ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಯಾವುದೇ ಒಂದು ಸಸಿಯ ಚಿಗುರುವ ಭಾಗವನ್ನು ನಾವು ಕುಡಿ ಎಂದು ಕರೆಯುತ್ತೇವೆ. ಬೇರು ಸಸ್ಯಕ್ಕೆ ಮೂಲ ಆಧಾರವಾದರೆ ಕಾಂಡ ಎಲೆಗಳು ಅದರ ವಿಸ್ತರಿತ ಭಾಗವಾಗುತ್ತವೆ ಮತ್ತು ಕುಡಿ ಮುಂದಿನ ಭವಿಷ್ಯದಲ್ಲಿ ದೊಡ್ಡದಾಗುವ,ಹೆಮ್ಮರವಾಗುವ ಭಾಗವಾಗುತ್ತದೆ.
ಅಂತೆಯೇ ಕುಟುಂಬದಲ್ಲಿ ಹಿರಿಯರು ಮೂಲ ಬೇರಾದರೆ ಅವರ ಮಕ್ಕಳು ಕಾಂಡ ಎಲೆ ಮುಂತಾದ ಸಸ್ಯದ ಭಾಗಗಳಾಗುತ್ತಾರೆ ಮನೆಯ ಮಕ್ಕಳು ಆ ಮನೆಯ ಭವಿಷ್ಯದ ಕುಡಿಗಳಾಗುತ್ತಾರೆ. ಇಂತಹ ಮನೆಯ ಮಕ್ಕಳು ತಮ್ಮ ಎಲ್ಲಾ ಅಣ್ಣ, ತಮ್ಮ, ಅಕ್ಕ, ತಂಗಿಯರೊಂದಿಗೆ ಉತ್ತಮವಾದ ಒಡನಾಟವನ್ನು ಇಟ್ಟುಕೊಂಡು ಬಾಳುವಂತೆ ನಾವು ಮಕ್ಕಳನ್ನು ಬೆಳೆಸಬೇಕು.
ಮಕ್ಕಳಲ್ಲಿ ಅವರು ಹಾಗೆ ಇವರು ಹೀಗೆ ಎಂಬ ಪೂರ್ವಾಗ್ರಹಗಳನ್ನು ಬೆಳೆಸದೇ ಎಲ್ಲರೊಂದಿಗೆ ಪ್ರೀತಿ, ವಿಶ್ವಾಸ, ಸಹೃದಯತೆಯಿಂದ ಬದುಕುವಂತಹ ತಾಳ್ಮೆಯ ಸ್ವಭಾವವನ್ನು ನಿಧಾನವಾಗಿ ರೂಢಿಸಬೇಕು.
ಒಂದೇ ಕುಟುಂಬದ ಎರಡನೇ ತಲೆಮಾರಿನ ಮಕ್ಕಳು ಮತ್ತು ಮೊಮ್ಮಕ್ಕಳಲ್ಲಿಯೂ ಕೂಡ ತಮ್ಮ ಹಿರಿಯರಲ್ಲಿ ಇದ್ದಂತಹ ಅನ್ಯೋನ್ಯತಾ ಭಾವ, ಪ್ರೀತಿ ವಿಶ್ವಾಸ ಇರಲಿ… ಹಾಗೆ ಇರುವಂತೆ ಮಕ್ಕಳನ್ನು ಬೆಳೆಸಬೇಕು. ಕೂಡಿಸಿ ಎಂಬುದರ ಅರ್ಥ ಎರಡು ರೀತಿಯದ್ದು. ಮನೆಗೆ ಯಾರಾದರೂ ಬಂದಾಗ ಇಲ್ಲವೇ ಏನಾದರೂ ಗಹನ ವಿಚಾರವನ್ನು ಚರ್ಚಿಸುವಾಗ ಕುಳಿತುಕೊಂಡು ನಿಧಾನವಾಗಿ ಮಾತನಾಡಿ ಒಂದು ತೀರ್ಮಾನಕ್ಕೆ ಬರೋಣ ಎಂಬ ಮಾತನ್ನು ನಾವು ಹಲವಾರು ಬಾರಿ ಕೇಳಿದ್ದೇವೆ… ಕುಳಿತು ಮಾತನಾಡುವುದು ಎಂದರೆ ಅತ್ಯಂತ ಸಮಾಧಾನದಿಂದ ತಿಳಿ ಹೇಳುವುದು, ಮಾತನಾಡುವುದು, ವಿಚಾರ ವಿಮರ್ಶೆ ಮಾಡುವುದು ಚಿಂತನೆ ಮಾಡುವುದು ಎಂದರ್ಥ. ಇಲ್ಲಿ ನಿಧಾನವೇ ಪ್ರಧಾನವಾಗಿ ಇರಬೇಕಾಗುತ್ತದೆ.

