ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದ MES ಪಬ್ಲಿಕ್ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹಮ್ಮಿಕೊಂಡ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮಕ್ಕೆ ಪಟ್ಟಣ ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಧೋತ್ರೆ ಸಸಿ ನೆಟ್ಟು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪರಿಸರ ಸಂರಕ್ಷಣೆ ಸೇರಿದಂತೆ ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದು, ಅವರ ಕಾರ್ಯಗಳು ಅತ್ಯಂತ ಶ್ಲಾಘನೀಯವಾಗಿವೆ ಎಂದು ಹೇಳಿದರು.
MES ಪಬ್ಲಿಕ್ ಶಾಲೆಯ ಅಧ್ಯಕ್ಷ ಮೋಹನ ಚೋಳಕೆ ಮಾತನಾಡಿ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡಿಕೊಂಡಾಗ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯವನ್ನು ನೀಡಲು ಸಾಧ್ಯ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಾ ಬಂದಿದೆ ಎಂದರು.
ಶಿಕ್ಷಕರಾದ ರಮೇಶ ಮಲ್ಲಾಡಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಹೆಸರಿನಲ್ಲಿ ಒಂದು ಗಿಡವನ್ನು ನೆಟ್ಟು ಅದನ್ನು ಸಂರಕ್ಷಿಸಿದರೆ ಪರಿಸರ ಉಳಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವಲಯದ ಮೇಲ್ವಿಚಾರಕರಾದ ಮಹಾಂತೇಶ ವಿ.ಎ. ಮಾತನಾಡಿ, ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಹಿಸುತ್ತಿದ್ದು, ಇದುವರೆಗೆ 56 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸುಮಾರು 45 ಕೋಟಿ ರೂಪಾಯಿ ಸುಜ್ಞಾನ ನಿಧಿ ಶಿಷ್ಯವೇತನ ನೀಡಲಾಗಿದೆ ಎಂದು ತಿಳಿಸಿದರು.
ತಾಲೂಕು ಕೃಷಿ ಮೇಲ್ವಿಚಾರಕರಾದ ಸುದೀಪ ಕಟಗೇರಿ ಮಾತನಾಡಿ, ಯೋಜನೆಯ ಮೂಲಕ ರೈತರಿಗೆ ಹೈನುಗಾರಿಕೆ, ಸ್ವಉದ್ಯೋಗ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ರಾಮಕೃಷ್ಣ ಕುಲಕರ್ಣಿ, ನಕುಲ ಚೋಳಕೆ, ಪ್ರಾಂಶುಪಾಲರಾದ ಆರ್.ಐ. ಹಿರೇಮಠ, ಡಿ.ಸಿ. ಗಚ್ಚೀನಕಟ್ಟಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮಲ್ಲಿಕಾರ್ಜುನ ಮಾನೆ ನಿರೂಪಿಸಿ ವಂದಿಸಿದರು.

