ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ನನ್ನೊಲವಿನ ಕಿರಣಾ,
ಗಿಳಿ ಹಸಿರು ಬಣ್ಣದ ಚೆಂದದ ಕುರ್ತಾ ಅದಕ್ಕೊಪ್ಪುವ ಬಿಳಿ ಬಣ್ಣದ ಪಟಿಯಾಲಾ ಪ್ಯಾಂಟ್, ಕಿವಿಯಲ್ಲಿ ಅತ್ತಿತ್ತ ಓಲಾಡುವ ಹಸಿರು ಬಿಳಿ ಹರಳಿರುವ ಜುಮ್ಕಿ, ತಿದ್ದಿ ತೀಡಿ ಮಾಡಿದಂತಿರುವ ಕಾಮನ ಬಿಲ್ಲಿನಂತಹ ಹುಬ್ಬುಗಳು ಮತ್ತು ಕಣ್ಣಿಗೆ ನಯವಾಗಿ ತೀಡಿದ ಕಾಡಿಗೆ, ತೆಳುವಾಗಿ ಬಣ್ಣ ಲೇಪಿಸಿದ ಅಂದದ ಅಧರಗಳು. ನೀಲಿ ಬಣ್ಣದ ಕಂಗಳು, ನಕ್ಕರೆ ಕೆನ್ನೆಯಲ್ಲಿ ಬೀಳುವ ಗುಳಿಗಳು. ಲೂಸಾಗಿ ಹೆಣೆದ ಜಡೆ. ಐದೂವರೆ ಅಡಿ ಎತ್ತರದ ಸಮತೂಕದ ನಿಂಬೆ ಬಣ್ಣದ ಮೈಕಟ್ಟಿನವಳು. ಸರಿ ಪ್ರಮಾಣದ ಅಂಗ ಸೌಷ್ಟವ ಇರುವ ಸುಂದರಿ ನೀನು, ಮೊದಲ ನೋಟದಲ್ಲೇ ಕಳೆದು ಹೋದೆ.
ಮತ್ತೇರಿಸುವ ಮೋಹಕ ನಗು ಚೆಲ್ಲುವವಳು ಸರಳ ಉಡುಗೆ ತೊಡುಗೆ ಇರುವ ಸಿಂಪಲ್ ಸುಂದರಿ ಎನ್ನಬಹುದು. ಸಿಂಪಲ್ಲಾಗಿದ್ರೂ ಗತ್ತು ಗಾಂಭರ‍್ಯತೆ. ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನಿಸುವ ಚೆಲುವಿ ಯಾರಿರಬಹುದೆಂದು ನಿನ್ನ ಹೆಜ್ಜೆಯನ್ನೇ ಹಿಂಬಾಲಿಸಿದವು ನನ್ನ ಕಾಲುಗಳು. ನಾನು ಮಾಸ್ಟರ್ ಡಿಗ್ರಿ ಮುಗಿಸಿ ಜಾಬ್‌ಗೆ ಹುಡುಕಾಡುತ್ತಿದ್ದ ಸಮಯವದು. ನಿನ್ನ ಕಾಲೇಜು ಪಕ್ಕಕ್ಕೆ ನನ್ನ ರೂಮ್ ಹೀಗಾಗಿ ದಿನವೂ ನಿನ್ನನ್ನು ಕಣ್ತುಂಬಿಸಿಕೊಳ್ಳುವ ಭಾಗ್ಯ ನನ್ನದು. ನೋಡುವವರನ್ನು ಸೂಜಿಗಲ್ಲಿನಂತೆ ಸೆಳೆಯುವ ವ್ಯಕ್ತಿತ್ವ. ಕೆಲ ಪಡ್ಡೆ ಹುಡುಗರಂತೂ ಕಣ್ಣಲ್ಲೇ ನಿನ್ನಂದ ಸ್ಕ್ಯಾನ್ ಮಾಡುತ್ತಿದ್ದರು. ಅದು ಸಾಲದೆಂಬಂತೆ ನಿನ್ನ ಚೆಂದದ ಮೊಗವನ್ನು ಆಸೆ ಕಂಗಳಿಂದ ದಿಟ್ಟಿಸುತ್ತಿದ್ದರು.

