ 2026ನೇ ಸಾಲಿನ ಕ್ಯಾಲೆಂಡರ್ ಅನ್ನು ಎಲ್ಲಾ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಸಂಯುಕ್ತವಾಗಿ ಬಿಡುಗಡೆ ಮಾಡಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಸುರೇಶ ಶೇಡಶ್ಯಾಳ ಸರಕಾರಿ ನೌಕರರ ಸಂಘದ ಮೂಲಕ ನೌಕರರ ಹಿತಕ್ಕಾಗಿ ಅನೇಕ ಮಹತ್ವದ ಸಾಧನೆಗಳು ಸಾಧ್ಯವಾಗಿವೆ ಎಂದು ತಿಳಿಸಿದರು.
ಕೆಜಿಐಡಿ ಸಂಪೂರ್ಣ ಗಣಕೀಕರಣ, ಆರೋಗ್ಯ ಸಂಜೀವಿನಿ (ಕೆಎಎಸ್ಎಸ್) ಯೋಜನೆಯ ಪರಿಣಾಮಕಾರಿ ಅನುಷ್ಠಾನ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜೆಡಿಎಂ ಸಮಿತಿ ರಚನೆ, ಮಹಿಳಾ ನೌಕರರಿಗೆ ಋತುಚಕ್ರ ರಜೆ ಸೇರಿದಂತೆ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ನಮ್ಮ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಅವರ ನೌಕರಪರ ನಾಯಕತ್ವದ ಫಲವಾಗಿ ಸಂಘದಿಂದ ನಿರಂತರವಾಗಿ ನಡೆಯುತ್ತಿದೆ ಎಂದರು. ನೌಕರರಿಗೆ ಯಾವುದೇ ಸಮಸ್ಯೆಗಳಿದ್ದರೂ ಸಂಘಟನೆಯ ಗಮನಕ್ಕೆ ತಂದಲ್ಲಿ, ಸಂಘದ ಮೂಲಕ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಸಭೆಯ ಪ್ರಸ್ತಾವಿಕ ಭಾಷಣದಲ್ಲಿ ಜಿಲ್ಲಾ ಕಾರ್ಯದರ್ಶಿ ಶಿವರಾಜ್ ಬಿರಾದಾರ ಮಾತನಾಡಿ, ಮಹಿಳಾ ನೌಕರರಿಗೆ ಆರು ತಿಂಗಳ ಶಿಶುಪಾಲನಾ ರಜೆ, ಡಯಾಲಿಸಿಸ್ ಚಿಕಿತ್ಸೆ ಪಡೆಯುವ ನೌಕರರಿಗೆ ಆರು ತಿಂಗಳ ಸಾಂದರ್ಭಿಕ ರಜೆ, ನೌಕರರ ದಿನಾಚರಣೆಗೆ ಸಂಬಂಧಿಸಿದ ಸರ್ಕಾರಿ ಆದೇಶ, ಬೆಂಗಳೂರು ಪ್ರವಾಸದ ನೌಕರರಿಗೆ ಅತ್ಯಾಧುನಿಕ ವಸತಿಗೃಹ ನಿರ್ಮಾಣ ಸೇರಿದಂತೆ ಹಲವಾರು ಐತಿಹಾಸಿಕ ಸಾಧನೆಗಳು ನಮ್ಮ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಕ್ಷರಿ ಅವರ ನೌಕರಪರ ನಾಯಕತ್ವದ ಫಲವಾಗಿದೆ. ಅವರು ನೌಕರರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಆಯೋಜನೆ ಹಾಗೂ ನೌಕರರ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು.
ಈ ಸಭೆಯಲ್ಲಿ ಖಜಾಂಚಿ ಸಯ್ಯದ್ ಜುಬೇರ ಕೆರೂರ್, ರಾಜ್ಯ ಪರಿಷತ್ ಸದಸ್ಯ ವಿಜಯಕುಮಾರ್ ಹತ್ತಿ, ಗೌರವಾಧ್ಯಕ್ಷ ವಿಶ್ವನಾಥ ಬೆಳ್ಳನವರ, ಕಾರ್ಯಾಧ್ಯಕ್ಷ ಪ್ರಕಾಶ ಗೊಂಗಡಿ, ರಾಜ್ಯ ಸಂಘದ ಉಪಾಧ್ಯಕ್ಷ ಶಿವಾನಂದ ಮಂಗಾನವರ, ಕ್ರೀಡಾ ಕಾರ್ಯದರ್ಶಿ ನಿಜು ಮೇಲಿನಕೇರಿ, ಸಂಘದ ಉಪಾಧ್ಯಕ್ಷರು, ಸಹ ಕಾರ್ಯದರ್ಶಿಗಳು, ಸಂಘಟನಾ ಕಾರ್ಯದರ್ಶಿಗಳು, ಕ್ರೀಡಾ ಕಾರ್ಯದರ್ಶಿಗಳು, ಸರ್ವ ಸದಸ್ಯರು, ತಾಲ್ಲೂಕ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.

