ಕುರ್ಚಿ ಕದನಕ್ಕೆ ಬಿಗ್ ಟ್ವಿಸ್ಟ್ | ಆಯವ್ಯಯ ಮಂಡನೆಗೆ ಸಿದ್ಧತೆ ಆರಂಭ | ಸಿಎಂ ಸಿದ್ದರಾಮಯ್ಯ ಭರವಸೆ
ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಗೊಂದಲ ಇತ್ಯರ್ಥವಾಗದೆ ಮುಂದುವರೆದಿರುವುದರ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ವರ್ಷದ ಮೊದಲ ದಿನವೇ ಕುರ್ಚಿ ಕದನಕ್ಕೆ ಬಿಗ್ ಟ್ವಿಸ್ಟ್ ನೀಡಿದ್ದಾರೆ.
ಈಗಾಗಲೇ 16 ಬಜೆಟ್ ಗಳನ್ನು ಮಂಡಿಸಿರುವ ಸಿಎಂ ಸಿದ್ದರಾಮಯ್ಯ ಅವರು, 17ನೇ ಬಜೆಟ್ ಅನ್ನು ನಾನೇ ಮಂಡಿಸುತ್ತೇನೆ. ಈ ತಿಂಗಳಿನಿಂದ ಬಜೆಟ್ ಗೆ ಸಿದ್ಧತೆ ನಡೆಸುವುದಾಗಿ ಗುರುವಾರ ಹೇಳಿದ್ದಾರೆ. ಈ ಮೂಲಕ ಹೊಸ ದಾಖಲೆ ಬರೆಯಲು ಸಿದ್ದರಾಮಯ್ಯ ಮುಂದಾಗಿದ್ದಾರೆ.
ಗುರುವಾರ ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ಅಧಿಕಾರಿಗಳು ಸಮ್ಮೇಳನ ಸಭಾಂಗಣದಲ್ಲಿ ಭೇಟಿಯಾಗಿ ಹೊಸ ವರ್ಷದ ಶುಭಾಶಯ ಕೋರಿದರು.
ಸರ್ಕಾರದ ಅಪರ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐಜಿಪಿಸಿಸಿಎಫ್ ಹಾಗೂ ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸಿಎಂ ಭೇಟಿಯಾಗಿ ಶುಭಾಶಯ ತಿಳಿಸಿದರು.
ಹೊಸ ವರ್ಷದ ಮೊದಲ ದಿನವಾದ ಇಂದು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವುದು ನಮ್ಮ ಪದ್ಧತಿ. ಹಿಂದೂ ಪದ್ಧತಿಯಲ್ಲಿ ಯುಗಾದಿ ಹೊಸ ವರ್ಷವಾಗಿದ್ದರೂ, ಇಂಗ್ಲೀಷ್ ಕ್ಯಾಲೆಂಡರ್ ನಂತೆ ಇಂದು ಪ್ರಾರಂಭವಾಗುವ ಹೊಸ ವರ್ಷವನ್ನು ವಿಶ್ವದಾದ್ಯಂತ ಸಂಭ್ರಮಾಚರಣೆಯಿಂದ ಸ್ವಾಗತಿಸಲಾಗುತ್ತದೆ. 2026 ರ ವರ್ಷ ರಾಜ್ಯಕ್ಕೆ ಸಮೃದ್ಧಿಯನ್ನು ತರಲಿ. ಬಡವರ ಹಾಗೂ ರೈತರ ಮೊಗದಲ್ಲಿ ಸಂತೋಷ ಕಾಣಲೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭ ಹಾರೈಸಿದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ನಾಡಿನ ಜನರಿಗೆ ಹೊಸ ವರ್ಷದ ಶುಭಾಶಯಗಳು, ಬಾಳಲ್ಲಿ ಹರ್ಷವನ್ನು ಉಂಟು ಮಾಡಲಿ ಎಂದು ಹೇಳಿದರು.
ಬಜೆಟ್ ಸಿದ್ದತೆ ಯಾವಾಗ ಆರಂಭ ಆಗಲಿದೆ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಈ ತಿಂಗಳಿನಿಂದ ಬಜೆಟ್ ಸಿದ್ದತೆ ಶುರು ಮಾಡುತ್ತೇನೆ ಎಂದರು. ಈ ಮೂಲಕ ಬಜೆಟ್ ಮುಗಿಯೋವರೆಗೂ ಕುರ್ಚಿ ಬದಲಾವಣೆ ಚರ್ಚೆ ಇಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಹಣಕಾಸು ಸಚಿವರು ಆಗಿರುವ ಸಿಎಂ ಸಿದ್ದರಾಮಯ್ಯ ಅವರು ಪ್ರತಿ ವರ್ಷ ಡಿಸೆಂಬರ್ ವೇಳೆಗಾಗಲೇ ಬಜೆಟ್ ತಯಾರಿಕೆಯ ಪೂರ್ವಭಾವಿ ಸಭೆಗಳನ್ನು ನಡೆಸುತ್ತಾರೆ. ಈ ವರ್ಷ ಜನವರಿಯಲ್ಲಿ ಸಭೆ ನಡೆಸುತ್ತಿದ್ದು, ಫೆಬ್ರವರಿ ಅಂತ್ಯಕ್ಕೆ ಅಥವಾ ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡಿಸುವ ಸಾಧ್ಯತೆ ಇದೆ.

