ನಾಡು ಕಂಡ ಶ್ರೇಷ್ಟ ಶತಮಾನದ ವಿಶ್ವ ಸಂತ, ಅಲ್ಲಮನ ವಾರಸುದಾರ ನಡೆ-ನುಡಿಗಳನ್ನೊಂದಾಗಿಸಿದ ನಮ್ಮೆಲ್ಲರ ದೈವ ಶ್ರೀ ಸಿದ್ದೇಶ್ವರ ಶ್ರೀ ಗಳ ಪುಣ್ಯಸ್ಮರಣೆಯ ನಿಮಿತ್ತ ಪ್ರತಿ ವರ್ಷ ಜನೇವರಿ 1 ಹಾಗೂ 2 ರಂದು ನಡೆಯಲಿರುವ ಗುರುನಮದ ನಿಮಿತ್ಯ ಈ ಶಬ್ದ ನಮನ
ಲೇಖನ
– ಜಿ.ಬಿ.ಸಾಲಕ್ಕಿ
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
“ಸತ್ಯವೂ ಇಲ್ಲ, ಅಸತ್ಯವೂ ಇಲ್ಲ, ಸಹಜವೂ ಇಲ್ಲ, ಅಸಹಜವೂ ಇಲ್ಲ, ಇಲ್ಲ, ಇಲ್ಲವೆಂಬುದು ತಾನಿಲ್ಲ ಗುಹೇಶ್ವರ ನೆಂಬುದು ತಾ ಬಯಲು”
ಎಂಬ ಅಂತಿಮ ಅಭಿವಂದನೆ ಯೊಂದಿಗೆ ವಿಶ್ವದ ದಾರ್ಶನಿಕರಾದ ಸಾಕ್ರೆಟಿಸ ಪ್ಲ್ಯಾಟೊ , ಅರಿಸ್ಟಾಟಲ, ಝೆನ್, ಅಲ್ಲಮ, ಅಣ್ಣ ಬಸವಣ್ಣರಂತ ರವರ ಸಾಲಿಗೆ ಸೇರಿದ ನಡೆ-ನುಡಿಗಳನ್ನು ಒಂದಾಗಿಸಿದ ವಿಶ್ವಸಂತ ಶ್ರೀ ಸಿದ್ದೇಶ್ವರ ಶ್ರೀಗಳು ಕಾಯಿ-ಕರ್ಪೂರ, ಹಾರ-ತುರಾಯಿ, ಪಲ್ಲಕ್ಕಿಗಳಿಂದ ಅತೀ ದೂರವಿದ್ದ ಈ ಶತಮಾನ ಕಂಡ ಬ್ರಹ್ಮ ಖು(ರು)ಷಿ ತಮ್ಮ ಅಗಲುವಿಕೆಯ ನಂತರ.. “ಯಾವ ಗದ್ದುಗೆ, ಸ್ಮಾರಕಗಳೂ ಬೇಡ, ದೇಹವನ್ನು ಬೆಂಕಿಗೆ ಅರ್ಪಿಸಿ ಬಿಡಿ ನಾನು ಆವಿ, ಭಸ್ಮವಾಗಿ ಆಶ್ರಮದ ಗಿಡಗಳ ಹೂ ಎಲೆಗಳ ಮೇಲೆ ವಾಸವಾಗಿರ್ತಿನಿ” ಎಂಬ ಇಚ್ಛೆಯಂತೆ ತಮ್ಮ ಆಯುಷ್ಯವನ್ನೂ ದಾನಮಾಡಿದ ಅಲ್ಲಮನ ವಾರಸುದಾರರು ನಮ್ಮ ಬುದ್ದೀಜಿ..
