ಎಕ್ಸಲಂಟ್ ವಿಜ್ಞಾನ ಪ. ಪೂ ಕಾಲೇಜಿನಲ್ಲಿ ಗುರುನಮನ ಮಹೋತ್ಸವದೊಂದಿಗೆ ಹೊಸ ವರ್ಷಕ್ಕೆ ಚಾಲನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹುಟ್ಟಿದಾಗ ಯಾವ ವ್ಯಕ್ತಿಯೂ ಸಹ ದಡ್ಡನಾಗಿರುವುದಿಲ್ಲ. ಬದಲಿಗೆ ನಮ್ಮನ್ನು ಇನೊಬ್ಬರೊಂದಿಗೆ ಹೋಲಿಸಿಕೊಂಡು ದಡ್ಡ ಎಂದುಕೊಳ್ಳುತ್ತೇವೆ, ಅದರ ಬದಲಿಗೆ ಪ್ರತಿಯೊಬ್ಬ ವಿದ್ಯಾರ್ಥಿಯೂ ನಾನು ಬುದ್ದಿವಂತ ನನ್ನಿಂದ ಎಲ್ಲವೂ ಸಾಧ್ಯ ಎಂದುಕೊಂಡು ಪ್ರತಿದಿನವನ್ನು ಪ್ರಾರಂಭಿಸಿದರೆ ಯಶಸ್ಸು ಎನ್ನುವುದು ಹುಡುಕಿಕೊಂಡು ಬರುತ್ತದೆ ಎಂದು ಕಾಖಂಡಕಿಯ ಗುರುದೇವಾಶ್ರಮದ ಪ.ಪೂ ಶ್ರೀ ಶಿವಯೋಗೀಶ್ವರ ಸ್ವಾಮೀಜಿ ಹೇಳಿದರು.
ನಗರದ ಎಕ್ಸಲಂಟ್ ಪ. ಪೂ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರಿಗೆ ಗುರು ನಮನ ಮಹೋತ್ಸವದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು; ಮಕ್ಕಳಲ್ಲಿ ಧನಾತ್ಮಕ ಚಿಂತನೆಗಳು ಜಾಗೃತಗೊಳ್ಳಬೇಕಾದರೆ ಸಣ್ಣ ಸಣ್ಣ ಅಂಶಗಳಿಂದಲೂ ಜ್ಞಾನವನ್ನು ಪಡೆದುಕೊಳ್ಳುವುದಕ್ಕೆ ವಿದ್ಯಾರ್ಥಿಗಳು ಸದಾ ಯತ್ನಿಸುತ್ತಿರಬೇಕು. ತನ್ನನ್ನು ಯಾವತ್ತೂ ಯಾರ ಜೊತೆಗೂ ಹೋಲಿಸಿಕೊಳ್ಳಬಾರದು. ನಿಸರ್ಗ ನಮ್ಮನ್ನು ಸೃಷ್ಠಿಸುವಾಗ ವಿಶೇಷವಾಗಿ ಸೃಷ್ಠಿಸಿರುತ್ತಾನೆ. ಯಾರಿಗೆ ಯಾವ ಶಕ್ತಿ ನೀಡಬೇಕು. ಯಾರಿಗೆ ಯಾವ ಜ್ಞಾನ ನೀಡಬೇಕು ಅದನ್ನು ನೀಡಿರುತ್ತಾನೆ. ಒಬ್ಬರು ಒಂದರಲ್ಲಿ ಮೇಲಾದರೆ ಮತ್ತೊಬ್ಬರು ಇನ್ನೊಂದರಲ್ಲಿ ಮಿಗಿಲಾಗಿರುತ್ತಾರೆ. ಹೀಗಾಗಿ ನಾವು ಎಂದಿಗೂ ನಮ್ಮನ್ನು ಕಡೆಗಣಿಸಿಕೊಂಡು ನೋಡಬಾರದು. ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಶ್ರೀಗಳು ಸಹ ಸದಾ ಇದನ್ನೇ ತಿಳಿಸುತ್ತಿದ್ದರು ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿದ ವಾಗ್ಮಿ ಅಶೋಕ ಹಂಚಲಿ; ಇಂದು ಹೊಸ ವರ್ಷ ಎಂದರೆ ಮೋಜು ಮಸ್ತಿಗೆ ಸೀಮಿತವಾಗುತ್ತದೆ. ಅದರ ಮಧ್ಯದಲ್ಲಿ ಎಕ್ಸಲಂಟ್ ಸಂಸ್ಥೆಯು ಪೂಜ್ಯರ ಚಿಂತನೆಗಳನ್ನು