ಉದಯರಶ್ಮಿ ದಿನಪತ್ರಿಕೆ
ಇಂಡಿ: ಆಧುನಿಕ ಕೃಷಿ ಪಧ್ಧತಿ ಅಳವಡಿಸಿಕೊಂಡು ಕೃಷಿ ಚಟುವಟಿಕೆಗಳಲ್ಲಿ ನಿರಂತರವಾಗಿ ಕಾರ್ಯೋನ್ಮುಖರಾದರೆ ಕೃಷಿ ಒಂದು ಉಧ್ಯಮವಾಗಿ ಹೊರಹೊಮ್ಮುತ್ತದೆ. ಸರಕಾರಗಳಿಗೆ ರೈತರು ಸಾಲ ಮನ್ನಾ ಮಾಡುವಂತೆ ಮನವಿ ಮಾಡುವುದನ್ನು ನಿಲ್ಲಿಸಿ, ಉತ್ತಮ ಕೃಷಿ ಕೈಗೊಂಡು ಆರ್ಥಿಕವಾಗಿ ಸಬಲರಾಗಲು ಮುಂದಾಗಿ ಎಂದು ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು.
ತಾಲೂಕಿನ ಲಚ್ಯಾಣ ಗ್ರಾಮದ ಅಹಿರಸಂಗ ರಸ್ತೆಯ ಶ್ರೀಮಂತ ಇಂಡಿ ಇವರ ತೋಟದಲ್ಲಿ ಶುಕ್ರವಾರ ಕೃಷಿ ಇಲಾಖೆ ಇಂಡಿ, ಕೃಷಿ ವಿಜ್ಞಾನ ಕೇಂದ್ರ ವಿಜಯಪುರ, ಭೀಮಾಶಂಕರ ಸಕ್ಕರೆ ಕಾರ್ಖಾನೆ ಮರಗೂರ ಹಾಗೂ ಶಾಂತೇಶ್ವರ ವಿವಿದೊದ್ದೇಶಗಳ ಸಹಕಾರಿ ಸಂಘ ಹೋರ್ತಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಬ್ಬಿನ ಬೆಳೆ ಕ್ಷೇತ್ರೋತ್ಸವ ಹಾಗೂ ವಿಚಾರ ಸಂಕೀರಣ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಮಣ್ಣಿನ ಫಲವತ್ತತೆ ಕಾಪಾಡಿ ಆಧುನಿಕ ಪದ್ದತಿಯ ಡ್ರೀಪ್ ನೀರಾವರಿ ಪದ್ದತಿ ಅಳವಡಿಸಿ ಕಬ್ಬಿನ ಇಳುವರಿ ಹೆಚ್ಚಿಸಲು ಸಾಧ್ಯವಾಗುತ್ತದೆ. ಒಂದು ಎಕರೆ ಪ್ರದೇಶದಲ್ಲಿ ೪೦ ಸಾವಿರ ಸಸಿ ನೆಡಬೇಕು. ಒಂದು ಸಸಿ ಎರಡರಿಂದ ಮೂರು ಕಿಲೋ ಆಗುವಂತೆ ನೋಡಿಕೊಳ್ಳಬೇಕು. ಆಗ ಕಬ್ಬಿನ ಅಧಿಕ ಇಳುವರಿ ಬರುತ್ತದೆ ಎಂದರು.
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ನಾವು ಕಬ್ಬಿನ ತಳಿ ಆಯ್ಕೆ ಮಾಡುವಾಗ ಉತ್ತಮ ತಳಿ ಆಯ್ಕೆ ಮಾಡಬೇಕು. ಕಬ್ಬು ಬೆಳೆಯು ಚೆನ್ನಾಗಿ ಬರಬೇಕು, ರಿಕವರಿ ಚೆನ್ನಾಗಿ ಬರಬೇಕು ಅಂತಹ ತಳಿಗಳಾದ ೮೬೦೩೨, ಸಂಕೇಶ್ವರದ ಎಸ್‌ಎನ್‌ಕೆ , ಎಂ ಎಸ್ ೧೦೦೦೧, ಅಮೃತಾ ೯೦೦೪ ಮತ್ತು ೧೩೩೩೭೪ ನಂತಹ ತಳಿಗಳನ್ನು ಆಯ್ಕೆ ಮಾಡಿ ಕಬ್ಬಿನ ಇಳುವರಿ ಪಡೆಯಲು ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿ, ಕಬ್ಬು ವರ್ಷದ ೩೬೫ ದಿನ ಮತ್ತು ದಿನದ ೨೪ ಗಂಟೆ ಬೆಳೆಯುತ್ತದೆ. ಆದ್ದರಿಂದ ಆಧುನಿಕ ಪದ್ದತಿಯ ಡ್ರೀಪ್ ನಿರಾವರಿ ಅಳವಡಿಸಿದರೆ ೩೦ ರಿಂದ ೪೦ ರಷ್ಟು ಇಳುವರಿ ಹೆಚ್ಚಿಗೆ ಪಡೆಯಬಹುದು ಎಂದರು.
