ಉದಯರಶ್ಮಿ ದಿನಪತ್ರಿಕೆ
ಚಡಚಣ: ಭಾರತದ ಪ್ರತಿಯೊಂದು ಭಾಷೆಯೂ ದೇಶದ ಅಮೂಲ್ಯ ಸಂಪತ್ತಾಗಿದ್ದು, ಎಲ್ಲ ಭಾಷೆಗಳನ್ನು ಗೌರವದಿಂದ ಕಾಣಬೇಕು. ಭಾಷೆಗಳ ನಡುವೆ ಶ್ರೇಷ್ಠತೆ ಎಂಬ ಭೇದಭಾವ ಸಲ್ಲದು. ಎಲ್ಲರೂ ಸಾಮರಸ್ಯದಿಂದ ಬದುಕಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮಹಾರಾಷ್ಟ್ರ ರಾಜ್ಯದ ಮಡ್ಡಿ ಸಂಖ ಗ್ರಾಮದ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಮಹಾರಾಷ್ಟ್ರದ ಜತ್ತ ತಾಲೂಕಿನ ಸಂಖ ಗ್ರಾಮದಲ್ಲಿ ಆಯೋಜಿಸಿದ್ದ ಗಡಿನಾಡು ಕನ್ನಡ ಸಾಹಿತ್ಯ–ಸಂಸ್ಕೃತಿ ಸಂಭ್ರಮ ಹಾಗೂ ನಲಿ–ಕಲಿ ಸಾಮಗ್ರಿ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಡಿನಾಡು ಪ್ರದೇಶದ ಕನ್ನಡಿಗರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳನ್ನು ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ಸರ್ಕಾರಗಳು ಸೇರಿ ಬಗೆಹರಿಸಬೇಕು. ಈ ಭಾಗದ ಕನ್ನಡ ಶಾಲೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರತಿ ವರ್ಷ ಕನಿಷ್ಠ 1೦೦ ಕೋಟಿ ರೂ. ಅನುದಾನ ನೀಡಬೇಕೆಂದು ಅವರು ಕರ್ನಾಟಕ ಸರ್ಕಾರವನ್ನು ಮನವಿ ಮಾಡಿದರು.
ಜೊತೆಗೆ ಈ ಭಾಗದ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬೇಕು. ವಿಜಯಪುರ–ಸಂಖ–ಗುಡ್ಡಾಪುರ ಮಾರ್ಗವಾಗಿ ಮುಂಬೈ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾದರೆ ಈ ಭಾಗದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾರಾಷ್ಟ್ರ ರಾಜ್ಯದ ಜತ್ತ ಶಾಸಕ ಗೋಪಿಚಂದ ಪಡಳಕರ್ ಮಾತನಾಡಿ, ತಮಗೆ ಮರಾಠಿ ಹಾಗೂ ಕನ್ನಡ ಎರಡೂ ಭಾಷೆಗಳು ಸಮಾನವಾಗಿವೆ. ಜತ್ತ ಭಾಗದ ಅಭಿವೃದ್ಧಿಗೆ ಸದಾ ಸಿದ್ಧನಿದ್ದೇನೆ ಎಂದು ಹೇಳಿದರು.
ಇಲ್ಲಿನ ಕನ್ನಡಿಗರ ಸಮಸ್ಯೆಗಳನ್ನು ಮಹಾರಾಷ್ಟ್ರ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಬಸವೇಶ್ವರ ಮಹಾಮಂಡಳದ ಮೂಲಕ ಕನ್ನಡ ಶಾಲೆಗಳು ಹಾಗೂ ಲಿಂಗಾಯತ ಸಮಾಜಕ್ಕೆ ನೆರವಾಗುವ ಯೋಜನೆಗಳನ್ನು ರೂಪಿಸಲಾಗುವುದು. ಕನ್ನಡ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಹಾಗೂ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲೇ ನಡೆಸುವಂತೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು. ಬಸವೇಶ್ವರರ ವಚನಗಳ ಮರಾಠಿ ಅನುವಾದ ಕಾರ್ಯ ಆರಂಭವಾಗಿದ್ದು, ಸಂಖದಲ್ಲಿ ಬಸವೇಶ್ವರ ಅಧ್ಯಯನ ಪೀಠ ಸ್ಥಾಪನೆಗೆ ಮನವಿ ಮಾಡಲಾಗುವುದು ಎಂದರು.
