ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕಿನ ಟಾಕಳಿ ಗ್ರಾಮದ ಪ್ರಕಾಶ ಲವಟೆ ವಸ್ತಿಯ ಅಂಗನವಾಡಿ ಕೇಂದ್ರದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳಿಲ್ಲದೆ ಮಕ್ಕಳ ಶಿಕ್ಷಣ ಹಾಗೂ ಪೋಷಣೆಗೆ ತೊಂದರೆಯಾಗುತ್ತಿದೆ ಎಂದು ಲವಟೆ ವಸ್ತಿ ಪಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಗ್ಯಾಸ್ ಸಿಲಿಂಡರ್, ತೂಕ ಯಂತ್ರ, ಅಡುಗೆ ಪಾತ್ರೆಗಳು ಹಾಗೂ ಅಗತ್ಯ ದಾಖಲೆಗಳು ಇಲ್ಲದೆ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಈ ಹಿಂದೆ ಕಾರ್ಯನಿರ್ವಹಿಸಿದ್ದ ಅಂಗನವಾಡಿ ಕಾರ್ಯಕರ್ತೆಯ ಸ್ಥಾನಕ್ಕೆ ನೇಮಕಗೊಂಡ ಅಂಗನವಾಡಿ ಕಾರ್ಯಕರ್ತೆ ಗೆ ಆವೇಳೆ, ಹಸ್ತಾಂತರಿಸದೆ ಅಂಗನವಾಡಿಗೆ ಸಂಬಂಧಿಸಿದ ದಾಖಲೆಗಳು, ಅಡುಗೆ ಸಾಮಗ್ರಿಗಳು ಹಾಗೂ ಮಕ್ಕಳ ಆಟಿಕೆಗಳನ್ನು ಪಂಚಾಕ್ಷರಿ ಲವಟೆ ಅವರ ವಸ್ತಿಯಲ್ಲಿ ಇಟ್ಟು ಹೋಗಿದ್ದು, ಹೊಸದಾಗಿ ನೇಮಕಗೊಂಡ ಕಾರ್ಯಕರ್ತೆಗೆ ಯಾವುದೇ ಸಾಮಗ್ರಿ ಹಾಗೂ ದಾಖಲೆಗಳನ್ನು ಹಸ್ತಾಂತರಿಸಿಲ್ಲ ಎಂದು ಪಾಲಕರು ಆರೋಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜ ವಾಲಿ ಅವರು, ಸರಕಾರದ ಆದೇಶದಂತೆ 2023ರಲ್ಲಿ ಪ್ರಕಾಶ ಲವಟೆ ವಸ್ತಿಯಲ್ಲಿ ಹೊಸ ಅಂಗನವಾಡಿ ಕೇಂದ್ರ ಪ್ರಾರಂಭಿಸಲಾಗಿತ್ತು. ಆದರೆ, ಮೇಲ್ವಿಚಾರಕಿಯ ಸೂಚನೆಯ ಮೇರೆಗೆ ಆಗಿನ ಚಾರ್ಜ್ ತೆಗೆದುಕೊಂಡ ಕಾರ್ಯಕರ್ತೆ ಪಂಚಾಕ್ಷರಿ ಲವಟೆ ವಸ್ತಿಯಲ್ಲಿ ಕೇಂದ್ರ ಆರಂಭಿಸಿದ್ದರು. ಆ ವಸ್ತಿಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದು, ಪ್ರಕಾಶ ಲವಟೆ ವಸ್ತಿಯಿಂದ ಸುಮಾರು 4 ಕಿ.ಮೀ. ದೂರವಿರುವುದರಿಂದ ಮಕ್ಕಳಿಗೆ ಅಲ್ಲಿ ತೆರಳಲು ಸಾರಿಗೆ ಸೌಕರ್ಯದ ಕೊರತೆ ಉಂಟಾಗಿತ್ತು. ಹೀಗಾಗಿ ಯಾವುದೇ ಮಕ್ಕಳು ಆ ಕೇಂದ್ರಕ್ಕೆ ಹೋಗಿರಲಿಲ್ಲ ಎಂದರು.
