ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹರೀಶ ಎ. ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಕೇಂದ್ರ ಹಾಗೂ ಎಲ್ಲಾ ತಾಲೂಕು ಕೇಂದ್ರಗಳ ನ್ಯಾಯಾಲಯಗಳಲ್ಲಿ ಜನವರಿ 24ರಂದು ವಿಶೇಷ ಲೋಕ ಅದಾಲತ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹರೀಶ ಎ. ಅವರು ತಿಳಿಸಿದರು.
ಬುಧವಾರ ನಗರದ ಜಿಲ್ಲಾ ನ್ಯಾಯಾಲಯ ಕಟ್ಟಡದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ, ಎಲ್ಲ ಕಕ್ಷಿದಾರರ ಅನುಕೂಲಕ್ಕಾಗಿ ವಿಶೇಷ-ಲೋಕ-ಅದಾಲತನ್ನು ಹಮ್ಮಿಕೊಳ್ಳಲಾಗಿದ್ದು, ಲೋಕ ಅದಾಲತ್‍ನಲ್ಲಿ ರಾಜೀ ಸಂಧಾನಕ್ಕೆ ಒಳಪಡಬಹುದಾದ ಭೂ-ಸ್ವಾಧೀನ ಪ್ರಕರಣಗಳನ್ನು
ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಪಕ್ಷಗಾರರಿಗೆ ಅವಕಾಶವಿರುವುದರಿಂದ ಎಲ್ಲ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ.
ಜಿಲ್ಲೆಯಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮಗಳಲ್ಲಿ ವಿವಿಧ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಸುಮಾರು 2,89,479 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ರೂ. 18,30,25,426 ಗಳನ್ನು ಪರಿಹಾರ ಒದಗಿಸಲಾಗಿದೆ. ಇದರಿಂದ ವಿಜಯಪುರ ಜಿಲ್ಲೆಯು ರಾಜಿ ಸಂಧಾನ ಮಾಡುವಲ್ಲಿ ರಾಜ್ಯಕ್ಕೆ ಸತತವಾಗಿ ಮೂರನೇ ಬಾರಿ 2ನೇ ಸ್ಥಾನ ಪಡೆದುಕೊಂಡಿದ್ದು, ಈ ಬಾರಿ ಜನವರಿ 24 ರಂದು ನಡೆಯುವ ವಿಶೇಷ ಲೋಕ ಅದಾಲತ್ ಕಾರ್ಯಕ್ರಮದ ಸದುಪಯೋಗ ಹೆಚ್ಚಿನ ಜನರಿಗೆ ಒದಗಿಸುವ ನಿಟ್ಟಿನಲ್ಲಿ ಈ ಕುರಿತು ವ್ಯಾಪಕವಾಗಿ ಜನರಲ್ಲಿ ತಿಳುವಳಿಕೆ ಮೂಡಿಸುವಂತೆ ತಿಳಿಸಿದರು.
ಜ.2 ರಿಂದ 90 ದಿನಗಳವರೆಗೆ ವಿಶೇಷ ಮಧ್ಯಸ್ಥಿಕೆಯ ಅಭಿಯಾನ
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ, ವಿಶೇಷ ಅಭಿಯಾನದ ಕುರಿತು ಈಗಾಗಲೇ ಸಭೆ ಜರುಗಿಸಿ, ವಿಜಯಪುರ ಮತ್ತು ಅದರ ಅಧೀನದಲಿ ಬರುವ ಎಲ್ಲ ನ್ಯಾಯಾಲಯಗಳಲ್ಲಿ ಬಾಕಿ ಇರುವ ಮಧ್ಯಸ್ಥಿಕೆಯ ಮೂಲಕ ರಾಜಿ ಆಗಬಹುದಾದ ಪಕರಣಗಳ ಕುರಿತು ದಿನಾಂಕ: 02-01-2026 ರಿಂದ 90 ದಿನಗಳವರೆಗೆ 2.0
90 ದಿನಗಳ ಮಧ್ಯಸ್ಥಿಕೆಯ ಅಭಿಯಾನ’ ದೇಶಕ್ಕಾಗಿ ಮಧ್ಯಸ್ಥಿಕೆ ಎಂಬ ಘೋಷವಾಕ್ಯದೊಂದಿಗೆ ವಿಶೇಷ ಮಧ್ಯಸ್ಥಿಕೆ ಅಭಿಯಾನ ಪ್ರಾರಂಭವಾಗುತ್ತಿದ್ದು ನ್ಯಾಯಾಲಯಗಳಲ್ಕಿ ಬಾಕಿ ಇರುವ ಮಧ್ಯಸ್ಥಿಕೆಯ ಮೂಲಕ ರಾಜಿ ಆಗಬಹುದಾದ ಪ್ರಕರಣಗಳನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ ಕಳುಹಿಸಿ ಹೆಚ್ಚಿನ ಸಂಖ್ಯೆಯಲಿ ಪ್ರಕರಣಗಳನ್ನು ರಾಜೀ ಸಂಧಾನವಾಗಲು ಸಹಕರಿಸಲು ನ್ಯಾಯಾಲಯದ ಕಕ್ಷಿದಾರರಿಗೆ ಮತ್ತು ವಕೀಲರಿಗೆ ತಿಳಿಸಿ ಅದರ ಸದುಪಯೋಗ ಪಡೆದುಕೊಳ್ಳಲು ಅವರ ಕಕ್ಷಿದಾರರರಿಗೆ ತಿಳಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಮಾ.14ರಿಂದ ರಾಷ್ಟ್ರೀಯ ಲೋಕ ಅದಾಲತ್: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ, ಎಲಾ ವರ್ಗದ ಕಕ್ಷಿದಾರರಿಗೆ ಅನುಕೂಲ ಕಲ್ಪಿಸಲು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ದಿನಾಂಕ: 14.03.2026 ರಂದು ರಾಷ್ಟ್ರೀಯ-ಲೋಕ್-ಅದಾಲತ ಹಮ್ಮಿಕೊಳ್ಳಲಾಗಿದೆ. ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಪಕ್ಷಗಾರರಿಗೆ ಅವಕಾಶವಿದೆ ಎಂದು ತಿಳಿಸಿದರು.
ಜ.1ರಿಂದ 31ರವರೆಗೆ ರಸ್ತೆ ಸುರಕ್ಷತಾ ಅಭಿಯಾನ : ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದನ್ವಯ ಜಿಲ್ಲೆ ಮತ್ತು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ತಾಲೂಕುಗಳಲ್ಲಿ ಜ.1 ರಿಂದ 31ರವರೆಗೆ ರಸ್ತೆ ಸುರಕ್ಷತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹಿರಿಯ ಸಿವ್ಹಿಲ್ ನ್ಯಾಯಾಧೀಶರಾದ ಅರವಿಂದ ಹಾಗರಗಿ, ಜಿಲ್ಲಾ ಬಾರ್ ಅಸೋಸಿಯೇಶನ್ ಖಜಾಂಚಿಗಳಾದ ನ್ಯಾಯವಾದಿ ಎಂ.ಎ.ಕಾಖಂಡಕಿ, ಜಿಲ್ಲಾ ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಎಸ್.ಎಸ್.ಚೂರಿ ಉಪಸ್ಥಿತರಿದ್ದರು.

