ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಸವಣ್ಣನವರು ಜಾತಿ-ಲಿಂಗ ಬೇಧವಿಲ್ಲದ ಸಮಾಜ, ಸ್ತ್ರೀ ಸ್ವಾತಂತ್ರ್ಯ, ಸಮಾನತೆ, ಕಾಯಕವೇ ಕೈಲಾಸ, ದಾಸೋಹ ತತ್ವಗಳ ವಿಚಾರಧಾರೆಗಳು ಹಾಗೂ ಸಾಮಾಜಿಕ ಮೌಢ್ಯತೆಯನ್ನು ತೊಲಗಿಸಿಲು ಹೋರಾಡಿದ ಶ್ರೇಷ್ಠ ಸಂತ. ೧೨ ನೆಯ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ವ್ಯವಸ್ಥೆಯ ಮೂಲಕ ಎಲ್ಲ ಸಮುದಾಯದ ಶರಣರನ್ನು ಒಂದುಗೂಡಿಸಿ ಸಮ ಸಮಾಜದ ಹರಿಕಾರರಾಗಿದ್ದರು ಎಂದು ವಿಜಯಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತç ಪ್ರಾಧ್ಯಾಪಕ ಪ್ರೊ. ಎಂ.ಎಸ್.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು.
ಅವರು ಮಹಾರಾಷ್ಟçದ ಸೋಲಾಪೂರದ ಅಹಲ್ಯಾಬಾಯಿ ಹೋಳ್ಕರ ಸೋಲಾಪೂರ ವಿಶ್ವವಿದ್ಯಾಲಯ ಹಾಗೂ ಸಂಗಮೇಶ್ವರ ಕಾಲೇಜ (ಸ್ವಾಯತ್ತ) ಇವುಗಳ ಸಹಯೋಗದಡಿಯಲ್ಲಿ “ಮಹಾತ್ಮಾ ಬಸವೇಶ್ವರ ವಿಚಾರಧಾರೆ ಮತ್ತು ಕಾರ್ಯಸಾಧನೆಗಳು” ವಿಷಯ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕೀರಣದದಲ್ಲಿ ಪ್ರಥಮ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುತ್ತಿದ್ದರು.
ಅವರು ಮಾತನಾಡುತ್ತಾ, ಬಸವಣ್ಣನವರು ಜಾತಿ, ಮತ, ಪಂಗಡ, ಧರ್ಮ, ಲಿಂಗ, ಬಡವ-ಬಲ್ಲಿದ ಯಾವುದೇ ಭೇದವಿಲ್ಲದೇ ಎಲ್ಲರೂ ಸಮಾನರು ಎಂಬ ಸಮಾನತೆಯ ಜತೆಗೆ “ವಸುದೈವ ಕುಟುಂಬಕಂ” ಎಂಬ ಸಮಷ್ಠಿಭಾವದ ವಿಶ್ವ ಮಾನವತೆಯ ಸಂದೇಶ ಸಾರಿದರು. ಕಳಬೇಡ, ಕೊಲಬೇಡ, ಹುಸಿಯ ನುಡಿಯಲಿಬೇಡ’ ಎಂಬ ವಚನದ ಮೂಲಕ ಸಪ್ತ ನೈತಿಕ ಮೌಲ್ಯಗಳ ಬಗ್ಗೆ ತಿಳಿಸುತ್ತಾ, ಆದರ್ಶ ಸಮಾಜಕ್ಕಾಗಿ ಶ್ರಮಿಸಿದರು. ಕೇವಲ ಆಚರಣೆಗಳಿಗಿಂತ ಸತ್ಯ-ಶುದ್ಧ-ಮನಸ್ಸು ಒಂದಾದ ಬದುಕು ನಮ್ಮದಾಗಬೇಕು. ಅಂದಾಗ ಮಾತ್ರ ಅರ್ಥಪೂರ್ಣ ಜೀವನ ಎಂಬ ಸಂದೇಶ ಸಾರಿದವರು ಬಸವಣ್ಣನವರು ಎಂದು ಹೇಳಿದರು.
ಈ ಗೋಷ್ಠಿಯ ವೇದಿಕೆಯ ಮೇಲೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ. ಚಂದ್ರಕಾಂತ ಕೋಳಿಗುಡ್ಡೆ ಅವರು ಮಾತನಾಡಿ, ಭಕ್ತಿ ಭಂಡಾರಿ ಬಸವಣ್ಣನವರು ಮಹಾ ಮಾನವತಾವಾದಿಯಾಗಿ ದಯವೇ ಧರ್ಮದ ಮೂಲವೆಂದು ಸಾರಿ, ಇಡೀ ಜಗತ್ತಿಗೆ ಮಾನವೀಯತೆ ಮತ್ತು ಕಾಯಕನಿಷ್ಠೆ ಇವು ಧರ್ಮದ ಬುನಾದಿಯಾಗಬೇಕೆಂದು ಬಲವಾಗಿ ನಂಬಿದ್ದರು. ವಚನಗಳು ವಿಶಿಷ್ಟ ಪ್ರಕಾರದ ಸಾಹಿತ್ಯವಾಗಿದ್ದು, ಗದ್ಯ ಮತ್ತು ಪದ್ಯ ರೂಪದಲ್ಲಿವೆ. ಬಸವಣ್ಣನವರು ಸ್ವಾತಂತ್ರö್ಯ, ಸಮಾನತೆ, ವೈಚಾರಿಕತೆ ಮತ್ತು ಸಹೋದತ್ವದಲ್ಲಿ ಬೇರೂರಿರುವ ಸಮಾಜವನ್ನು ಕಲ್ಪನೆ ಹೊಂದಿದ್ದರು ಎಂದರು.
ವೇದಿಕೆಯ ಮೇಲೆ ಅದನೂರ ಕಾಲೇಜಿನ ಪ್ರಾಧ್ಯಾಪಕಿ ಡಾ. ಅನಿತಾ ಮುದಕಣ್ಣ, ಪ್ರಾಂಶುಪಾಲ ಡಾ. ಬಿ.ಆರ್.ಬುವಾ, ವಿಚಾರ ಸಂಕೀರಣದ ಸಂಘಟನಾ ಕಾರ್ಯದರ್ಶಿ ಡಾ. ವಸಂತ ಕೋರೆ, ಎಸ್.ಎಂ.ಖಿಲಾರೆ ಇನ್ನಿತರರು ಸಹ ಉಪಸ್ಥಿತರಿದ್ದರು.

