ವಿಜಯಪುರದ ಜ್ಞಾನಯೋಗಾಶ್ರಮಕ್ಕೆ ಹರಿದುಬಂದ ಭಕ್ತಸಾಗರ | ನಗರದೆಲ್ಲೆಡೆ ಸಿದ್ಧೇಶ್ವರ ಶ್ರೀಗಳ ಭಾವಚಿತ್ರವಿಟ್ಟು ಪೂಜೆ | ಎಲ್ಲೆಡೆ ಅನ್ನಸಂತರ್ಪಣೆ
ಉದಯರಶ್ಮಿ ದಿನಪತ್ರಿಕೆ
ವರದಿ: ದೇವೇಂದ್ರ ಹೆಳವರ
ವಿಜಯಪುರ: ನಗರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ, ಶತಮಾನದ ಶ್ರೇಷ್ಠ ಸಂತ ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಮೂರನೇ ವರ್ಷದ ಗುರುನಮನ ಮಹೋತ್ಸವವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಗುರುನಮನ ಮಹೋತ್ಸವ ಕಾರ್ಯಕ್ತಮದಲ್ಲಿ ಭಾಗವಹಿಸಲು ಜ್ಞಾನಯೋಗಾಶ್ರಮಕ್ಕೆ ನೆರೆಯ ಮಹಾರಾಷ್ಟ ಸೇರಿದಂತೆ ನಾಡಿನ ವಿವಿಧೆಡೆಯಿಂದ ಭಕ್ತಸಾಗರವೇ ಹರಿದು ಬಂದಿತ್ತು.
ಗುರುನಮನ ಮಹೋತ್ಸವದ ಅಂಗವಾಗಿ ನಗರದ ಬಿ.ಎಲ್.ಡಿ.ಇ.ರಸ್ತೆ, ಆಶ್ರಮ ರಸ್ತೆಯುದ್ದಕ್ಕೂ ಆಕರ್ಷಕ ಮಂಟಪ ನಿರ್ಮಿಸಿ ಪುಷ್ಪಾಲಂಕಾರ ಮಾಡಿ ಸಿದ್ಧೇಶ್ವರ ಮಹಾಸ್ವಾಮಿಗಳ ಭಾವಚಿತ್ರವಿಟ್ಟು ಗುರುನಮನ ಸಲ್ಲಿಸುವ ಜತೆಗೆ ಜ್ಞಾನಯೋಗಾಶ್ರಮಕ್ಕೆ ತೆರಳುವ ಭಕ್ತಾದಿಗಳಿಗೆ, ಉಪಹಾರ, ಪಾನೀಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ವಿವಿಧ ಸಂಘಟನೆಯವರು ಹಾಗೂ ಸಾರ್ವಜನಿಕರು ಭಕ್ತಿಸೇವೆ ಸಲ್ಲಿಸಿದರು.
ಆಶ್ರಮ ರಸ್ತೆಯ ಶ್ರೀ ಸಿದ್ಧೇಶ್ವರ ಅಪ್ಫಾಜಿ( ಚಾರಲೈಟ್ ಬಳಿ) ವೃತ್ತದಲ್ಲಿ ಬಣ್ಣದ ರಂಗೋಲಿಯಿಂದ ಆಕರ್ಷಕ ಚಿತ್ರ ಬಿಡಿಸಿ ಅಲಂಕಾರ ಮಾಡಿದ್ದು ಭಕ್ತರ ಗಮನ ಸೆಳೆಯಿತು.
ಗುರುನಮನ ಮಹೋತ್ಸವ ಪ್ರಯುಕ್ತ ಶುಕ್ರವಾರ ಬೆಳಿಗ್ಗೆ ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಶ್ರೀ ಬಸವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಆಶ್ರಮದ ಆವರಣದಲ್ಲಿ ಜಪಯೋಗ, ನಂತರ ಪ್ರಣವ ಮಂಟಪದಲ್ಲಿ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಮಹಾಶಿವಯೋಗಿಗಳ ಕರ್ತೃ ಗದ್ದುಗೆಗೆ ಹಾಗೂ ಪ್ರಣಮಂಟಪದ ಮುಂಭಾಗದಲ್ಲಿ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಪಣೆ ಮಾಡಿ ಭಕ್ತಿಯ ನಮನಗಳನ್ನು ಸಲ್ಲಿಸಲಾಯಿತು. ಪೂಜೆಯ ನಂತರ ಭಕ್ತರು ಸರತಿ ಸಾಲಿನಲ್ಲಿ ನಿಂತು ಪ್ರಣವಮಂಟಪದ ಗದ್ದುಗೆ ದರ್ಶನ ಮಾಡಿ ಸಿದ್ಧೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾ ಭಕ್ತಿಯಿಂದ ನಮಿಸುವ ಮೂಲಕ ಭಕ್ತಿಭಾವ ಮೆರೆದರು.
ಬೆಳಿಗ್ಗೆಯಿಂದ ಸಂಜೆಯವರೆಗೂ ಆಶ್ರಮದಲ್ಲಿ ಭಕ್ತರದಟ್ಟಣೆ ಇತ್ತು. ಇಡೀದಿನ ನಿರಂತರ ಅನ್ನದಾಸೋಹವೂ ನಡೆಯಿತು. ಗೆಜ್ಜಿ ಕರಿಯರ ಅಕಾಡೆಮಿ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ್ದು ಪ್ರಂಶಸನೀಯ.
ಗುರುನಮನ ಮಹೋತ್ಸವದ ಹಿನ್ನೆಲೆಯಲ್ಲಿ ಆಶ್ರಮದ ಆವರಣದಲ್ಲಿ ಶ್ರೀ ಸಿದ್ಧೇಶ್ವರ ಶ್ರೀಗಳ ಹಾಗೂ ಅವರ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಮಹಾಶಿವಯೋಗಿಗಳ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಶ್ರೀಗಳ ಅಪರೂಪದ ಛಾಯಾಚಿತ್ರಗಳು ಭಕ್ತರ ಮನಸೂರೆಗೊಂಡವು. ಆಶ್ರಮದಲ್ಲಿ ದಿನವಿಡೀ, ಹಾಡು, ಸಂಗೀತ, ಭರತನಾಟ್ಯ, ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.