1940ರ ಅಕ್ಟೋಬರ 24ರಂದು ವಿಜಯಪುರ ಜಿಲ್ಲೆಯ ಬಿಜ್ಜರಗಿಯ 200 ಎಕರೆ ಜಮೀನದಾರ, 8 ಅಂಕಣದ ಮನೆ ಹೊಂದಿದ ಶ್ರೀ ಓಗೆಪ್ಪಗೌಡರು ಹಾಗೂ ಸಂಗಮ್ಮ ತಾಯಿಯವರ ಚೊಚ್ಚಲಮಗನಾದ ಶ್ರೀ ಸಿದ್ದನಗೌಡರು ಪ್ರಾಥಮಿಕ ಶಿಕ್ಷಣ ಮುಗಿಸಿದ್ದು ಬಿಜ್ಜರಗಿಯಲ್ಲಿ. ಅದೇ ವೇಳೆ ಆ ಭಾಗದಲ್ಲಿ ಪ್ರವಚನಕ್ಕೆ ಆಗಮಿಸಿದ ಶ್ರೀ ಮಲ್ಲಿಕಾರ್ಜುನ ಶ್ರೀಗಳ ಪ್ರಭಾವಕ್ಕೊಳಗಾಗಿ ಆಧ್ಯಾತ್ಮದ ಕಡೆಗೆ ವಾಲಿ ಅವರ ಶಿಷ್ಯತ್ವ ಸ್ವೀಕರಿಸಿದ್ದು ಅಂದು ಎಸ್.ಓ.ಬಿರಾದಾರ ರವರು ಶ್ರೀ ಸಿದ್ದೇಶ್ವರ ಶ್ರೀಗಳಾದದ್ದು ಅವರ ಪೂರ್ವಾಶ್ರಮದ ಇತೀಹಾಸ.
ಮಹಾಗುರು ಮಲ್ಲಿಕಾರ್ಜುನರ ಅನುಯಾಯಿಗಳಾಗಿ ವಿಜಯಪೂರದಲ್ಲಿ ಮಾಧ್ಯಮಿಕ ಶಿಕ್ಷಣದಲ್ಲಿದ್ದಾಗ ಶ್ರೀ ಸಿದ್ದೇಶ್ವರ ದೇವಸ್ಥಾನದ ಪಕ್ಕದ ಕಪಿಲೇಶ್ವರ ದೇವಸ್ಥಾನದಲ್ಲಿ ಪ್ರತಿದಿನ ನಾಲ್ಕಾರು ಘಂಟೆ ಧ್ಯಾನಾಸಕ್ತರಾಗುವದು ಅವರ ಯೋಗ. ಶ್ರೀ ಮಲ್ಲಿಕಾರ್ಜುನ ಗುರುಗಳ ಪ್ರವಚನ ಚಡಚಣದಲ್ಲಿ ನಡೆದಾಗ ಶ್ರೀಗಳು “ನಮ್ಮ ಸಿದ್ದ ಶ್ಯಾಣಾ ಅದಾನಪಾ ಅಂವನ್ನ ಸಾಲಿಕಲಿಸಿರೆಪಾ” ಎಂದು ಆ ಊರಿನ ಗಣ್ಯರಾದ ಶ್ರೀ ರೇವಣಸಿದ್ದಪ್ಪ ಅವಜಿಯವರಿಗೆ ಹೇಳಿದ್ದನ್ನು ಲಿಂ.ರೇವಣಸಿದ್ದಪ್ಪ ಅವಜಿಯವರು ನಮ್ಮ ಮುಂದೆ ಹೇಳಿದ್ದು ಸರಿಯಾಗಿ ಜ್ಞಾಪಕದಲ್ಲಿದೆ. ಓದಿನೊಂದಿಗೆ ಮಲ್ಲಿಕಾರ್ಜುನ ಶ್ರೀಗಳ ಪ್ರವಚನವಿದ್ದಲ್ಲಿಗೆ ಹೋಗಿ ಟಿಪ್ಪಣೆ ಮಾಡುವದು ಅವರ ಭಕ್ತಿ. ತಮ್ಮ19 ನೆಯ ವಯಸ್ಸಿನಲ್ಲಿ 1959 ರಲ್ಲಿ ಗುರುಗಳ ಪ್ರವಚನ ರಚಿಸಿ ಆ ಬೃಹತ್ ಗ್ರಂಥಕ್ಕೆ ಆ