ಆ ಆ ಸಮಯದಲ್ಲಿ ಅಂಗನವಾಡಿಯಲ್ಲಿಯ ಸೌಲಭ್ಯ ನಮ್ಮ ಮಕ್ಕಳಿಗೆ 2023 ರಿಂದ 2025 ಜೂನ್ ವರೆಗೆ ಸಿಕ್ಕಿಲ್ಲ ಇದನ್ನು ಸರ್ಕಾರದ ಅಧಿಕಾರಿಗಳು ತನಿಖೆ ನಡೆಸಬೇಕೆಂದು ಮನವಿ ಮಾಡಿದರು.
2025ರಲ್ಲಿ ಪುನಃ ಪ್ರಕಾಶ ಲವಟೆ ವಸ್ತಿಯಲ್ಲಿ ಅಂಗನವಾಡಿ ಕೇಂದ್ರ ಆರಂಭಿಸಲಾಗಿದ್ದು, ಆರಂಭವಾಗಿ ಆರು ತಿಂಗಳು ಕಳೆದರೂ ಇಲ್ಲಿಯವರೆಗೆ ಯಾವುದೇ ಅಡುಗೆ ಸಾಮಗ್ರಿಗಳು ಹಾಗೂ ಮೂಲಭೂತ ಸೌಕರ್ಯಗಳು ಒದಗಿಸಿಲ್ಲ. ಈ ಕುರಿತು ಚಡಚಣ ಸಿ.ಡಿ.ಪಿ.ಓ. ಅವರನ್ನು ಹಲವಾರು ಬಾರಿ ಭೇಟಿಯಾಗಿ ಮನವಿ ಸಲ್ಲಿಸಿದರೂ, “ಸ್ವಲ್ಪ ಸಮಸ್ಯೆ ಇದೆ, ಬಗೆಹರಿಸಿ ಎಲ್ಲಾ ಸಾಮಗ್ರಿಗಳನ್ನು ಕೊಡಿಸಲಾಗುವುದು” ಎಂದು ಹೇಳುತ್ತಾ ಬಂದಿದ್ದು, ಇದುವರೆಗೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ದೂರಿದರು.
ಅಡುಗೆ ಮಾಡಲು ಗ್ಯಾಸ್ ಸಿಲಿಂಡರ್ ಹಾಗೂ ಪಾತ್ರೆಗಳು ಇಲ್ಲದ ಕಾರಣ, ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಕಟ್ಟಿಗೆಯ ಒಲೆ ಹೊತ್ತಿಸಿ ಮಕ್ಕಳಿಗೆ ಆಹಾರ ತಯಾರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಪಾತ್ರೆಗಳಿಲ್ಲದ ಕಾರಣ ಪಾಲಕರೇ ಹಣ ಸಂಗ್ರಹಿಸಿ ಪಾತ್ರೆಗಳನ್ನು ಒದಗಿಸಿದ್ದಾರೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಅಂಗನವಾಡಿ ಕೇಂದ್ರಕ್ಕೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಇಲ್ಲವಾದಲ್ಲಿ ಸಿ.ಡಿ.ಪಿ.ಓ. ಕಚೇರಿ ಎದುರು ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಾಯಬಣ್ಣ ಲವಟೆ, ಇಬ್ರಾಹಿಂಸಾಬ ಯಾತಗೀರ, ಪ್ರಕಾಶ ಲವಟೆ, ಉಮೇಶ ಗಚ್ಚಿನಕಟ್ಟಿ ಸೇರಿದಂತೆ ಪ್ರಕಾಶ ಲವಟೆ ವಸ್ತಿಯ ಪಾಲಕರು ಉಪಸ್ಥಿತರಿದ್ದರು.

