ಲಿಖಿತ ಭರವಸೆ | ಮುದ್ದೇಬಿಹಾಳ ಇಂದಿರಾನಗರದ ನಿವಾಸಿಗಳು ಧರಣಿ ಹೋರಾಟ ಅಂತ್ಯ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಉತಾರೆ ಮತ್ತು ಮತದಾರರ ಪಟ್ಟಿ ಪರಿಶೀಲಿಸುವಂತೆ ಒತ್ತಾಯಿಸಿ ಪಟ್ಟಣದ ಇಂದಿರಾನಗರದ ನಿವಾಸಿಗಳು ಮುಖಂಡ ಬಸವರಾಜ ಕೊಳೂರ ನೇತೃತ್ವದಲ್ಲಿ ಇಲ್ಲಿನ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಆರಂಭಿಸಿದ ಧರಣಿ ಸತ್ಯಾಗ್ರಹ ೫ನೇ ದಿನಕ್ಕೆ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಅವರ ಲಿಖಿತ ಭರವಸೆ ಮೇರೆಗೆ ಅಂತ್ಯ ಕಂಡಿದೆ.
ಹೋರಾಟದ ನಾಲ್ಕನೇ ದಿನದಿಂದ ಹೋರಾಟಗಾರರು ತಮಟೆ ಚಳುವಳಿಯನ್ನು ಪ್ರಾರಂಭಿಸಿದ್ದರು. ದಿನವಿಡೀ ತಮಟೆ ಬಾರಿಸುವ ಮೂಲಕ ತಮ್ಮ ಆಕ್ರೋಷವನ್ನು ಹೊರಹಾಕಿದ್ದರು. ನಾಲ್ಕನೇ ದಿನ ಯಾವೊಬ್ಬ ಅಧಿಕಾರಿ ಕೂಡ ತಮಗೆ ಭೇಟಿ ನೀಡಿಲ್ಲ ಎಂದು ಮಾಧ್ಯಮದ ಎದುರು ತಮ್ಮ ಅಳಲನ್ನು ತೋಡಿಕೊಂಡಿದ್ದರು.
೫ನೇ ದಿನದ ಹೋರಾಟವೂ ತಮಟೆ ಚಳುವಳಿಯ ಮೂಲಕ ಪ್ರಾರಂಭವಾಗಿತ್ತು. ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಎಎಪಿಎಂಸಿ ನಿರ್ದೇಶಕ ವಾಯ್.ಎಚ್.ವಿಜಯಕರ, ಪ್ರಮುಖರಾದ ಹುಸೇನ ಮುಲ್ಲಾ, ಗೋಪಿ ಮಡಿವಾಳರ ಮತ್ತೀತರರು ಹೋರಾಟಕ್ಕೆ ಬೆಂಬಲ ನೀಡಿದರು. ಹೋರಾಟದ ಕಾವು ಹೆಚ್ಚುತ್ತಿದ್ದಂತೆ ಎಚ್ಚರಗೊಂಡ ಅಧಿಕಾರಿಗಳು ಹೋರಾಟಗಾರರ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರು. ತಹಸೀಲ್ದಾರ ಕೀರ್ತಿ ಚಾಲಕ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಕೊಳಚೆ ಮಂಡಳಿಯ ಸಹಾಯಕ ಅಭಿಯಂತರ ಪ್ರಹ್ಲಾದ ಪಾಟೀಲ ಜೊತೆಯಾಗಿ ಹೋರಾಟಗಾರರ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರು. ಆದರೆ ಹೋರಾಟಗಾರರು ಮಾತ್ರ ಅಧಿಕಾರಿಗಳ ಯಾವುದೇ ಮೌಖಿಕ ಪ್ರಯತ್ನಕ್ಕೆ ಜಗ್ಗದೇ ಲಿಖಿತ ಭರವಸೆ ನೀಡಿದಲ್ಲಿ ಮಾತ್ರ ಹೋರಾಟವನ್ನು ಕೈಬಿಡುವದಾಗಿ, ಇಲ್ಲದಿದ್ದರೆ ಅದೆಷ್ಟೇ ದಿನಗಳು ಕಳೆದರೂ ಹೋರಾಟವನ್ನು ದಿನದಿಂದ ದಿನಕ್ಕೆ ಉಗ್ರವಾಗಿಸುವದಾಗಿ ತಿಳಿಸಿದರು.