ಲೇಖಕರು ಶ್ರೀ ಮಲ್ಲಿಕಾರ್ಜುನ ಶ್ರೀಗಳು ಎಂದು ಪ್ರಕಟಿಸಿದ ಮಹಾನ್ ವ್ಯಕ್ತಿತ್ವ ಶ್ರೀ ಸಿದ್ದೇಶ್ವರ ಶ್ರೀಗಳದ್ದು. ಆ ಗ್ರಂಥದ ಮಾರಾಟದ ಮೊತ್ತದಲ್ಲೇ ಶ್ರೀ ಮಲ್ಲಿಕಾರ್ಜುನ ಶ್ರೀ ಗಳ ಗುರುಗಳಾದ ಶ್ರೀ ಶಿವಾನಂದ ಶ್ರೀಗಳ ಮಠವನ್ನು ಗದಗದಲ್ಲಿ ಕಟ್ಟಿದರು. ಕೋಲ್ಹಾಪೂರದ ವಿಶ್ವವಿದ್ಯಾಲಯದಿಂದ ಎಂ.ಎ ಪದವಿಯನ್ನು ತತ್ವಜ್ಞಾನದಲ್ಲಿ ಪಡೆದು ಜ್ಞಾನದಾಸೋಹದಲ್ಲಿ ತೋಡಗಿದರು.ವಿಜಯಪೂರದ ಕರಡಿ ತೋಟದಲ್ಲಿ ವಾಸ್ತವ್ಯ ಕರ್ನಾಟಕ ಮಹಾರಾಷ್ಟ್ರ ಗಳಲ್ಲಿ ಪ್ರವಚನ.ಹೊದ್ದ ಕಂಬಳಿ, ಹಿಡಿದ ಕೋಲು ಶ್ರೀ ಗುರು ಮಲ್ಲಿಕಾರ್ಜುನ ರ ಆಸ್ತಿಯಾದರೇ ಜೇಬಿಲ್ಲದ ಶ್ವೇತ ಅಂಗಿ ಶ್ರೀ ಸಿದ್ದೇಶ್ವರ ಶ್ರೀಗಳದ್ದು.ವಿಜಯಪುರ ದ ಮಹಾಜನತೆ ಗುರುದ್ವಯರ ಪ್ರವಚನಕ್ಕಾಗಿ ನಿರ್ಮಿಸಿದ ಶ್ರೀ ಸಿದ್ದೇಶ್ಶರ ದೇವಸ್ಥಾನದ ಪಕ್ಕದಲ್ಲಿ ಶಿವಾನುಭವ ಮಂಟಪ ದಲ್ಲಿ ಸದಾ ಮಲ್ಲಿಕಾರ್ಜುನ ಶ್ರೀಗಳ ಪ್ರವಚನ 60 ನೆಯ ದಶಕದಿಂದ ಜ್ಞಾನಸುಧೆಯನ್ನು ನೀಡುತ್ತಿತ್ತು. ಸದಾ ಚಟುವಟಿಕೆ ಯಿಂದಿರುವ ಅವರ ಕಾಲ್ನಡಿಗೆ ನಿವ್ಯಾರೂ ಓಡಿದರೂ ಅವರನ್ನು ಅನುಸರಿಸುವದಾಗುತ್ತಿದ್ದಿಲ್ಲ. ಶಿವಾನುಭವ ಮಂಟಪದಲ್ಲಿ ಸಿದ್ದಾಂತ ಶಿಖಾಮಣಿ,ಕೈವಲ್ಯರ, ಆರೂಢರ ಗ್ರಂಥ ಪಠಣ ಶ್ರೀ ಸಿದ್ದೇಶ್ವರ ಶ್ರೀಗಳು ಮಾಡಿದರೆ ಅದರ ವ್ಯಾಖ್ಯಾನವನ್ನು ಸರಳ ಕನ್ನಡದಲ್ಲಿ ತಿಳಿಯಾಗಿ ಹೇಳುವದು ಗುರು ಮಲ್ಲಿಕಾರ್ಜುನ ರದಾಗುತ್ತಿತ್ತು. ಇದನ್ನು ನಾವೆಲ್ಲ 70ರ ದಶಕದಲ್ಲಿ ಕಾಲೇಜ ಪಾಠ ಮುಗಿಸಿ ಸಾಯಂಕಾಲ 6 ರಿಂದ 7 ರ ವರೆಗೆ ವರ್ಷದಲ್ಲಿ ಒಂದೆರಡು ಸಲ ಕೇಳುವುದು ಸಾಮಾನ್ಯವಾಗಿತ್ತು. 80 ರ ದಶಕದಲ್ಲಿ ನಗರದ ಉತ್ತರದಿಕ್ಕಿನಲ್ಲಿ ಬೃಹತ್ ನಿವೇಶನ ನದಲ್ಲಿ “ಜ್ಞಾನಯೋಗಾಶ್ರಮ”

ನಿರ್ಮಾಣವಾಗಿ ನೂರಾರು ಸಾಧಕರಿಗೆ ಗುರುದ್ವಯರ ತತ್ವಜ್ಞಾನದ ಸೌಭಾಗ್ಯ ಒದಗಿತು. ಸುಮಾರು 5-6 ವರ್ಷ ಬೆಳಗಿನ 6 ಘಂಟೆಯ ಪ್ರವಚನಕ್ಕೆ ಶ್ರೀ ಸಿದ್ದೇಶ್ವರ ಶ್ರೀಗಳು ತಮ್ಮ ಕಾಲ್ನಡಿಗೆಯಲ್ಲಿ ಹೊರಟರೇ ಯಾರಿಗೂ ಅವರನ್ನು ಹಿಂಬಾಲಿಸುವದಾಗುತ್ತಿರಲಿಲ್ಲ.೧೯೮೫ ರಲ್ಲಿ ಮಲ್ಲಿಕಾರ್ಜುನ ಶ್ರೀ ಗಳು ಶಿವನಪಾದ ಸೇರಿದಾಗ ಆಶ್ರಮದಲ್ಲಿಯೇ ಅವರ ಪ್ರಣವ ಮಂಟಪ ನಿರ್ಮಿಸಿ ಸದಾ ಸಹಸ್ರ ಶೋತೃ ಶಿಷ್ಯಬಳಗಕ್ಕೆ ಅನುಕೂಲ ಮಾಡಿಕೊಟ್ಟು ಪ್ರತಿ ವರ್ಷ ಗುರುಪೌರ್ಣಿಮೆಯ ನ್ನು ಒಂದು ಜನಸಾಮಾನ್ಯರ ಬೃಹತ್ ಜಾತ್ರೆಯಂತಾಗಿ ಗುರುಸ್ಮರಣೆಗೆ ಲಕ್ಷ ಜಪಯಜ್ಞದ ದೀಕ್ಷೆಯನ್ನು ನೀಡಿದರು. ತಮ್ಮ ತಾಯಿಯವರು ಅಗಲಿದಾಗ ಬಿಜ್ಜರಗಿಯ ಗ್ರಾಮಸ್ಥರ ಒತ್ತಾಯಕ್ಕೆ ಹೋಗಿ ಶಿವನು ನೀಡಿದ ಜೀವ ಶಿವನು ಪಡೆದ ಎಂದು ಸರಳ ಉದ್ಘಾರ ಮಾಡಿ ತಕ್ಷಣ ತಿರುಗಿದ ನಿಜ ಸನ್ಯಾಸಿ ಶ್ರೀಗಳು. ಪ್ರತಿ ದಿನ 4-6 ಕಿ.