ಮಕ್ಕಳಲ್ಲಿ ಬಿತ್ತುವುದರೊಂದಿಗೆ ಹೊಸ ವರ್ಷ ಪ್ರಾರಂಭ ಮಾಡುತ್ತಿರುವುದು ನಿಜಕ್ಕೂ ಅಪರೂಪದ ಕಾರ್ಯಕ್ರಮವಾಗಿದೆ. ಏಕೆಂದರೆ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿಗಳು ಸದಾ ಜ್ಞಾನದ ಆಸ್ವಾದಕರಾಗಿದ್ದರು. ಎಲ್ಲಿಂದಲೇ ಜ್ಞಾನ ಸಿಗುತ್ತಿದ್ದರು ಅದನ್ನು ಸ್ವೀಕರಿಸುವುದಕ್ಕೆ ಕಾತರರಾಗಿರುತ್ತಿದ್ದರು. ಅದರಂದಲೇ ತಮ್ಮ ಜ್ಞಾನವನ್ನು ವಿಸ್ತಾರಗೊಳಿಸಿಕೊಳ್ಳುತ್ತ ಜ್ಞಾನಯೋಗಿಯಾಗಿ ಗುರುತಿಸಿಕೊಂಡರು. ಇಂದು ವಿದ್ಯಾರ್ಥಿಗಳು ಅವರ ವಿಚಾರಗಳನ್ನು ತಿಳಿದುಕೊಳ್ಳುವ ಮೂಲಕ ಈ ವರ್ಷದಲ್ಲಿ ಜ್ಞಾನನಿಧಿಯಾಗಿ ರೂಪಗೊಳ್ಳಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮವನ್ನುದ್ದೇಶಿಸಿ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರ್‌ಮನ್ ಬಸವರಾಜ ಕೌಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿ; ಈ ಸಂಸ್ಥೆಯ ಮೇಲೆ ಸಿದ್ಧೇಶ್ವರ ಶ್ರೀಗಳ ಆಶೀರ್ವಾದವಿದೆ. ಅವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡ ಈ ಕಾಲೇಜು ಇಂದು ಎಲ್ಲರ ಪ್ರೀತಿಗೆ ಪಾತ್ರವಾಗಿದೆ. ಇಂದು ಅವರ ವಿಚಾರಗಳನ್ನು ಮಕ್ಕಳಿಗೆ ಉಣಬಡಿಸಿ ಹೊಸವರ್ಷವನ್ನು ಸ್ವಾಗತಿಸುವ ಕಾರ್ಯ ಮಾಡುತ್ತಿರುವುದಕ್ಕೆ ಹರ್ಷವೆನಿಸುತ್ತದೆ. ಪೂಜ್ಯರ ವಾಣಿಯನ್ನು ಕೇಳಿ ಮಕ್ಕಳು ಅದರಂತೆ ಬದುಕು ಕಟ್ಟಿಕೊಂಡರೇ ಬದುಕು ಬಂಗಾರವಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಕ್ಸಲಂಟ್ ಪ. ಪೂ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಮ. ಜುನಗೊಂಡ ವಿರಚಿತ “ಇದ್ದದ್ದು ಇದ್ದಂಗ್” ಎನ್ನುವ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು. ವಿದ್ಯಾರ್ಥಿನಿ ಸೌಜನ್ಯ ಚಿನ್ನನಗೌಡರ ಪ್ರಾರ್ಥಿಸಿದರು, ಕನ್ನಡ ವಿಭಾಗದ ಮುಖ್ಯಸ್ಥ ಶರಣಗೌಡ ಪಾಟೀಲ ನಿರೂಪಿಸಿದರು. ಆಂಗ್ಲ ಉಪನ್ಯಾಸಕ ಮುಸ್ತಾಕ ಮಲಘಾಣ ವಂದಿಸಿದರು.

