ವಿಜಯಪುರದಲ್ಲಿ ಮಾಜಿ ಶಾಸಕ ಪ್ರೊ.ರಾಜು ಆಲಗೂರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟಗಾರು ಪೊಲೀಸರ ಮೇಲೆ ಕೈ ಎತ್ತಿರುವುದು ಸರಿಯಲ್ಲ, ಅದೇ ತೆರನಾಗಿ ಹೋರಾಟ ಸ್ಥಳವನ್ನು ತೆರವುಗೊಳಿಸಿರುವುದು ಅಕ್ಷಮ್ಯ ಅಪರಾಧ ಎಂದು ಮಾಜಿ ಶಾಸಕ ಪ್ರೊ.ರಾಜು ಆಲಗೂರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲರು ಭರವಸೆ ನೀಡಿದ್ದರು, ಹೀಗಿದ್ದರೂ ಸಹ ಅವರ ನಿವಾಸಕ್ಕೆ ಮುತ್ತಿಗೆ ಹಾಕುವ ಔಚಿತ್ಯವಿರಲಿಲ್ಲ, ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ, ಸ್ವಾಮೀಜಿಗಳು ಆರಕ್ಷಕ ಅಧಿಕಾರಿಗಳ ಮೇಲೆ ಕೈ ಮಾಡುವ ಅವಶ್ಯಕತೆಯೂ ಇರಲಿಲ್ಲ, ಇದೇ ಘಟನೆ ಇರಿಸಿಕೊಂಡು ಹೋರಾಟ ವೇದಿಕೆಯನ್ನೇ ತೆರವುಗೊಳಿಸಿರುವುದು ಅಕ್ಷಮ್ಯ ಅಪರಾಧವೇ, ಹೋರಾಟ, ಚಳವಳಿಗಳು ದಮನವಾಗಬಾರದು, ಹೋರಾಟದ ಹೆಸರಿನಲ್ಲಿ ಆರಕ್ಷಕರ ಮೇಲೆ ಕೈ ಮಾಡಿರುವುದು ಸರಿಯಲ್ಲ ಎಂದು ಆಲಗೂರ ಹೇಳಿದರು.
ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಯಾರ ತಕಾರರು ಇಲ್ಲ. ಇದರ ಪರವಾಗಿಯೇ ಕಾಂಗ್ರೆಸ್ ಪಕ್ಷ ಮತ್ತು ಸಚಿವರು, ಶಾಸಕರು ಸಹ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಜನವರಿ ೯ರ ಒಳಗೆ ಮತ್ತೊಮ್ಮೆ ಸಿಎಂ ಬಳಿಗೆ ಹೋರಾಟಗಾರರನ್ನು ತೆಗೆದುಕೊಂಡು ಹೋಗಿ ಸರ್ಕಾರಿ ಕಾಲೇಜು ಬಗ್ಗೆ ಮನವರಿಕೆ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಭರವಸೆ ಸಹ ನೀಡಿದ್ದಾರೆ, ಹೀಗಿದ್ದರೂ ಸಹ ಸಚಿವರ ಮೇಲೆ ಆರೋಪ ಹೊರೆಸಿರುವುದು ಸರಿಯಲ್ಲ ಎಂದರು.
ಸಚಿವರ ನಿವಾಸದ ಮುಂದೆ ಹೋರಾಟ ಮಾಡುವುದೂ ತಪ್ಪಲ್ಲ. ಸಚಿವರು ಮನೆಯಲ್ಲಿದ್ದಾಗ ಹೋರಾಟ ಮಾಡಬಹುದಾಗಿತ್ತು. ಸಚಿವರು ಮನೆಯಲ್ಲಿ ಇರದೆ ಇದ್ದಾಗ ಹೋರಾಟ ಮಾಡುವುದರಿಂದ ಅವರ ಕುಟುಂಬಕ್ಕೆ ಮುಜುಗರ ಉಂಟು ಮಾಡಿದಂತಾಗುತ್ತದೆ. ಅಲ್ಲದೇ, ಹೋರಾಟದಲ್ಲಿ ಪೊಲೀಸರೊಂದಿಗೆ ನೂಕಾಟ, ತಳ್ಳಾಟ ನಡೆಯುವುದು ಸಹ ಸಾಮಾನ್ಯ. ನಾನು ಅನೇಕ ಚಳವಳಿಗಳನ್ನು ಮಾಡಿ, ಇಂತಹದನ್ನು ಎದುರಿಸಿದ್ದೇನೆ. ಆದರೆ, ಪೊಲೀಸರ ಮೇಲೆ ಪದೇ ಪದೇ ಸ್ವಾಮೀಜಿ ಕೈ ಎತ್ತಿದ್ದು ಸರಿಯಲ್ಲ ಎಂದು ಖಂಡಿಸಿದರು.