ಹೋರಾಟಗಾರರ ಪಟ್ಟು ಬಿಗಿಯಾಗುತ್ತಿದ್ದಂತೆ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಅವರು ಕೊಳಚೆ ಅಭಿವೃದ್ಧಿ ಮಂಡಳಿ ಅಧಿಕಾರಿಗಳಿಂದ ಸರ್ವೇ ಮಾಡಿರುವ ಮಾಹಿತಿಯನ್ನು ತರಿಸಿಕೊಂಡು ೩ ರಿಂದ ೪ ತಿಂಗಳುಗಳ ಒಳಗಾಗಿ ಪುರಸಭೆ ಸಾಮಾನ್ಯ ಸಭೆಯಲ್ಲಿ ಮಂಡಿಸಿ ಉತಾರೆ ನೀಡಲು ನಿಯಮಾನುಸಾರ ಕೈಗೊಳ್ಳಲಾಗುವದು ಎಂದು ಲಿಖಿತ ಪತ್ರ ನೀಡಿದ ಬಳಿಕ ಹೋರಾಟ ಕೈಬಿಡಲು ಒಪ್ಪಿದರು.
ಈ ವೇಳೆ ಹೋರಾಟಗಾರರ ಪೈಕಿ ರಿಯಾಜ ಉಣ್ಣಿಭಾವಿ ಮಾತನಾಡಿ, ಅಧಿಕಾರಿಗಳು ತಮ್ಮ ಮಾತಿನಂತೆ ೪ ತಿಂಗಳಿನಲ್ಲಿ ಉತಾರೆ ಪೂರೈಸದಿದ್ದರೆ ಮತ್ತೆ ಉಗ್ರವಾದ ಪ್ರತಿಭಟನೆ ಹಮ್ಮಿಕೊಂಡು ವಿಷ ಕುಡಿದು ಪ್ರಾಣ ತ್ಯಾಗ ಮಾಡುವದಾಗಿ ಗಂಭೀರ ಎಚ್ಚರಿಕೆ ನೀಡಿದರು.
ಧರಣಿಯ ನೇತೃತ್ವ ವಹಿಸಿದ್ದ ಬಸವರಾಜ ಕೊಳೂರ ಮಾತನಾಡಿ ಅಧಿಕಾರಿಗಳ ಲಿಖಿತ ವಿಶ್ವಾಸದ ಮೇಲೆ ಸಧ್ಯ ಹೋರಾಟ ಅಂತ್ಯಗೊಳಿಸುತ್ತಿದ್ದೇವೆ. ಅಧಿಕಾರಿಗಳೇನಾದರೂ ತಮ್ಮ ಮಾತಿಗೆ ತಪ್ಪಿದರೆ ಇಲ್ಲಿಂದಲೇ ಪಾದಯಾತ್ರೆ ಮಾಡುತ್ತ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಪ್ರಮುಖರಾದ ಸುಜಾತಾ ಸಿಂಧೆ, ಎಪಿಎಂಸಿ ನಿರ್ದೇಶಕ ವಾಯ್.ಎಚ್.ವಿಜಯಕರ ಮಾತನಾಡಿದರು.
ಈ ವೇಳೆ ಅಂಬರೀಶ ಉಪಲದಿನ್ನಿ, ಧರಣಿಗೆ ಅಮರೇಶ ಉಪಲದಿನ್ನಿ, ವಿಷ್ಣು ಗಂಗಾಪುರ್, ಬಾಬು ಬಳಗಾನೂರ, ಬುಡ್ಡಾ ನಿಡಗುಂದಿ, ಹಾಫೀಜಾ ಜಮಾದಾರ, ಕಾಶಿಂಬಿ ಉಣ್ಣಿಭಾವಿ, ಖಾದಿರಮಾ ನದಾಫ, ಮಂಜುನಾಥ್ ಚಲವಾದಿ, ಶೇಖರ ಢವಳಗಿ, ಸೀನು ಕಲಾಲ, ಬಬಲು ಮಕಾಂದಾರ, ಮಹೆಬೂಬ ಮಕಾಶಿ, ಆಸೀಫ ನಿಡಗುಂದಿ, ಆನಂದ ಭಜಂತ್ರಿ, ಸೇರಿದಂತೆ ಮತ್ತೀತರರು ಇದ್ದರು. ಕ್ರೆöÊಂ ಪಿಎಸ್‌ಐ ರಂಗಪ್ಪ ಭಂಗಿ ಬಂದೋಬಸ್ತ ವಹಿಸಿದ್ದರು.