ಯೌವ್ವನದ ಹುಚ್ಚು ಹೊಳೆಯಲ್ಲಿ ತೇಲುತ್ತಿದ್ದ ಸಮಯವದು. ತುಂಬಾ ಕಷ್ಟಪಟ್ಟು ನಿನ್ನ ಸ್ನೇಹ ಬೆಳೆಸಿದೆ. ಮುಂಗಾರಿನ ಚುಂಬನಕ್ಕೆ ಇಳೆ ನಳನಳಿಸುತ್ತಿರುವ ಸಮಯದಂತಿತ್ತು. ಕಂಬನಿಯ ಕಡಲಲ್ಲಿ ಮುಳುಗುತ್ತಿದ್ದ ನನ್ನನ್ನು ಒಲವಿಂದ ಕೈ ಹಿಡಿದು ಎತ್ತಿದೆ. ಕಲ್ಲು ಮುಳ್ಳಿನ ಹಾದಿಯನ್ನೂ ಹೂವಿನ ಹೈವೇಯಾಗಿಸಿದ ಚತುರತೆ ನಿನ್ನಲ್ಲಿದೆ. ಕನಸು ನೂರು ನನಸಾಗುವಂತೆ ಹುಮ್ಮುಸ್ಸು ತುಂಬಿದೆ. ಕತ್ತಲು ತುಂಬಿದ ಬಾಳಲಿ ನಂದಾದೀಪ ಹಚ್ಚಿದೆ. ಒಲವಿನ ಮಲ್ಲಿಗೆಯ ಬನಕೆ ನೀರುಣಿಸಿ ಪೋಷಿಸಿದೆ. ಮಾಡುವ ಕೆಲಸದಲ್ಲಿ ಶ್ರದ್ಧೆ ನಿಷ್ಠೆ ಪ್ರಾಮಾಣಿಕತೆ ಶಿಸ್ತು ಎಲ್ಲವೂ ತುಸು ಹೆಚ್ಚೇ ಇರಬೇಕು. ಹಿಡಿದ ಕೆಲಸ ಬಿಡದೇ ಸಾಧಿಸುವ ತ್ರಿವಿಕ್ರಮನಾಗಬೇಕು. ಬದುಕಿನ ಏರಿಳಿತ ದಾರಿ ಸವೆಯುವುದಕ್ಕಿಂತ ಸವಿಯಬೇಕು. ಅಂದುಕೊಂಡಂತಲ್ಲ ಜೀವನವೆಂದು ಹಲವು ಬಾರಿ ಅನಿಸಿದರೂ ಸಾಧಿಸಿ ನಡೆಯಬೇಕು ನಾವೆಣಿಸಿದಂತೆ. ಎಂದೆಲ್ಲ ಬುದ್ಧಿ ಮಾತು ಹೇಳಿ ಮುನ್ನುಗ್ಗಲು ಪ್ರೇರೇಪಿಸಿದೆ.
ಜೀವನ ಸಾಗರದಲ್ಲಿ ನಿನ್ನ ಮೃದುವಾದ ಕೈ ಹಿಡಿದು ಸಂತಸದಿ ಈಜುವ ಆಸೆಯಲ್ಲಿ ಮುಳುಗಿ ಇಹವನ್ನೇ ಮರೆತಿದ್ದೆ. ರಾತ್ರಿ ಕಣ್ಣುಗಳು ಒಂದಕ್ಕೊಂದು ಅಂಟುಕೊಳ್ಳುತ್ತಲೇ ಇರಲಿಲ್ಲ. ಆಗಲೂ ನಿನ್ನದೇ ಧ್ಯಾನ. ಹಾಸಿಗೆ ಮೇಲೆ ಮಲಗಿ ಸೂರು ದಿಟ್ಟಿಸುತ್ತ ನಿನ್ನೊಂದಿಗೆ ಸರಸ ಸಲ್ಲಾಪದ ಸುಂದರ ಕನಸುಗಳನ್ನು ಕಾಣುತ್ತಿದ್ದೆ. ಭೇಟಿಯಾದಾಗೊಮ್ಮೆ ಭವ್ಯ ಭವಿಷ್ಯದ ಕುರಿತು ಏನೇನು ಹೇಗೇಗೆ ಎನ್ನುವ ಪ್ರಶ್ನೆಗಳ ಸರಮಾಲೆಯನ್ನು ಇಡುತ್ತಿದ್ದೆ ನೀನು. ನಿನ್ನ ಕನಸಿನ ಪ್ರಕಾರ ನಾಳೆನೇ ಡ್ಯೂಟಿಗೆ ಜಾಯಿನ್ ಆಗ್ತಿದಿನಿ. ಇಷ್ಟು ದಿನ ಶ್ರಮಪಟ್ಟು ಮಾಡಿದ ಪ್ರಾಜೆಕ್ಟ್ ನೋಡಿ ಸಿಲೆಕ್ಟ್ ಮಾಡಿದಾರೆ ಕಣೆ. ಇನ್ಮುಂದೆ ಯಾವುದಕ್ಕೂ ಕೊರತೆ ಇರಲ್ಲ. ಗಗನಚುಂಬಿ ಕಟ್ಟಡದಲ್ಲಿ ನಿನ್ನ ಅಂದವಾದ ಸಪೂರ ದೇಹಕೆ ಬೆಚ್ಚಗೆ ಚುಂಬಿಸುತ ಇಡೀ ಜೀವನ ಕಳೆಯುವ ನಿರ್ಧಾರ ಮಾಡಿರುವೆ. ಮನದರಸಿಯನ್ನು ಯಾವಾಗ ಕಾಣುವೆನೋ ಎಂಬ ಬಯಕೆ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿದೆ.
