ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಪಾಲಕ ಪೋಷಕರು ಶಿಕ್ಷಕರೊಂದಿಗೆ ಕೈಜೋಡಿಸಿದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದ್ದು ವಿದ್ಯಾರ್ಥಿಗಳು ಪ್ರಾಮಾಣಿಕತೆಯಿಂದ ಅಭ್ಯಾಸ ಮಾಡಿ ತಂದೆ ತಾಯಿಗಳ, ಕಲಿಸಿದ ಶಿಕ್ಷಕರ ಹಾಗೂ ಗ್ರಾಮದ ಹೆಸರು ತರುವ ಕೆಲಸ ಮಾಡಬೇಕು ಎಂದು ಶಿಕ್ಷಕ ಸಂಗನಬಸವ ಉಟಗಿ ಹೇಳಿದರು.
ಅವರು ಕುಂಬಾರಹಳ್ಳದ ಸರಕಾರಿ ಪ್ರೌಢಶಾಲೆಯಲ್ಲಿ ಜರುಗಿದ ಪಾಲಕ ಪೋಷಕ ಸಭೆ ಮತ್ತು ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ ಸರ್ಕಾರ ಉತ್ತೀರ್ಣತೆಯ ಪ್ರಮಾಣವನ್ನು 35 ರಿಂದ 33ಕ್ಕೆ ಇಳಿಸಿದ್ದು ವಿದ್ಯಾರ್ಥಿಗಳು ಶ್ರದ್ಧೆಯಿಂದ ವಿದ್ಯಾರ್ಜನೆ ಮಾಡಬೇಕು. ಸರಕಾರ ಮಕ್ಕಳಿಗೆ ನೀಡುವ ಸೌಲಭ್ಯಗಳ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
ಅಕ್ಷರದ ಅವ್ವ ಸಾವಿತ್ರಿಬಾಯಿ ಪುಲೆ ಅವರು ಭಾರತದ ಅಜ್ಞಾನವನ್ನು ಹೋಗಲಾಡಿಸಲು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಲು ನಿಸ್ವಾರ್ಥವಾಗಿ ದುಡಿದು ನಂತರ ಜನ ಸೇವೆ ಮಾಡುತ್ತಾ ಜನರಿಗಾಗಿ ಮಡಿಲು ಅಮರರಾಗಿದ್ದಾರೆ. ಅವರ ಆದರ್ಶವನ್ನು ಮಕ್ಕಳೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಎಸ್ ಡಿ ಎಂ ಸಿ ಸದಸ್ಯೆ ಪದ್ಮ ಹುದಲಿ ಮಾತನಾಡಿ, ನಾವೆಲ್ಲರೂ ಸೇರಿ ಮಕ್ಕಳ ಭವಿಷ್ಯವನ್ನು ನಿರ್ಮಿಸಬೇಕು. ಮಕ್ಕಳು ಒಳ್ಳೆ ಕಾರ್ಯಗಳನ್ನು ಮಾಡುತ್ತಾ ಸಮಾಜದಲ್ಲಿ ಗೌರವಯುತವಾಗಿ ಬದುಕಬೇಕು ಎಂದು ಹೇಳಿದರು.
ಶಿಕ್ಷಕಿ ಮಂಜುಳಾ ಕಡಕೋಳ ಮಾತನಾಡಿ ವಿದ್ಯಾರ್ಥಿಗಳು ಅಭ್ಯಾಸದೊಂದಿಗೆ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು. ಸದೃಢ ದೇಹದಲ್ಲಿಸದೃಢ ಮನಸ್ಸು ನೆಲೆಸಿರುವಂತೆ ಏಕಾಗ್ರತೆಯಿಂದ ಅಭ್ಯಾಸದ ಕಡೆ ಗಮನಹರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪ್ರಭಾರಿ ಮುಖ್ಯ ಶಿಕ್ಷಕಿ ಶಾರದಾ ಮಠ ಮಾತನಾಡಿ ಜನವರಿ 5 ರಿಂದ ಜರುಗುವ ಮೊದಲ ಪೂರ್ವ ಸಿದ್ಧತಾ ಪರೀಕ್ಷೆಯ ಕುರಿತು ಸರ್ಕಾರದ ರೂಪರೇಷೆಗಳನ್ನು ಸಭೆಯ ಗಮನಕ್ಕೆ ತಂದರು. ಎಲ್ಲ ಶಿಕ್ಷಕರು ವಿಷಯದ ಬೋಧನೆಯನ್ನು ಪೂರ್ಣಗೊಳಿಸಿದ್ದು ವಿದ್ಯಾರ್ಥಿಗಳು ಕಠಿಣವೆನಿಸುವ ವಿಷಯಗಳನ್ನು ಶಿಕ್ಷಕರೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಮಾಯವ್ವ ನಾಯಕ್, ಸದಸ್ಯೆ ಶೈಲಾ ಮಾಳಿ, ಮುತ್ತವ್ವ ಹಿರೇಕುರುಬರ, ಶಿಕ್ಷಕರಾದ ಸಂಜೀವ ಝಂಬುರೆ, ಶಕುಂತಲಾ ಬಿರಾದಾರ್ ಹಾಗೂ ಪಾಲಕರು ಪೋಷಕರು ಉಪಸ್ಥಿತರಿದ್ದರು.
ಸಹನಾ ಕಡಪಟ್ಟಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕಿ ಸವಿತಾ ಬೆನಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಆಶಿಕಾ ಬಾನು ಮೋಮಿನ್ ವಂದಿಸಿದರು.