ಸಂಕೇಶ್ವರದ ಮುಖ್ಯ ವಿಜ್ಞಾನಿ ತಳಿ ಶಾಸ್ತ್ರದ ಸಂಜಯ ಪಾಟೀಲ ಮಾತನಾಡಿ, ಕಬ್ಬಿನ ರವದಿ ಸುಡಬಾರದು. ಅದು ಮಣ್ಣಿನಲ್ಲಿರುವ ಪೋಷಕಾಂಶ ಹೆಚ್ಚಿಸುತ್ತದೆ. ಜೊತೆಗೆ ಸಸಿ ನೆಡುವಾಗ ರೋಗಾಣುರಹಿತ ಬೀಜೋಪಚಾರ ಮಾಡಬೇಕು. ಸಾವಯುವ ಪ್ರಾಣಿಗಳ ಗೊಬ್ಬರ ಬಳಕೆ ಮಾಡಿ ಕಬ್ಬಿನ ತೂಕ ಹೆಚ್ಚಿಸಿಕೊಳ್ಳಬಹುದು ಎಂದರು.
ಕಬ್ಬು ಅಭಿವೃದ್ದಿ ಸಂಶೋಧನಾ ಕೇಂದ್ರ ಬೆಳಗಾವಿಯ ನಿರ್ದೇಶಕ ರಾಜಗೋಪಾಲ, ಕೃಷಿ ವಿಜ್ಞಾನಕೇಂದ್ರದ ಮುಖ್ಯಸ್ಥ ಡಾ.ಶಿವಶಂಕರ ಮೂರ್ತಿ, ಪ್ರಗತಿಪರ ರೈತ ಎಂ.ಆರ್.ಪಾಟೀಲ, ಬಸವರಾಜ ಸಾಹುಕಾರ, ಶ್ರೀಮಂತ ಇಂಡಿ ಮಾತನಾಡಿದರು.
ಇದೇ ವೇಳೆ ಎಕರೆಗೆ ೧೭೨ ಟನ್ ಕಬ್ಬು ಬೆಳೆದು ರೈತರಿಗೆ ಮಾರ್ಗದರ್ಶನ ನೀಡುತ್ತಿರುವ ಶ್ರೀಮಂತ ಇಂಡಿ ಮತ್ತು ನಾರಾಯಣ ಸಾಳುಂಕೆ ಇವರನ್ನು ಸನ್ಮಾನಿಸಲಾಯಿತು.
ವೇದಿಕೆಯ ಮೇಲೆ ಕೃಷಿ ಆಡಳಿತ ಮಂಡಳಿ ಸದಸ್ಯ ಪಾರ್ವತಿ ಕುರ್ಲೆ, ಸಹ ವಿಸ್ತರಣಾ ನಿರ್ದೇಶಕ ಡಾ.ಎಂ.ಎಂ.ಜಮಾದಾರ, ರೇವಗೊಂಡಪ್ಪಗೌಡ ಬಿರಾದಾರ, ಪ್ರಗತಿಪರ ರೈತ ಗುರುನಾಥ ಬಗಲಿ, ಭೀಮಾಶಂಕರ ಕಾರ್ಖಾನೆ ಎಂ.ಡಿ ಭಾಗ್ಯಶ್ರೀ ಕುಂಬಾರ, ಕೃಷಿ ಉಪನಿರ್ದೇಶಕ ಚಂದ್ರಕಾಂತ ಪವಾರ, ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ವಿಶ್ವನಾಥ ಬಿರಾದಾರ, ಮತ್ತಿತರಿದ್ದರು.