ಕೆಲವು ಸ್ವಾಮೀಜಿಗಳು ಕಾನೂನಿಗಿಂತ ತಾವೇ ಮೇಲು ಎಂಬಂತೆ ವರ್ತಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸ್ವಾಮೀಜಿಗಳ ವಿರೋಧಿ ಎಂಬಂತೆ ಬಿಂಬಿಸುವ ಕೆಲಸವನ್ನು ಬಿಜೆಪಿ ಮಾಡುವುದು ಖಂಡನೀಯ. ಇತ್ತೀಚಿಗೆ ಬಬಲೇಶ್ವರದಲ್ಲಿ ಸ್ವಾಮೀಜಿಯೊಬ್ಬರ ಪರ ಸಮಾವೇಶ ಮಾಡಿದರು. ಇಲ್ಲೂ ಸಚಿವ ಎಂ.ಬಿ.ಪಾಟೀಲರನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವ ಕೆಲಸ ಬಿಜೆಪಿಯವರು ಮಾಡಿದರು. ಆದರೆ, ಕಾಂಗ್ರೆಸ್ ಪಕ್ಷ, ಸಚಿವರು ಹಿಂದೂಗಳು ಸೇರಿ ಎಲ್ಲ ಧರ್ಮಗಳು ಹಾಗೂ ಎಲ್ಲ ಸ್ವಾಮೀಜಿಗಳನ್ನು ಪ್ರೀತಿಸಿ ಗೌರವಿಸುತ್ತೇವೆ ಎಂದು ಸ್ಪಪ್ಟನೆ ನೀಡಿದರು.
ಮುಖಂಡರಾದ ಚಂದ್ರಶೇಖರ ಕೊಡಬಾಗಿ, ಗಂಗಾಧರ ಸಂಬಣ್ಣಿ, ಹರೀಶ ಕೌಲಗಿ, ವಸಂತ ಹೊನಮೋಡೆ ಇದ್ದರು.
ಪ್ರಕರಣ ವಾಪಸ್ಸು ಪಡೆಯಿರಿ
ವೈದ್ಯಕೀಯ ಕಾಲೇಜು ಹೋರಾಟದ ವೇದಿಕೆಯನ್ನು ಕಿತ್ತಿಸಿದ್ದು ಅಕ್ಷಮ್ಯ ಅಪರಾಧ. ಪ್ರಜಾಪ್ರಭುತ್ವದಲ್ಲಿ ಹೋರಾಟಕ್ಕೆ ಅವಕಾಶ ಇದ್ದು, ಎಲ್ಲರಿಗೂ ಆ ಹಕ್ಕು ಇದೆ. ಅಲ್ಲಿ ಹೋರಾಟಕ್ಕೆ ಅವಕಾಶ ಕೊಡಬೇಕು, ತಪ್ಪು ಮಾಡಿದವರನ್ನು ಬಿಟ್ಟು ಉಳಿದ ಅಮಾಯಕ ಹೋರಾಟಗಾರರ ಮೇಲೆ ದಾಖಲಾಗಿರುವ ಎಲ್ಲ ರೀತಿಯ ಪ್ರಕರಣಗಳನ್ನು ವಾಪಾಸ್ಸು ಪಡೆಯಬೇಕು ಎಂದು ಪ್ರೊ.ರಾಜು ಆಲಗೂರ ಇದೇ ವೇಳೆ ಒತ್ತಾಯಿಸಿದರು.

