ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿ ಕಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಶಾಲೆ ಹಾಗೂ ಕಾಲೇಜುಗಳು ಮಕ್ಕಳ ಶಿಕ್ಷಣ, ಶಿಸ್ತು ಮತ್ತು ಸಂಸ್ಕಾರಗಳನ್ನು ಬೆಳೆಸುವ ಪವಿತ್ರ ಕೇಂದ್ರಗಳು. ಇಂತಹ ಶಿಕ್ಷಣ ಕೇಂದ್ರಗಳು ಶಾಲಾ ವಾರ್ಷಿಕೋತ್ಸವದಲ್ಲಿ ಮಕ್ಕಳಿಗೆ ಅಶ್ಲೀಲ ಹಾಗೂ ಅಸಭ್ಯ ಗೀತೆಗಳಿಗೆ ನೃತ್ಯ ಮಾಡಿಸುವ ಪ್ರವೃತ್ತಿ ಅತ್ಯಂತ ಖಂಡನೀಯವಾಗಿದೆ ಎಂದು ಕರವೇ ಸ್ವಾಭಿಮಾನಿ ಬಣದ ತಾಲ್ಲೂಕು ಅಧ್ಯಕ್ಷ ನಾಗರಾಜ ಕುಂಬಾರ ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಗಳಲ್ಲಿ ಅಶ್ಲೀಲ ಗೀತೆಗಳಿಗೆ ನೃತ್ಯ ಮಾಡುವುದನ್ನು ನಿಷೇಧಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ದಿಂದ ತಹಶೀಲ್ದಾರ ಸಂತೋಷ ಮ್ಯಾಗೇರಿ ರವರಿಗೆ ಬುಧವಾರ ಮನವಿ ಸಲ್ಲಿಸಿ ಮಾತನಾಡಿದರು.
ಆದರೆ ಕೆಲವು ಶಾಲಾ ಕಾಲೇಜುಗಳ ವಾರ್ಷಿಕೋತ್ಸವ ಸಮಾರಂಭದಲ್ಲಿ ಒಳ್ಳೆಯ ದೇಶ ಭಕ್ತಿ ಗೀತೆ, ಭಾವ ಗೀತೆ, ಕನ್ನಡ ನಾಡ ನುಡಿ ಗೀತೆಗಳ ನೃತ್ಯಗಳಿಗೆ ಆದ್ಯತೆ ನೀಡದೆ ಅಶ್ಲೀಲ ಗೀತೆಗಳಿಗೆ ನೃತ್ಯ ಮಾಡಿಸುತ್ತಿರುವುದು ಪ್ರತಿ ವರ್ಷ ಕಂಡು ಬಂದಿರುತ್ತದೆ. ಕಾರಣ ಈ ವರ್ಷದಿಂದ ಯಾವುದೇ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ಮಕ್ಕಳಿಗೆ ಅಶ್ಲೀಲ ಗೀತೆಗಳಿಗೆ ನೃತ್ಯ ಮಾಡಿಸಬಾರದು. ಒಂದು ವೇಳೆ ಮಾಡಿಸಿದರೆ ಕರವೇ ಸ್ವಾಭಿಮಾನ ಬಣದಿಂದ ಉಗ್ರ ಹೋರಾಟ ಮಾಡಲಾಗುವದು. ಆದ್ದರಿಂದ ಮಾನ್ಯರು ತಾವು ಇದಕ್ಕೆ ಅವಕಾಶ ಮಾಡಿಕೊಡದೆ ಕೊಲ್ಹಾರ ತಾಲೂಕಿನಲ್ಲಿರುವ ಎಲ್ಲ ಶಾಲಾ ಕಾಲೇಜುಗಳಿಗೆ ತಾವು ಅದೇಶಿಸಬೇಕೆಂದು ತಮ್ಮಲ್ಲಿ ವಿನಂತಿಸುವೆ ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಪರಶುರಾಮ ಚಿಮ್ಮಲಗಿ, ರಫೀಕ್ ಕಡ್ಡಾಗೋಳ, ಸುನೀಲ ಕುದರಿ, ಸುದೀಪ್ ಗುಂಜಾಳಕರ, ಬಸವರಾಜ ಅಪ್ಪಣ್ಣವರ ಇದ್ದರು.

