ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ನಿತ್ಯ ಸಮಾಜದಲ್ಲಿ ನಾವು ಉತ್ತಮ ಬದುಕು ಕಂಡುಕೊಳ್ಳಬೇಕಾದರೆ ಸಂಸ್ಕೃತಿ, ಸಂಸ್ಕಾರ ಜೀವನದಲ್ಲಿಅಳವಡಿಸಿಕೊಳ್ಳುವ ಜೊತೆಗೆ ನಮ್ಮ ಮಕ್ಕಳಿಗೂ ಕಲಿಸಬೇಕೆಂದು ವಿಶ್ರಾಂತ ಪ್ರಾಂಶುಪಾಲ ಡಾ.ಎಸ್.ಬಿ.ಸುಗ್ಗಮದ ಹೇಳಿದರು.
ಸ್ಥಳಿಯ ವಿರಕ್ತಮಠದ ಚನ್ನಬಸವೇಶ್ವರ ಸಭಾ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಭು ಮಹಾಸ್ವಾಮಿಗಳ ೫೫ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಬೆಳಗುತ್ತಿರುವ ದೀಪಗಳನ್ನು ಆರಿಸಿ ಜನ್ಮದಿನ ಆಚರಿಸುವ ಸಂಸ್ಕತಿ ಪಾಶ್ಚಾತರದ್ದು. ಇನ್ನೊಬ್ಬರ ಜೀವನದಲ್ಲಿ ಬೆಳಗುವ ದೀಪವಾಗುವ ಕಾರ್ಯ ಮಾಡುವುದು ಭಾರತೀಯ ಸಂಸ್ಕೃತಿ. ನಮ್ಮ ಪರಂಪರೆಯನ್ನು ನಮ್ಮ ಮಕ್ಕಳಿಗೆ ಕಲಿಸಬೇಕಾಗಿದೆ ಆ ಕಾರಣಕ್ಕ ಶ್ರೀಮಠದ ಭಕ್ತ ಮಂಡಳಿ ಈ ಜನ್ಮ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ನಿವೃತ್ತ ಪ್ರಾದ್ಯಾಪಕ ಡಾ. ವಿರುಪಾಕ್ಷ ಚಿಮ್ಮಡ, ಗ್ರಾ.ಪಂ ಮಾಜಿ ಅಧ್ಯಕ್ಷ ಪರಪ್ಪಾ ಪಾಲಭಾವಿ, ಪ್ರವೀಣ ಪೂಜಾರಿ ಮಾತನಾಡಿದರು.
ಸಮಾರಂಭದ ಸಾನಿಧ್ಯವಹಿಸಿದ ಪ್ರಭು ಮಹಾಸ್ವಾಮಿಗಳು ಗ್ರಾಮದ ವಿವಿಧ ಸಮುದಾಯಗಳ ಪ್ರಮುಖರಿಂದ ಗೌರವ ಸ್ವೀಕರಿಸಿ ಕಾಣಿಕೆಯಾಗಿ ಸ್ವೀಕರಿಸಿದ ಕಲಿಕಾ ಸಾಮಗ್ರಿಗಳನ್ನು ಶಾಲೆಯ ವಿದ್ಯಾರ್ಥಿಗಳಿಗೆ ವಿತರಿಸಿದರು.
ಶಾಸಕ ಸಿದ್ದು ಸವದಿ, ಕಾಂಗ್ರೆಸ್ ಧುರೀಣ ಸಿದ್ದು ಕೊಣ್ಣೂರ, ಜಿ.ಪಂ. ಮಾಜಿ ಸದಸ್ಯ ಬಾಬುಗೌಡ ಪಾಟೀಲ ಜನ್ಮದಿನಾಚರಣೆ ಪ್ರಯುಕ್ತ ಶ್ರೀಗಳನ್ನು ಗೌರವಿಸಿದರು.
ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಪುಂಡಲಿಕಪ್ಪಾ ಪೂಜಾರಿ, ಅಣ್ಣಪ್ಪಗೌಡ ಪಾಟೀಲ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಡಿ.ಕೆ. ನಾಯಕ್, ಸಿಆರ್‌ಪಿ ಶ್ರೀಮತಿ ದ್ರಾಕ್ಷಾಯಿಣಿ ಮಂಡಿ ವೇದಿಕೆಯಲ್ಲಿದ್ದರು ಗ್ರಾಮದ ಪ್ರಮುಖರು, ಮಹಿಳೆಯರು ಸೇರಿದಂತೆ ಸಾವಿರಾರು ಜನ ಭಕ್ತಾಧಿಗಳು ಆಗಮಿಸಿದ್ದರು. ಇದೇ ಸಂಧರ್ಭದಲ್ಲಿ ಗ್ರಾಮದಲ್ಲಿ ಸಾರಾಯಿ ಮುಕ್ತ ಗೊಳಿಸಲು ಸಹಿ ಸಂಗ್ರಹ ಅಭಿಯಾನಕ್ಕೆ ಶ್ರೀಗಳ ಸಹಿ ಪಡೆಯುವ ಮೂಲಕ ಚಾಲನೆಗೊಳಿಸಲಾಯಿತು. ನಂತರ ದಾಸೋಹ ಮಹಾಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು.