ಅದೊಂದು ದಿನ ಕಾಲೇಜಿನ ಫಂಕ್ಷನ್ನಿಗೆ ಅಪರೂಪಕ್ಕೆ ಸೀರೆಯಲ್ಲಿ ನಿನ್ನನ್ನು ನೋಡಿದೆ. ನಾ ನೋಡಿದ ನೋಟಕ್ಕೆ ನೀ ನಾಚಿದ್ದಂತೂ ಸುಳ್ಳಲ್ಲ. ನೇವಿ ಬ್ಲೂ ಮೈಸೂರು ಸಿಲ್ಕ್ ಸೀರೆಗೆ ಮಾವಿನ ಡಿಸೈನ್ ಬಾರ್ಡರ್ ಇತ್ತು. ಮಯೂರಿ ಬಣ್ಣದ ರವಿಕೆ ಅದಕ್ಕೆ ಹೊಂದಿಕೆಯಾಗಿತ್ತು. ಆ ಸೀರೆಯಲ್ಲಿ ಅಪ್ಸರೆಯೇ ಧರೆಗಿಳಿದು ಬಂದಂತೆನಿಸಿತು. ಕೆನ್ನೆ ದಾಟಿ ಬರುವ ಕೂದಲಿಗೆ ಸಣ್ಣ ಕ್ಲಿಪ್‌ನಿಂದ ಬಂಧಿಸಿ ಹಾರಾಡಲು ಬಿಟ್ಟು, ಮೈಸೂರು ಮಲ್ಲಿಗೆ ಮುಡಿಗೆ ಮುಡಿದು ಮಾಲೆಯನ್ನು ಭುಜದ ಮೇಲೆ ಇಳಿ ಬಿಟ್ಟಿದ್ದೆ. ಕಿವಿಗೆ ದೊಡ್ಡ ಗಾಲಿಯಂತಿರುವ ರಿಂಗ್‌ಗಳು, ಕುತ್ತಿಗೆಗೆ ಸಣ್ಣೆಳೆಯ ಬಂಗಾರದ ಚೈನ್ ಅದಕ್ಕೆ ಹೃದಯಾಕಾರದ ಡಾಲರ್ ಇತ್ತು. ಕೈಯಲ್ಲಿ ಅಮೇರಿಕನ್ ತಿಳಿ ಗುಲಾಬಿ ಬಣ್ಣದ ವಜ್ರದುಂಗುರ ಮಿನುಗುತ್ತಿತ್ತು. ಒಂದು ಕೈಯಲ್ಲಿ ಬಂಗಾರದ ಕೈ ಬಳೆಗಳು ಮತ್ತೊಂದು ಕೈಯಲ್ಲಿ ಸೀರೆಗೆ ಹೊಂದಿಕೆಯಾಗುವಂತಹ ಗೋಲ್ಡ್ ಕೇಸ್‌ನ ವಾಚ್. ಈ ಅಪ್ಸರೆ ನನಗೆ ಈ ಕ್ಷಣದಲ್ಲೇ ಹೀಗೆ ಸಿಕ್ಕರೆ ಎಂದು ಹುಚ್ಚು ಮನಸ್ಸು ಲೆಕ್ಕ ಹಾಕುತ್ತಿತ್ತು.