ಮಿ ವಾಯು ವಿಹಾರ, ಯೋಗ, ಧ್ಯಾನ, ವಟುಗಳಿಗೆ ಪಾಠ, ಚರ್ಚೆ 11 ಘಂಟೆಗೆ ಪ್ರಸಾದ ಮತ್ತೆ ವಾಕಿಂಗ, ಪ್ರವಚನ, ಸಾಯಂಕಾಲ ಮತ್ತೆ ವಾಯುವಿಹಾರ, ಸಂಜೆ 7 ರ ವರೆಗೆ ಮಾತ್ರ ಪ್ರಸಾದ 7 ಮೀರಿದರೆ ಅಂದು ಉಪವಾಸ ಇದು ಅವರ ನಿತ್ಯದ ದಿನಚರಿ.ಶ್ರಮದಾನ ಅವರ ದಿನದ ರೂಢಿ, ಬೇರೆ ಬೇರೆ ಊರುಗಳ ಲ್ಲಿಯ ಪ್ರವಚನಕ್ಕೆ ಎರಡು ಮೂರು ವರ್ಷ ಗಳ ಸರದಿ ಎಲ್ಲೋ ಹೋದರೂ ಅವರ ವಾಸ್ತವ್ಯ ನಿಸರ್ಗ ಮಧ್ಯದ ಹೋಲುವ,ತೋಟ ಆಶ್ರಮಗಳಲ್ಲಿ. ತಂಗಿದ ತೋಟದಲ್ಲಿ ಪ್ರತಿನಿತ್ಯ 4-6 ಘಂಟೆಗಳ ಶ್ರಮದಾನ ರೂಢಿಯೇ ಆಗಿತ್ತು. ಜ್ಞಾನಯೋಗಾಶ್ರಮದ ಆಳವಾದ ಭಾವಿಯನ್ನು ತಮ್ಮ ಶಿಷ್ಯ ಬಳಗದೊಂದಿಗೆ ತಾವೆ ತೆಗೆದದ್ದು. ನೂರಾರು ನೆರವು ನೀಡುವ ಗಿಡಗಳು ಅವರ ಹೆಸರು ಹೇಳಲಿವೆ. ಅವರ ಪ್ರೀತಿಯ ಪಶು ಪಕ್ಷಿಗಳ ಚಿಲಿಪಿಲಿಯ ನಾದ ಬೆಳಗಿನ ಅವರ ಸತ್ಸಂಗವನ್ನೂ ಆಲಿಸುವ ಭಾವ. ಹೊರದೇಶಕ್ಕೆ ಜ್ಞಾನೋಪದೇಶಕ್ಕೆ ಆವ್ಹಾನ ಬಂದಾಗ ಅವಷ್ಯಕವಾದ ಯಾವ ದಾಖಲೆಗಳೂ ಇಲ್ಲದ ಸಮಯದಲ್ಲಿ ಪಾಸಪೋರ್ಟ ಅಧಿಕಾರಿಗಳು ತಾವೇ ಆಶ್ರಮಕ್ಕೆ ಬಂದು ಪಾಸಪೋರ್ಟ ನೀಡಿ ಅವರ ಆಶಿರ್ವಾದ ಪಡೆದದ್ಧೂ ಒಂದು ಪವಾಡವೇ ಸರಿ.
ಪ್ರವಚನದಲ್ಲಿ ಸಾತ್ವಿಕವಾದ ಯಾರಿಗೂ ನೋವಾಗದ ರೀತಿಯಲ್ಲಿ ಹಾಸ್ಯಮಿಶ್ರಿತ ಸಂದೇಶ ಎಲ್ಲರನ್ನೂ ಆಕರ್ಸಿಸಿ ಕೋಟಿ ಕೋಟಿ ಭಕ್ತಸಮೂಹ ಕಂಡದ್ದು ಪ್ರಸಕ್ತ ದ ಪವಾಡ.ಅರಿವೇ ಗುರು ಎಂಬ ಅಣ್ಣ ಬಸವಣ್ಣನವರ “ಅರಿವು-ಆಚಾರ”ಗಳ ಮೇಲೆ ಹಾಗೂ ಅಲ್ಲಮರ “ಬಯಲು” ಗಳ ಜ್ಞಾನ ಅವರಲ್ಲಿ ಎಲ್ಲೇ ಮೀರದಂತಿತ್ತು..