ಸ್ವಿಚ್ ಹಾಕಿದೊಡನೆ ದೀಪ ಬೆಳಗಿದಂತೆ, ಆರ್ಡರ್ ಮಾಡಿದೊಡನೆ ಆಹಾರದ ಪೊಟ್ಟಣ ಮನೆಗೆ ತಲುಪುವಂತೆ ಸಂಬಂಧಗಳು ಯಾಂತ್ರಿಕವಾಗಿ ಇರುವುದಿಲ್ಲ. ಯಾವುದೇ ಒಂದು ವಿಚಾರವನ್ನು ಗ್ರಹಿಸಿ ಅದನ್ನು ಕಾರ್ಯರೂಪಕ್ಕೆ ತರಬೇಕಾದರೆ ನಮಗೆ ತುಸು ಕಾಲಾವಕಾಶ ಬೇಕೇ ಬೇಕು.
ಇನ್ನು ಮೂರನೆಯದಾಗಿ ಕೂಡಿ ಎಂದರೆ ನಮ್ಮ ದೈಹಿಕ ಮತ್ತು ವಯೋ ಸಹಜವಾಗಿ ಬೆಳೆಯುವುದರ ಜೊತೆ ಜೊತೆಗೆ ನಾವು ಮಾನಸಿಕವಾಗಿ ಯಾವ ರೀತಿ ಬೆಳೆಯುತ್ತಿದ್ದೇವೆ ಎಂಬುದರ ಅವಗಾಹನೆ ನಮಗೆ ಇರಬೇಕು. ಸಾಮಾಜಿಕವಾಗಿ ನಾವು ಅದೆಷ್ಟು ತಾಳ್ಮೆ ಶಾಂತಿ ಸಾಮರಸ್ಯದಿಂದ ಇದ್ದೇವೆ. ಕೌಟುಂಬಿಕವಾಗಿ ನಾವು ಅದೆಷ್ಟು ಪ್ರೀತಿ, ವಿಶ್ವಾಸ, ಸೌಹಾರ್ದತೆಯನ್ನು ಹೊಂದಿದ್ದೇವೆ ಎಂಬುದರ ಮೇಲೆ ನಮ್ಮ ಜೀವನದ ಬೆಳವಣಿಗೆ ನಿಂತಿದೆ.
ನೂರರ ಒಂದು ನೋಟು ಹರಿದು ಹೋದಾಗ ಅದಕ್ಕೆ ಹಿಂದೆ ಮುಂದೆ ಟಿಕ್ಸೋ ಪಟ್ಟಿಯನ್ನು ಅಂಟಿಸಿ ಹೆಚ್ಚಿನ ಭಾಗವನ್ನು ಕತ್ತರಿಸಿ ಸರಿಯಾಗಿ ಜೋಡಿಸಿ ಅದನ್ನು ಬ್ಯಾಂಕಿಗೆ ಒಯ್ದು ಕೊಟ್ಟಾಗ ಬ್ಯಾಂಕಿನವರು ಅದರಲ್ಲಿರುವ ಅಂಕಿ, ಸಂಖ್ಯೆಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸಿ ನಮ್ಮಿಂದ ಆ ನೋಟನ್ನು ಪಡೆದುಕೊಂಡು ಅದೇ ಮೌಲ್ಯದ ಹೊಸ ನೋಟನ್ನು ನಮಗೆ ನೀಡುತ್ತಾರೆ. ಹರಿದ ನೋಟನ್ನು ನಾವು ಮತ್ತೆ ಮರುಬಳಕೆ ಮಾಡಬಹುದು ಆದರೆ ಅದು ಮೊದಲಿನ ರೀತಿ ಕಾಣಲು ಸಾಧ್ಯವಿಲ್ಲ.. ಹರಿದ ಕಲೆ ಹಾಗೆಯೇ ಉಳಿಯುತ್ತದೆ.ಅಲ್ಲವೇ..?ಅಂತೆಯೇ ಸಂಬಂಧಗಳು ಕೂಡ. ಇಲ್ಲಿಯೂ ಕೂಡ ಮನಸ್ಸುಗಳು ಬಿರುಕು ಬಿಟ್ಟಾಗ ಆ ಮನಸ್ಸುಗಳ ನಡುವಿನ ಮನಸ್ತಾಪ ಕಲೆಯಂತೆ ತೋರುತ್ತದೆ. ಆದ್ದರಿಂದ ಸಂಬಂಧಗಳನ್ನು ಚೆನ್ನಾಗಿ ಇಟ್ಟುಕೊಳ್ಳಬೇಕಾದದ್ದು ನಮ್ಮ ಕರ್ತವ್ಯ. ಮನೆಯ ಮಕ್ಕಳಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಗೆ ಅವಕಾಶವಿರದಂತೆ ಪರಸ್ಪರ ಹೊಂದಾಣಿಕೆಯ ಬದುಕನ್ನು ಮಾಡಲೇಬೇಕು ಈ ರೀತಿ ಮಕ್ಕಳನ್ನು ಬೆಳೆಸುವುದು ಪಾಲಕರ ಮತ್ತು ಮನೆಯ ಹಿರಿಯರ ಕರ್ತವ್ಯ ಇದನ್ನೇ ಕೂಡಿ ಕೂಡಿಸಿ ಎಂದು ಹೇಳುವುದು.