ಅಷ್ಟರಲ್ಲಿ ನೀನು ನಿನ್ನಕ್ಕನ ಪರೀಕ್ಷೆಗೆ ಬೇಕಾದ ನೋಟ್ಸ್ ಕೇಳಿದೆ. ರೂಮಿನಲ್ಲಿದೆ ಕೊಡುವೆ ಬಾ ಎಂದು ಕರೆದಿದ್ದರಿಂದ ನನ್ನೊಂದಿಗೆ ರೂಮಿಗೆ ಕಾಲಿಟ್ಟೆ. ಮೊದಲೇ ಬ್ಯಾಚಲರ್ ರೂಮ್ ಚೇರ್ ಮೇಲೆ ಬಟ್ಟೆ ಅಸ್ತವ್ಯಸ್ತವಿತ್ತು. ನಿನ್ನನ್ನು ಬೆಡ್ ಮೇಲೆ ಕೂರಿಸುತ್ತ ಪಕ್ಕ ಕುಳಿತೆ. ಆ ಸಮಯ ಏನೋ ಒಂದು ರೀತಿ ಹಿತವಾಗಿತ್ತು. ನಿನ್ನ ಬೆರಳುಗಳಲ್ಲಿ ನನ್ನ ಬೆರಳುಗಳ ಸಿಕ್ಕಿಸಿದೆ. ಮತ್ತೊಂದು ಕೈಯಲ್ಲಿ ನಯವಾದ ಕೆನ್ನೆಯ ಸವರಿದೆ. ಇದೇನಿದು ಎಂದು ನೀನು ಹುಸಿ ರೇಗಿದೆ. ನಾನು ನಗುತ್ತ ತೋಳುಗಳಿಂದ ಬಳಸಿ ಹಿಡಿದೆ. ಮೊದಲ ಒಲವ ಸ್ಪರ್ಷವಾಗಿದ್ದರಿಂದ ಇಬ್ಬರ ತನುಗಳು ಸಣ್ಣಗೆ ನಡುಗುತ್ತಿದ್ದವು. ಆ ಕಂಪನದ ನಡುವೆ ಅರಿವಿಗೆ ಬಾರದಂತೆ ಅಧರಗಳು ಒಂದನ್ನೊಂದು ಯಾವಾಗ ಬಂಧಿಸಿಕೊಂಡವೋ ಗೊತ್ತೇ ಆಗಲಿಲ್ಲ. ಎಷ್ಟೋ ಹೊತ್ತಿನ ನಂತರ ಅಧರಗಳು ಸಡಿಲವಾದವು. ಅದೆಲ್ಲ ಅರಿವಿಗೆ ಬಂದ ಮೇಲೆ ನಾಚಿ ನನ್ನ ತೋಳನ್ನು ಹಿಡಿದು ಹರವಾದ ಎದೆಯಲ್ಲಿ ಮುಖವನ್ನು ಹುದುಗಿಸಿದೆ. ಮುಖದಲ್ಲಿ ಸಣ್ಣಗೆ ಭಯ ಆವರಿಸಿತ್ತು.
ಬರುವ ಶುಕ್ರವಾರ ಒಳ್ಳೆಯ ದಿನವೆಂದು ನಿಶ್ಚಿತಾರ್ಥಕ್ಕೆ ಮತ್ತು ಮದುವೆಗೆ ದಿನಾಂಕವನ್ನು ತಿಳಿಸಿದ್ದಾರೆ ಎಂದೆ. ನೀನು ನಾಚುತ್ತಾ ಸೀರೆಯ ನೆರಿಗೆಯ ತುದಿಯನ್ನು ಬಾಯಲ್ಲಿಟ್ಟು ಕಚ್ಚುತ್ತ ಓ! ಹಾಗಾ ಒಳ್ಳೆಯದು. ಮಂಗಳ ಸೂತ್ರ ಕಟ್ಟಿದ ಮೇಲೆ ಮಿಲನೋತ್ಸವ ಮುಂದುವರೆಸೋಣ. ಈಗ ನಿಮ್ಮ ಕಳ್ಳಾಟ ಮತ್ತೆ ಮುಂದುವರಿಯುವುದು ಬೇಡ ಏಳು. ಎಂದು ನನ್ನ ಕಿವಿ ಮೆಲ್ಲಗೆ ಹಿಂಡಿ ಎಬ್ಬಿಸಿದೆ.
ಪ್ರಣಯದ ಅನುಭವ ಪಡೆಯುವ ಹಾತೊರಿಕೆ ಹೆಚ್ಚಾಗುತ್ತಿದೆ. ಸರಸದ ಬೇರೆ ಬೇರೆ ಮಜಲುಗಳ ಪರಿಚಯ ಮಾಡಿಕೊಳ್ಳಲು ಜಾತಕ ಪಕ್ಷಿಯಂತೆ ಕಾಯುತ್ತಿದ್ದೇನೆ. ಕೈಯಲ್ಲಿ ಹಾಲಿನ ಲೋಟ ಹಿಡಿದು ಬರುವ ಗೆಜ್ಜೆ ಸದ್ದು ಕಿವಿಗೆ ಸಮೀಪಿಸಲಿ. ನನ್ನ ಪ್ರಣಯದಾತುರ ನೋಡಿ ‘ನಿಧಾನ ನಿಧಾನ’ ಗೆಳೆಯ ಮೆಲ್ಲ ಮೆಲ್ಲ ಒಲವ ಸವಿಯ ಸವಿಯುವ ಎಂದು ಮೃದುವಾಗಿ ಆಕ್ಷೇಪಿಸುವ ನಿನ್ನ ನುಡಿಗಳಿಗೆ ಪ್ರತಿ ರಾತ್ರಿಯೂ ಕಾಯುವೆ ನಲ್ಲೆ.
ಇಂತಿ ನಿನ್ನೊಲವಿನ ಕಿರಣ