” ಕರ್ತನೊಬ್ಬನೇ ದೇವರು ಸತ್ಯವೇ ಸುಭಾಷೆ, ಬೃತ್ತಾಚಾರವೇ ಸದಾಚಾರ, ನಾನು ಅಗತ್ಯನೂ ಅಲ್ಲ, ಅವಷ್ಯಕನೂ ಅಲ್ಲ ನನ್ನನ್ನು ಯಾರೂ ಅವಲಂಬಿಸಿಲ್ಲ ಎಂಬುದೇ ಸತ್ಯ ಅದೇ ಅಲ್ಲಮರು ಕಂಡ ಬಯಲು.. ತಲೆಯಲ್ಲಿ ಸದ್ಭುದ್ದಿ, ಬಾಯಲ್ಲಿ ಸಿಹಿಮಾತು, ಎದೆಯಲ್ಲಿ. ಪ್ರಿತಿ.. ಹಿಂದಿನದನ್ನು ಸ್ಮರಿಸುವದು, ಮುಂದಿನಬಗ್ಗೆ ಯೋಚಿಸುವುದನ್ನು ಬಿಟ್ಟು ಈಗ ನಾವು ಅನುಭವಿಸುವ ಸುಖದ ಅನುಭಾವ ಸಾಕು”
ಸುಂದರ ಸಂತೃಪ್ತ ಬದುಕಿಗೆ ಅವರ ಈ ಮೂರೇ ಸೂತ್ರ ಸಾಕು ಎಂಬುದು ಕೋಟಿ ಕೋಟಿ ಶಿಷ್ಯ ಬಳಗದ ಅನಿಸಿಕೆ.
ಗುರು ಮಲ್ಲಿಕಾರ್ಜುನ ರೊಂದಿಗೆ, ಬಂಥನಾಳ ಶ್ರೀಗಳು,ಡಾ.ಫ.ಗು.ಹಳಕಟ್ಟಿ ಹರ್ಡೇಕರ ಮಂಜಪ್ಪನವರ ಬಗ್ಗೆ ವೀಷೇಷ ಭಕ್ತಿ ಶ್ರೀಗಳದ್ದು. ಶ್ರೀ ಸಿದ್ದೇಶ್ವರ ಸಂಸ್ಥೆ,ಬಂಥನಾಳ ಶಿವಯೋಗಿಗಳ ಶತಮಾನೋತ್ಸವ, ಶ್ರೀ ಸಿದ್ದೇಶ್ವರ ಬ್ಯಾಂಕಿನ ಶತಮಾನೋತ್ಸವ, ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ,79 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ,ಶ್ರೀ ಸಿದ್ದರಾಮೇಶ್ವರ ಸ್ಮರಣೆ ಇವು ಅವರ ಆಶಯದಂತೆ ಇಡೀ ರಾಜ್ಯದ ಜನರ ಗಮನ ಸೆಳೆದ ಪ್ರತಿ ಕಾರ್ಯಕ್ರಮ ಗಳೂ 3- 4 ದಿನಗಳ ವರೆಗೆ ನಡೆದ ಯಶಶ್ವಿ ಸಮಾರಂಭಗಳು.2000 ರಲ್ಲಿ ಬಂಥನಾಳ ಶಿವಯೋಗಿಗಳ ಶತಮಾನೋತ್ಸವದ ಸಮಾರೋಪ ದಿನ ಎಂದೂ ಆಗದ ಮಳೆ ಅವರ ಆಶಿರ್ವಚನದ ದ ವೇಳೆ ಉತ್ತರ ಕರ್ನಾಟಕ ದ ಪ್ರಸಿದ್ದ ಜನಪದ ತ್ರಿಪದಿ
*ಹಸರಂಗಿ *ತೊಟ್ಟಾನ ,ನೀಲುಡಗಿ ಹೊದ್ದಾನ*
ಬೆಳಕಿನಲ್ಲಿ ಬಣ್ಣ ಬರದಾನ, ಮಹಾದೇವ
ನಗುಬನದಿ ತಾನು ನೆಲೆಸ್ಯಾನ.
