ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಬೆಂಗಳೂರಿನ ಯಲಹಂಕಾ ಬಳಿಯ ಕೋಗಿಲು ಲೇಔಟ್‌ನಲ್ಲಿ ಅಕ್ರಮವಾಗಿ ವಾಸವಾಗಿರುವ ಕುಟುಂಬಗಳ ಒತ್ತುವರಿ ತೆರವು ಕಾರ್ಯಾಚರಣೆ ಮಾಡುವಾಗ ಮುತವರ್ಜಿ ವಹಿಸುವ ಕಾಂಗ್ರೆಸ್ ಸರಕಾರ ಮುಳಗಡೆಯ ಸಂತ್ರಸ್ತರ ತ್ಯಾಗವನ್ನು ಮರೆತಂತೆ ಕಾಣುತ್ತದೆ ಅವರಿಗೆ ಸೂರು ನೀಡುವದರಲ್ಲಿ ಹಿಂದೆಟು ಹಾಕಿರುವ ಇಂಥಹ ಸರಕಾರಕ್ಕೆ ನಾಚಿಕೆ ಬರಬೇಕು ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಆರೋಪಿಸಿದರು.
ಪಟ್ಟಣದ ಅವರ ಸ್ವಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕೃಷ್ಣಾ ಮೇಲ್ದಂಡೆ ಯೋಜನೆಯ ಅಡಿಯಲ್ಲಿ ಮುಳಗಡೆಯಾಗಿ ನಿರಾಶ್ರಿತರಾಗಿರುವ ಮುಸ್ಲಿಂ ಸಮುದಾಯದ ದಲಿತ ಸಮುದಾಯದ ಅತ್ಯಂತ ಹಿಂದುಳಿದ ವರ್ಗಗಳ ಬಡಜನರು ಕೊಲ್ಹಾರ ಪುನರ್ವಸತಿ ಕೇಂದ್ರದಲ್ಲಿ ಕಳೆದ ೨೫ ವರ್ಷಗಳಿಂದ ಪತ್ರಾಸ ಸೆಡ್‌ನಲ್ಲಿ ಬಿಸಿಲು ಮಳೆ ಚಳಿ ಎನ್ನದೇ ಕುಟುಂಬ ಸಮೇತರಾಗಿ ವಾಸವಾಗಿರುವವರಿಗೆ ಮೂಲಭೂತ ಸೌಲಭ್ಯ ಒದಗಿಸಿ ಒಂದು ಸೂರು ಒದಗಿಸಿ ಕೊಡುವ ಸೌಜನ್ಯ ತೋರದೇ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಮತ್ತು ಈ ಕ್ಷೇತ್ರವನ್ನು ಪ್ರತಿನಿಧಿಸುವ ಸಚಿವ ಶಿವಾನಂದ ಪಾಟೀಲ ತಕ್ಷಣವೇ ರಾಜಿನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಹೈಕಮಾಂಡ್ ಹೇಳಿದೆ ಅಂತ ಅಕ್ರಮ ವಲಸಿಗರಿಗೆ ತಕ್ಷಣವೇ ವಸತಿ ಸೌಕರ್ಯ ಒದಗಿಸಲು ಮುಂದಾಗಿರುವ ಸರಕಾರಕ್ಕೆ ಅತೀವೃಷ್ಟಿಯಿಂದ ಅಧಿಕ ಪ್ರಮಾಣದ ಮಳೆಯಾಗಿ ನಿರಾಶ್ರಿತರಾದ ಉತ್ತರ ಕರ್ನಾಟಕದ ಜನರ ಬಗ್ಗೆ ಇಲ್ಲದ ಕಾಳಜಿ ಕೋಗಿಲು ನಿರಾಶ್ರಿತರಿಗೆ ತೋರಿಸುತ್ತಿರುವದು ಕೇರಳ ರಾಜ್ಯದಲ್ಲಿ ಮುಂಬರುವ ಚುಣಾವಣೆಯವನ್ನು ಗಮನದಲ್ಲಿಟ್ಟು ತೋರಿಸುವಂತಾಗಿದ್ದು ಕರ್ನಾಟಕದ ಜನತೆಗೆ ವಂಚಣೆ ಮಾಡಲು ಹೊರಟಿರುವ ಈ ಸರಕಾರಕ್ಕೆ ಮಾನವೀಯತೆ ಮೌಲ್ಯವೇ ಗೊತ್ತಿಲ್ಲ ಎನ್ನುವಂತಾಗಿದೆ. ರಾಜ್ಯದ ೩೭.೪೮ ಲಕ್ಷ ಬಡವರ ವಸತಿ ಅರ್ಜಿಗಳನ್ನು ಬದಿಗಿಟ್ಟು ರೋಹಿಂಗ್ಯಾಗಳಿಗೆ ಬಾಂಗ್ಲಾ ವಲಸಿಗರಿಗೆ ವಸತಿ ನೀಡಲು ಮುಂದಾಗಿರುವದು ಓಲೈಕೆ ರಾಜಕಾರಣ ಮಾಡುವಂತಾಗಿದ್ದು ರಾಜ್ಯದಲ್ಲಿಯೂ ಕೂಡ ಅನೇಕ ಕಡೆ ವಸತಿ ಸೌಲಬ್ಯವಿಲ್ಲದೇ ನರಳಾಡುತ್ತಿರುವ ಕುಟುಂಬಗಳಿಗೆ ಕರುಣೆ ತೋರುವ ಕನಿಷ್ಠ ಸೌಜನ್ಯವನ್ನಾದರೂ ತೋರಿಸಬೇಕು ಸಂತ್ರಸ್ತರಿಗೂ ನಿರಾಶ್ರಿತರಿಗೂ ನ್ಯಾಯ ಸಿಗುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

