ಚಿಮ್ಮಡದಲ್ಲಿ ನಡೆದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಬಿ.ಎಂ. ಹಳಮನಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಸಮೂಹ ಶಿಕ್ಷಣ ಕಲಿಕೆಯ ಆಸಕ್ತಿ ಬೆಳೆಯಬೇಕು, ಮಗುವಿನ ಕಲಿಕಾ ಸಾಮರ್ಥ್ಯ ವೃದ್ದಿಸುವಲ್ಲಿ ಎಫ್.ಎಲ್.ಎನ್. ಆದಾರಿತ ಕಲಿಕಾ ಹಬ್ಬ ಸಹಕಾರಿಯಾಗಿದೆ ಎಂದು ಶಿಕ್ಷಣ ಸಂಯೋಜಕ ಬಿ.ಎಂ. ಹಳಮನಿ ಹೇಳಿದರು.
ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ಬಾಗಲಕೋಟ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಸಮನ್ವಯಾಧಿಕಾರಿಗಳ ಕಾರ್ಯಾಲಯ ಜಮಖಂಡಿ, ಸಮೂಹ ಸಂಪನ್ಮೂಲ ಕೇಂದ್ರ ಚಿಮ್ಮಡ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕ್ಲಷ್ಟರ್ ಮಟ್ಟದ ಎಫ್.ಎಲ್.ಎನ್. ಆಧರಿತ “ಕಲಿಕಾ ಹಬ್ಬ” ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದ ಅವರು ಎಫ್.ಎಲ್.ಎನ್. ಎಂದರೆ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತç, ಮಗುವಿನ ಕನಿಷ್ಠ ಕಲಿಕೆಯ ಮಾನದಂಡಗಳಾದ ಸ್ಪಷ್ಠ ಓದು ಶುಧ್ಧ ಬರಹ ಸರಳ ಲೆಕ್ಕಾಚಾರ ಸಾಮಥ್ಯವಾಗಿದೆ. ಯಾವ ಮಕ್ಕಳು ಸಾಮಾನ್ಯ ಕಲಿಕೆಯಲ್ಲಿ ಈ ಸಾಮರ್ಥ್ಯಗಳನ್ನು ಸಾಧಿಸಿಲ್ಲವೋ ಅಂಥಹ ಮಕ್ಕಳನ್ನು ಗುರುತಿಸಿ ಅವರಿಗೆ ಚಟುವಟಿಕೆ ಆಧಾರಿತ ವಿಶೇಷಭೋಧನೆಯ ಮೂಲಕ ಕಲಿಸುವ ಪ್ರಕ್ರಿಯೇಯಾಗಿದೆ ಎಂದರು.
ಸಿಆರ್‌ಪಿ ಸಮನ್ವಯ ಅಧಿಕಾರಿ ದ್ರಾಕ್ಷಾಯಿಣಿ ಮಂಡಿ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳ ಕಲಿಕಾ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಸರಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಲಿಕಾ ಪ್ರಮಾಣ ಗಣನೀಯವಾಗಿ ಹೆಚ್ಚುತಿದ್ದು ಖಾಸಗೀ ಶಾಲೆಗಳ ಮಕ್ಕಳೊಂದಿಗೆ ಸರಕಾರಿ ಶಾಲಾ ಮಕ್ಕಳೂ ಪ್ರತೀ ಹಂತದಲ್ಲಿ ಪೈಪೋಟಿ ನಡೆಸುತಿದ್ದಾರೆಂದರು.
ಕಾರ್ಯಕ್ರಮದ ಉದ್ಘಾಟಣೆಯನ್ನು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಬಂಗಾರೆವ್ವ ಜಾಲಿಕಟ್ಟಿ ನೆರವೇರಿಸಿದರು, ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷ ಅಡಿವೆಪ್ಪ ಪರೀಟ ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಶಿವಾನಂದ ಬಿರಾದರ, ಮುಖ್ಯ ಗುರುಮಾತೆ ಎಂ.ಎಸ್. ಹೊಸಮನಿ, ಹೆಣ್ಣು ಮಕ್ಕಳ ಶಾಲೆಯ ಎಸ್.ವೈ. ಬಿರಾದರ, ಉರ್ದು ಶಾಲೆಯ ಝೆಡ್. ಎಂ ಇಂಡಿಕರ, ಇಲಾಹಿ ಜಮಖಂಡಿ, ಹಿರಿಯ ಶಿಕ್ಷಕ ಬಿ.ಎಸ್. ಹಲಗಿ ಸೇರಿದಂತೆ ಹಲವು ಪ್ರಮುಖರು ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ಮಕ್ಕಳ ಹಸ್ತಪ್ರತಿ ಬಿಡುಗಡೆ ಹಾಗೂ ಅಕ್ಷರ ತೋರಣ ಅನಾವರಣಗೊಳಿಸಲಾಯಿತು.
ಕಾರ್ಯಕ್ರಮಕ್ಕೆ ಶಿಕ್ಷಕಿ ಶಿವಲೀಲಾ ರಾಸೂರ ಸ್ವಾಗತಿಸಿ ನಿರೂಪಿಸಿದರು. ನಿರ್ಮಲಾ ಬೀಳಗಿ ವಂದಿಸಿದರು.