ಮೂರು ದಿನ ಶ್ರೋತೃಗಳ ಮಧ್ಯ ಕುಳಿತು ಸಂಭ್ರಮ ಪಡುತ್ತಿದ್ದ ಬುದ್ದೀಜಿ ಯವರು ಜನಪದ ವಿವರಿಸುವಾಗ ಮಳೆ ಸುರಿದು ತಂಪಾಗಿಸಿದ್ದೂ ಸಾಮಾನ್ಯರ ಬಾಯಲ್ಲಿ ಬರುವ ಪವಾಡ ದ ಭಾವ. ಅವರ ಆರೋಗ್ಯವನ್ನು ಮೇಲಿಂದ ಮೇಲೇ ಕಾಡುವ Cold allergy ಅವರ ಪ್ರವಚನಕ್ಕೆ ತೊಂದರೆ ಮಾಡುತ್ತಿತ್ತು. 80-90 ದಶಕದಲ್ಲಿ ಒತ್ತಾಯಪೂರ್ವಕ ವಾಗಿ ಆಶ್ರಮದ ಅವರ ಕೋಣೆಗೆ ಹೋಗಿ ವಸ್ತ್ರದಲ್ಲಿ ಒಲೇಸಾನ ಔಷಧಿ ಹಾಕಿದ್ದೂ ಹಾಗೂ Mobile ಇನ್ನೂ ಬರದ ವೇಳೆ ಹೊರದೇಶಕ್ಕೆ ಹೋಗುವದಕ್ಕಾಗಿ ಬೇರೆಡೆ ವಿಷೇಷವಾಗಿ ಸುತ್ತೂರು ಮಠದಿಂದ ಬರುವ ಟೆಲಿಫೋನ ಕರೆಗಳನ್ನೂ ಪಡೆಯಲು ಫೋನಿನ
Plug & Socket ವ್ಯವಸ್ಥೆಯನ್ನೂ ಒತ್ತಾಯಪೂರ್ವಕವಾಗಿ ಒದಗಿಸುವಾಗ ಹಾಗೂ ಅಮೇರಿಕಾದ ಅವರ ಪ್ರವಾಸಕಥನ ಕೇಳುವಾಗ ಮತ್ತು ನಮ್ಮ ಟೆಲಿಫೋನ ಸಮ್ಮೇಳನದಲ್ಲಿ ಆವ್ಹಾನಿಸುವಾಗ “ನನಗ ಫೋನ ಮಾಡಾಕ ಬರಂಗಿಲ್ಲ ನನ್ನ ಯಾಕ ಕರಿತೀರಿ ಎಂದಾಗ ನಮ್ಮೆಲ್ಲರ ಬಾಯಲ್ಲಿ ಬಂದ ಒಂದೇ ಮಾತು ನಮಗ ಬದುಕಲು ಕಲಸರಿ ಎಂಬೊದು ಇವು ನಮ್ಮ ಬದುಕಿನಲ್ಲಿ ಅವರ ಒಡನಾಟದ ಪುಣ್ಯ ಕ್ಷಣಗಳು. ಗುರುಪೌರ್ಣಿಮೆಯ ಪರ್ವದಲ್ಲಿ ವಿವಿಧ ಭಾಗ ಹಾಗೂ ವಲಯದ ವಾಗ್ಮಿಗಳನ್ನು ಕರೆಸಿ ಅವರಿಂದ ಪ್ರವಚನ ಒದಗಿಸುವುದು ಅವರ ಆಶಯವಾದರೂ ಸತ್ಸಂಗದ ಸುಮಾರು 20,000 ರಕ್ಕೂ ಹೆಚ್ಚು ಶೋತೃಗಳ ಭಾವ ಸ್ವತ ಭಗವಂತ ಬಂದು ಪ್ರವಚನ ನೀಡುವದೂ ಬೇಡ ನಮ್ಮ ಬುದ್ದೀಜಿಯವರ ಮಾತೇ ನಮಗೆ ಬೇಕು ಎಂಬುದು ಅಸಂಖ್ಯರ ಬಯಕೆಯಕೆಯಾಗಿತ್ತು.