ಕೆಲವೇ ದಶಕಗಳ ಹಿಂದೆ ಒಂದು ಮನೆಯ ನಾಲ್ಕೈದು ಜನ ಅಣ್ಣ ತಮ್ಮಂದಿರು ತಮ್ಮ ಪಾಲಕರು, ತಮ್ಮ ಪತ್ನಿಯರು ಮತ್ತು ಮಕ್ಕಳೊಂದಿಗೆ ಒಂದೇ ಸೂರಿನ ಅಡಿಯಲ್ಲಿ ಬಾಳುತ್ತಿದ್ದರು. ಯಾರು ಯಾರ ಮಕ್ಕಳು ಎಂಬುದು ಬಂದ ಅತಿಥಿಗಳಿಗೆ ಗೊಂದಲವಾಗುವಷ್ಟು ಅನ್ಯೋನ್ಯತೆ ಅವರಲ್ಲಿ ಇರುತ್ತಿತ್ತು. ವಿರಸಗಳು, ಕಹಿ ಘಟನೆಗಳು ಇರುವುದಿಲ್ಲವೆಂದಿಲ್ಲ, ಆದರೆ ಅದೆಲ್ಲವನ್ನು ಮೀರಿ ಒಟ್ಟಾಗಿ ಬಾಳಬೇಕೆಂಬ ಸದಾಶಯ ಅವರಲ್ಲಿ ಇರುತ್ತಿತ್ತು, ಆದರೆ ಇದೀಗ ಗಂಡ, ಹೆಂಡತಿ ಒಂದು ಇಲ್ಲವೇ ಎರಡು ಮಕ್ಕಳು ಮತ್ತು ಮನೆಯ ನಾಯಿಗಳು ಸೇರಿ ಒಂದು ಕುಟುಂಬವಾಗಿದೆ. ಮನೆ ಎಂದ ಮೇಲೆ ಭಿನ್ನಾಭಿಪ್ರಾಯಗಳು ಅತ್ಯಂತ ಸಹಜ. ವಿಭಿನ್ನ ವಿಚಾರಧಾರೆಗಳನ್ನು ಹೊಂದಿದ್ದರೂ ಸಮರಸದಿಂದ ಬಾಳುವುದು ಬಹಳ ಮುಖ್ಯವಾಗಿತ್ತು. ತಂದೆ ತಾಯಿಗಳು ಇರುವಾಗ ಸರಿ ಆದರೆ ಅವರಿಲ್ಲದ ಕಾಲಘಟ್ಟದಲ್ಲೂ ಮಕ್ಕಳು ಪರಸ್ಪರ ಒಬ್ಬರಿಗೊಬ್ಬರು ಜೊತೆಯಾಗಿ ಕೂಡಿ ಬಾಳಬೇಕು. ಈ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳನ್ನು ಕೂಡಿ ಕೂಡಿಸಬೇಕು ಎಂಬುದನ್ನು ಅರಿತು ತಮ್ಮ ಮಕ್ಕಳ ಬಾಳಿನಲ್ಲಿ ಇದೇ ಅರಿವನ್ನು ಮೂಡಿಸಿ ಬೆಳೆಸಿದರೆ ಸಾಕು.


