ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಂದಿನ ತಾಂತ್ರಿಕ ಯುಗದಲ್ಲಿ ವಿಜ್ಞಾನ ಪರಿಭಾಷೆಯು ಎಲ್ಲಡೆಯೂ ಸಿಗುತ್ತವೆ. ಆದರೆ ಮಕ್ಕಳಲ್ಲಿ ವೈಜ್ಞಾನಿಕ ಪ್ರಜ್ಞೆ ಮತ್ತು ಮನೋಭಾವ ಮೂಡಿಸುವುದು ಇಂದಿನ ಶಿಕ್ಷಣದ ಗುರಿಯಾಗಬೇಕು ಎಂದು ಬೆಂಗಳೂರಿನ ಸೃಜನಶೀಲ ಅಧ್ಯಾಪನ ಕೇಂದ್ರದ ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಹೇಳಿದರು.
ಡಿ.೨೮.೨೯ರಂದು ನಗರದ ಆಕ್ಟ್-ಶಾರದಾ ಪಬ್ಲಿಕ್ ಶಾಲೆಯ ಕಲಾ ಸೌರಭ ೨೦೨೫-೨೬ನೇ ಸಾಲಿನ ಎರಡು ದಿನಗಳ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳ ಸರ್ವಾಂಗೀಣ ಶೈಕ್ಷಣಿಕ ಪ್ರಗತಿಯಲ್ಲಿ ವಿಜ್ಞಾನದ ಜೊತೆಜೊತೆಗೆ ಮೌಲ್ಯವರ್ಧನೆಗೆ ಒತ್ತು ನೀಡುವ ವಿವಿಧ ಸಾಂಸ್ಕöÈತಿಕ ಚಟುವಟಿಕೆಗಳಿಗೆ ಒತ್ತು ನೀಡಿದಾಗ ನಿಜವಾದ ಸೃಜನಶೀಲತೆ ಮಕ್ಕಳಲ್ಲಿ ಮೂಡಿಬರುತ್ತದೆ ಎಂದು ತಿಳಿಸಿದರು.
ಪಠ್ಯ ವಿಷಯವನ್ನು ವಿಶೇಷ ಜ್ಞಾನವನ್ನಾಗಿಸಿದಾಗ ಅದೇ ವಿಜ್ಞಾನವಾಗುತ್ತದೆ. ಈ ವಿಜ್ಞಾನವನ್ನು ಜೀವನಕ್ಕೆ ರೂಢಿಸಿಕೊಂಡಾಗ ಅರಿವಿನ ಅಭಿಜ್ಞಾನವಾಗುತ್ತದೆ. ವಿಜ್ಞಾನವು ಬೆಂಕಿ ಇದ್ದ ಹಾಗೆ, ಇದರಿಂದ ದೀಪವನ್ನು ಬೆಳಗಿಸಬಹುದು, ಮನೆ ಸುಡುವದಕ್ಕೂ ಬಳಸಬಹುದು ಆದರೆ ವಿಜ್ಞಾನವನ್ನು ಹೇಗೆ ಬಳಸಬೇಕು ಎಂಬ ಪ್ರಜ್ಞೆ ಮತ್ತು ವಿವೇಕವನ್ನು ಬೆಳೆಸುವುವಲ್ಲಿ ಶಿಕ್ಷಕರು ಮತ್ತು ಪೋಷಕರು ವಿಶೇಷ ಪಾತ್ರ ವಹಿಸಬೇಕೆಂದು ಹೇಳಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಕಾಖಂಡಕಿ ಗುರುದೇವ ಆಶ್ರಮದ ಪೂಜ್ಯ ಶಿವಯೋಗಿಶ್ವರ ಸ್ವಾಮೀಜಿಯರು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಜೈ ಜವಾನ್ ಜೈ ಕಿಸಾನ್ ಆಗಬೇಕೆಂದು ಕರೆಕೊಟ್ಟು, ಶ್ರೀ ಸಿದ್ಧೇಶ್ವರ ಸ್ವಾಮಿಜಿಯರ ಮಾತಿನಂತೆ ನಿಸರ್ಗವನ್ನು ಪ್ರೀತಿಸುವ ಎಲ್ಲರೂ ನಿಜವಾದ ರೈತರು. ದೇಶವನ್ನು ಪ್ರೀತಿಸುವ ಎಲ್ಲರೂ ನಿಜವಾದ ಯೋಧರು ಎಂದು ಉಲ್ಲೇಖಿಸಿದರು.
