ವಿಜಯಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಆಕ್ರೋಶ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಾವಿಗೆ ಪವಿತ್ರತೆ ಇದೆ, ಆದರೆ ಪವಿತ್ರ ಕಾವಿಗೆ ಅಗೌರವ ತೋರಿ ಕಾವಿ ಬಟ್ಟೆಯುಟ್ಟ ಸ್ವಾಮೀಜಿಯವರನ್ನು ಎಳೆದಾಡಿ, ಅವರ ಮೊಬೈಲ್ ಕಸಿದು ಗುಂಡಾ ವರ್ತನೆ ಮಾಡಿರುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ೧೦೦ಕ್ಕೂ ಹೆಚ್ಚು ದಿನಗಳಿಂದ ಹೋರಾಟ ನಡೆಯುತ್ತಿದೆ. ಸಮಾಜದ ಹಿತಕ್ಕಾಗಿ ಅನೇಕರು ತಮ್ಮ ಮನೆ-ಮಠ ಬಿಟ್ಟು ಹೋರಾಟ ನಡೆಸುತ್ತಿದ್ದಾರೆ. ಆದರೆ, ಗುರುವಾರ ನಡೆದ ಹೋರಾಟದಲ್ಲಿ ಪಾಲ್ಗೊಂಡಿದ್ದ ಸ್ವಾಮೀಜಿಯ ಕಾವಿ ಬಟ್ಟೆಯನ್ನು ಎಳೆದಾಡಿ, ಅವರ ಮೇಲೆ ಕೈಹಾಕಿ, ಮೊಬೈಲ್ ಕಸಿದುಕೊಂಡು ಗುಂಡಾವರ್ತನೆ ಮಾಡಿರುವುದು ಖಂಡನೀಯ ಎಂದರು.
ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಸೇರಿ ಹಲವು ವಿಷಯದಲ್ಲಿ ವಿಜಯಪುರ ಜಿಲ್ಲೆಗೆ ರಾಜ್ಯ ಸರ್ಕಾರ ದ್ರೋಹ ಹಾಗೂ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೋರಾಟಗಾರರಲ್ಲಿ ಎಲ್ಲ ಪಕ್ಷ, ಜಾತಿ, ಧರ್ಮ, ಸಿದ್ಧಾಂತದ ಜನರಿದ್ದಾರೆ. ಸದುದ್ಧೇಶ ಇಟ್ಟುಕೊಂಡು ನಡೆಯುತ್ತಿರುವ ಹೋರಾಟಗಾರರ ಮನವಿ ಸ್ವೀಕರಿಸಿದ್ದರೆ ದೊಡ್ಡತನವಾಗುತ್ತಿತ್ತು. ಆದರೆ, ಹೋರಾಟಗಾರರನ್ನು ತಳ್ಳಾಡಿ, ಪೊಲೀಸರು ಸಮವಸ್ತ್ರ ಧರಿಸದೇ ಬಂದು ಸ್ವಾಮೀಜಿಗೆ ಅವಮಾನಿಸಿದ್ದು ಸರಿಯಲ್ಲ. ದಬ್ಬಾಳಿಕೆಗೂ ಒಂದು ಮಿತಿ ಇರಬೇಕು. ಅಧಿಕಾರ ಶಾಶ್ವತವಲ್ಲ. ಹೀಗಾಗಿ ಹೋರಾಟಗಾರರ ಮೇಲೆ ಹಾಕಿರುವ ಕೇಸ್ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಜನರಿಗೊಂದು ಚಿಂತೆ, ಸಿಎಂ-ಡಿಸಿಎಂಗೊಂದು ಚಿಂತೆ
ಅಲ್ಲದೇ, ಜನರಿಗೆ ಒಂದು ಚಿಂತೆಯಾದರೆ, ಸಿಎಂ, ಡಿಸಿಎಂ, ಸಚಿವರಿಗೆ ಮತ್ತೊಂದು ಚಿಂತೆ ಎಂಬಂತಾಗಿದೆ. ರಾಜ್ಯದಲ್ಲಿ ರಾಜಕೀಯ ಕ್ಷೋಭೆ ಹಾಗೂ ಅರಾಜಕತೆ ನಿರ್ಮಾಣವಾದ ಅನುಮಾನ ಜನರಲ್ಲಿ ಇದೆ. ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮ ನಿರ್ಮಾಣವಾದ ಶೆಡ್ ತೆರವು ಮಾಡಿದರೆ, ಇದಕ್ಕೆ ಕೇರಳ ಹಾಗೂ ಪಾಕಿಸ್ತಾನದವರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಬಡಾವಣೆಯು ಅಕ್ರಮ ನಿವಾಸಿಗಳ ತಾಣವಾಗಿದೆ. ರಾಷ್ಟ್ರೀಯ ಭದ್ರತಾ ವಿಷಯವಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಮೈಸೂರು ಹಾಗೂ ಬೆಂಗಳೂರಿನಲ್ಲಿ ಮಹಾರಾಷ್ಟ್ರದ ಪೊಲೀಸರು ಮಾದಕ ವಸ್ತುಗಳು ಹಾಗೂ ಡ್ರಗ್ಸ್ ಪತ್ತೆ ಹಚ್ಚಿದ್ದಾರೆ. ಹಾಗಾದರೆ, ಸಮರ್ಥವಾಗಿರುವ ರಾಜ್ಯ ಪೊಲೀಸರನ್ನು ಯಾರು ತಡೆಹಿಡಿಯುತ್ತಿದ್ದಾರೆ?, ಅಲ್ಲದೇ, ಗುಪ್ತಚರ ಇಲಾಖೆ ಏನು ಮಾಡುತ್ತಿದೆ ಹಾಗೂ ಇದು ಯಾರ ಕೈಯಲ್ಲಿ ಇದೆ?, ಹೀಗಾಗಿ ಮುಖ್ಯಮಂತ್ರಿಗಳ ಇದರ ಹೊಣೆ ಹೊತ್ತುಕೊಳ್ಳಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಈರಣ್ಣ ರಾವೂರ, ವಿಜಯ ಜೋಶಿ ಇದ್ದರು.