ಮಹಾರಾಷ್ಟ್ರದ ಕನ್ನಡ ಶಾಲೆಗಳಿಗೆ ನಲಿ–ಕಲಿ ಸಾಹಿತ್ಯ ವಿತರಿಸಿ ಮಾತನಾಡಿದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸೋಮಣ್ಣ ಬೇವಿನಮರದ ಅವರು, ಪ್ರಾಧಿಕಾರವು ಗಡಿನಾಡು ಕನ್ನಡಿಗರ ಹಿತಕ್ಕಾಗಿ ಸದಾ ಶ್ರಮಿಸುತ್ತಿದ್ದು, ಅವರ ಸಮಸ್ಯೆಗಳ ಪರಿಹಾರಕ್ಕೆ ಕರ್ನಾಟಕ ಸರ್ಕಾರದೊಂದಿಗೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿನ ಕನ್ನಡ ಶಾಲೆಗಳ ಉನ್ನತಿಗಾಗಿ ಇನ್ನೂ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ತಿಳಿಸಿದರು.
ಬೆಳಿಗ್ಗೆ ಭುವನೇಶ್ವರಿ ದೇವಿಯ ಪ್ರತಿಮೆಯೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ವಿವಿಧ ಕಲಾತಂಡಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು. ಇದೇ ಸಂದರ್ಭದಲ್ಲಿ ಪ್ರಾಧಿಕಾರದಿಂದ ಶಾಲೆಗೆ ಮಂಜೂರಾದ 3೦ ಲಕ್ಷ ರೂ.ಗಳ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಯನ್ನು ಡಾ. ಸೋಮಣ್ಣ ಬೇವಿನಮರದ ಅವರು ಉದ್ಘಾಟಿಸಿದರು.
ಮಧ್ಯಾಹ್ನ ಉಪನ್ಯಾಸಗೋಷ್ಠಿ ಹಾಗೂ ಕವಿಗೋಷ್ಠಿಗಳು ಜರುಗಿದವು.
ಸಂಜೆಯ ಸಮಾರೋಪ ಸಮಾರಂಭದಲ್ಲಿ ಡಾ. ಕೆ.ಕೆ. ಪತ್ತಾರ ಅವರು ಸಮಾರೋಪ ನುಡಿಗಳನ್ನು ನೀಡಿದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಂಡವು.
ಸಮಾರಂಭದ ಯಶಸ್ಸಿಗೆ ಕಿರಣ ಪಾಟೀಲ, ವಿಜಯ ಬಿರಾದಾರ, ಗುರುಬಸು ವಗ್ಗೋಲಿ, ಅಜಯ್ ಬಿರಾದಾರ, ಕುಮಾರ್ ವಿಠೇಕರ ಹಾಗೂ ಶಾಲಾ ಸಿಬ್ಬಂದಿ ಶ್ರಮಿಸಿದರು. ಜತ್ತ ತಾಲೂಕಿನ ಅನೇಕ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾರಂಭಕ್ಕೆ ಮೆರುಗು ತಂದರು.
ಕವಿತಾ ಪಾಟೀಲ್ ಆಶಯ ನುಡಿಗಳನ್ನು ಹೇಳಿ, ಕರಡಿ ಗುರುಗಳು ನಿರೂಪಣೆ ನಡೆಸಿದರು. ಕಿರಣ್ ಪಾಟೀಲ ವಂದನಾರ್ಪಣೆ ಮಾಡಿದರು.
ವೇದಿಕೆಯಲ್ಲಿ ಗುರುಪಾದ ಶಿವಾಚಾರ್ಯರು, ಸಮ್ಮೇಳನಾಧ್ಯಕ್ಷ ಗುರುಪಾದ ಕುಂಬಾರ, ಡಾ. ಆರ್.ಕೆ. ಪಾಟೀಲ, ಗುರು ಪಾಟೀಲ, ಕಿರಣ ಪಾಟೀಲ, ಚಂದ್ರಶೇಖರ ಗೊಬ್ಬಿ, ಸರ್ದಾರ್ ಪಾಟೀಲ, ಕರಬಸು ಲವಂಗಿ, ಧರೆಪ್ಪ ಕಟ್ಟಿಮನಿ, ಕವಿತಾ ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