ಅನಾರೋಗ್ಯದ ಮಧ್ಯವೂ ದೇಶದ ಸ್ವಾತಂತ್ರ್ಯದ 75 ರ ಸಂಭ್ರಮವನ್ನು ನೂರಾರು ಮಾಜಿ ಸೈನಿಕರನ್ನು ಸನ್ಮಾನಿಸಿ, ಅನ್ನದಾತರ ಸ್ಮರಣೆ, ನೂರರ ಅಂಗಳದಲ್ಲಿನ ಹಿರಿಯ ಜೀವಿಗಳಿಗೆ ಗೌರವ,ಕಾಖಂಡಕಿಯಲ್ಲಿ ಪ್ರವಚನ ಆಶ್ರಮದ ದ ಅವರ ಅಂತಿಮ ಪ್ರವಚನ “ಸೂರ್ಯೋಪನಿಷತ” ಇವೆಲ್ಲವುಗಳ ಮಧ್ಯ ನಾವು ಬದುಕಿದ್ದೇವೆಂಬುದು ನಮ್ಮ ಪುಣ್ಯ.ಪ್ರಣವ ಮಂಟಪದ ಹಾಗೂ ನಂಬಿ ಬಂದ ಭಕ್ತರ ದರ್ಶನ ಗಳ ಮಧ್ಯ ತಮ್ಮ82 ನೆಯ ವರ್ಷದಲ್ಲಿ ತಾವೇ ಬೆಳೆಸಿದ ಪ್ರೀತಿಯ ಗಿಡ-ಮರಗಳ ಮಧ್ಯ ಬಯಲಾಗಿ ನಿಂದ ಈ ಶತಮಾನ ಕಂಡ ವಿಶ್ವಸಂತ ಶ್ರೀ ಸಿದ್ದೇಶ್ವರ ಶ್ರೀಗಳು
ಅಣ್ಣನ “ಅರಿವು” ಅಲ್ಲಮರ “ಬಯಲನ್ನು” ನಡೆ-ನುಡಿಯಲ್ಲಿ ತಂದ ವಿಶ್ವ ಸಂತ ಶ್ರೀ ಸಿದ್ದೇಶ್ವರ ಶ್ರೀಗಳು
ಇಲ್ಲ,ಇಲ್ಲ,ಬೇಡ,ಬೇಡ ವೆನ್ನುತ್ತ ಬಯಲಲ್ಲಿ ಬಯಲಾದ ಬುದ್ದೀಜಿ
ಹಾರ ಹಾಕೋಳಿಲ್ಲ
ಶಾಲತೊಡಲಿಲ್ಲ
ಜಾಗಟೆ,ಪಲ್ಲಕ್ಕಿ ಮೊದಲೇ ಇಲ್ಲ
ಕಾವಿನೂ ಧರಿಸಲಿಲ್ಲ
ಜೇಬಿಲ್ಲದ ಶ್ವೇತ ವಸ್ತ್ರಧಾರಿ
ಜ್ಞಾನ ದಾಸೋಹವೇ ಬದುಕಿನ ಆಶೆ ಎಂದವರು. ಅಂತಿಮ ಅಭಿನಂದನೆ ತಿಳಿಸಿ ವಿಶ್ವದಾರ್ಶನಿಕ ಅರಿಸ್ಟಾಟಲ, ಝೆನ್, ಅಲ್ಲಮ,ಬಸವಣ್ಣನ ಸಾಲಿಗೆ ಹೋದವರು ಮಂಟಪವೂ ಬೇಡ,
ಸ್ಮಾರಕವೂ ಬೇಡವೆಂದು
ಆಶ್ರಮದ ಗಿಡ-ಗಂಟಿ, ಹೂ, ಟೊಂಗೆಗಳ ಮೇಲಿನ ಹಕ್ಕಿ ಪಕ್ಷಿಗಳೊಂದಿಗೆ ಒಂದಾದ ಅಲ್ಲಮನ ವಾರಸುದಾರ ಶ್ರೀ ಸಿದ್ದೇಶ್ವರ ಶ್ರೀ ಗಳ ನೆನಹೇ ಮಹಾ ಮಂತ್ರ…