ಈ ನಿಟ್ಟಿನಲ್ಲಿ ನಾವುಗಳು ನಮ್ಮ ಮಕ್ಕಳಲ್ಲಿ ರೈತರ ಮತ್ತು ಯೋಧರ ಮೌಲ್ಯಗಳನ್ನು ರೂಢಿಸಿಕೊಳ್ಳುವ ಶಿಕ್ಷಣ ದೊರೆಯುವಂತೆ ಮಾಡಬೇಕು ಎಂದು ಪಾಲಕರಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಭಾರತದ ಸಾಧನೆಯ ಘೋಷವಾಕ್ಯವಾದ “ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ, ಜೈ ಅಭಿಜ್ಞಾನ್” ಎಂಬ ವಸ್ತು ವಿಷಯವನ್ನು ಶಾಲೆಯ ಎರಡು ಸಾವಿರ ಮಕ್ಕಳು ನಾನಾ ಕಲಾ ಪ್ರಕಾರಗಳ ಮೂಲಕ ನೆರೆದ ಪೋಷಕರನ್ನು ಮನೋರಂಜಿಸಿ, ಎಲ್ಲಾ ಸಭಿಕರ ಮೆಚ್ಚುಗೆಗೆ ಪಾತ್ರರಾದರು. “ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ, ಜೈ ಅಭಿಜ್ಞಾನ್” ಎಂಬ ವಸ್ತು ವಿಷಯವನ್ನು ನಾಟಕ, ನೃತ್ಯ, ಹಾಡು, ರೂಪಕಗಳ ಮೂಲಕ ನೆರೆದ ಪೋಷಕರಿಗೆ ಮನೋರಂಜನೆಯ ಸವಿಯುಣಿಸಿತು.
ರೈತರ ಬವಣೆಗಳು, ಸಾವಯವ ಗೊಬ್ಬರಗಳ ಬಳಕೆ, ಕೆರೆಗೆ ಹಾರ, ಆಪರೇಶನ್ ಸಿಂಧೂರ, ಚಂದ್ರಯಾಣ ಡಾವಣೆಯ ನೃತ್ಯ, ಮೇಕ್ ಇನ್ ಇಂಡಿಯ ಮತ್ತು ವಿಕಸಿತ ಭಾರತದ ಪರಿಕಲ್ಪನೆಯನ್ನು ವಿಶೇಷವಾಗಿ ಪ್ರಸ್ತುತ ಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷರಾದ ಸಂ. ಗು. ಸಜ್ಜನ, ಉಪಾಧ್ಯಕ್ಷ ಎಂ.ಎಂ, ಸಜ್ಜನ, ಜಂಟಿ ಕಾರ್ಯದರ್ಶಿ ಡಾ. ಆರ್, ಎಂ ಸಜ್ಜನ, ಖಜಾಂಚಿ ಆರ್, ಎನ್, ಸಜ್ಜನ, ನಿರ್ದೇಶಕರುಗಳಾದ ಎ. ಎಸ್. ಸಜ್ಜನ, ಎಸ್. ಎಸ್. ಸಜ್ಜನ್, ಎಂ. ಬಿ. ಸಜ್ಜನ್, ಎಸ್, ಬಿ, ಸಜ್ಜನ, ಆರ್, ಎಮ್, ಸಜ್ಜನ, ಸಿ. ಪಿ. ಸಜ್ಜನ ಹಾಗೂ ಮಾರ್ಗದರ್ಶಕರಾದ ಎಂ, ಬಿ ಸಜ್ಜನ(ಇಟಗಿ), ಎಲ್ ಆರ್ ಸಜ್ಜನ್, ಎಸ್ ಜೆ ಗೌಡರ, ಎಸ್ ಜಿ ರಾಜನಾಳ, ನಿತಿನ್ ರುಣವಾಲ್ ಹಾಗೂ ಶಾಲಾ ಆಡಳಿತ ಮಂಡಳಿಯ ಸದಸ್ಯರು, ಯೂತ್ ಕಮೀಟಿಯ ಪದಾಧಿಕಾರಿಗಳು, ಶಿಕ್ಷಕ-ಶಿಕ್ಷಕಿಯರು, ವಿದ್ಯಾರ್ಥಿಗಳು ಮತ್ತು ಪಾಲಕರು ಉಪಸ್ಥಿತರಿದ್ದರು.

