ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ಚಿನ್ನ ಹಾಗೂ ಬೆಳ್ಳಿ ಆಭರಣ ಮಾರಾಟ ಅಂಗಡಿಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಅಳವಡಿಸುವುದರ ಮೂಲಕ ಎಚ್ಚರಿಕೆ ವಹಿಸಲು ಪಿಎಸ್‌ಐ ಸಚೀನ ಆಲಮೇಲಕರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಮಳಿಗೆಗಳ ಮಾಲೀಕರಿಗೆ ಮಾಹಿತಿ ನೀಡಿದರು.
ಪಟ್ಟಣದ ವಿವಿಧ ಚಿನ್ನ ಹಾಗೂ ಬೆಳ್ಳಿ ಆಭರಣ ತಯಾರಿಕಾ ಹಾಗೂ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿದ ಪೊಲೀಸರು ಅಗತ್ಯ ಕ್ರಮಗಳ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಪಿಎಸ್‌ಐ ಸಚೀನ ಆಲಮೇಲಕರ ಮಾತನಾಡಿ, ಇತ್ತೀಚಿಗೆ ರಾಜಸ್ಥಾನ ಹಾಗೂ ಉತ್ತರಪ್ರದೇಶ ರಾಜ್ಯಗಳ ದರೋಡೆಕೋರರು ಚಿನ್ನಾಭರಣಗಳನ್ನು ಗುರಿಯಾಗಿಸಿ ದರೋಡೆ, ಕಳ್ಳತನ ಮಾಡುತ್ತಿರುವುದು ಕಂಡು ಬಂದಿದೆ. ಚಿನ್ನಾಭರಣ ಮಳಿಗೆಗಳಲ್ಲಿ ಶೂನ್ಯ ಭದ್ರತೆ ಇರುವುದರಿಂದ ಇವುಗಳ ಮೇಲೆ ಕಳ್ಳರ ಗಮನ ಹೆಚ್ಚಾಗಿರುತ್ತದೆ. ಆದ್ದರಿಂದ ಪೊಲೀಸ್ ಇಲಾಖೆಯ ನಿರ್ದೇಶನದಂತೆ ಅಂಗಡಿಗಳ ಪ್ರವೇಶ ದ್ವಾರ, ಕ್ಯಾಶ್ ಕೌಂಟರ್, ಸ್ಟ್ರಾಂಗ್ ರೂಮ್‌ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮತ್ತು ೩೦ ದಿನಗಳವರೆಗೆ ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ಸಂಗ್ರಹಣೆ, ಅಲಾರಾಮ್ ವ್ಯವಸ್ಥೆ, ಬಲವಾದ ಹಾಗೂ ಸುರಕ್ಷಿತ ಶಟರ್‌ಗಳ ಅಳವಡಿಕೆ ಹಾಗೂ ಲಾಕಿಂಗ್ ವ್ಯವಸ್ಥೆ ಮಾಡಬೇಕು.
ಮಾರಾಟ ಮಳಿಗೆಗಳ ಸುತ್ತಮುತ್ತ ಹಾಗೂ ಒಳಗೆ, ಹೊರಗೆ ಸಮರ್ಪಕ ಬೆಳಕಿನ ವ್ಯವಸ್ಥೆ ಮಾಡುವುದು. ಮತ್ತು ಮುಖ್ಯವಾಗಿ ಲಾಕರ್ ಪ್ರದೇಶಕ್ಕೆ ಅನಧಿಕೃತ ವ್ಯಕ್ತಿಗಳ ಪ್ರವೇಶ ನಿಷೇಧ. ಮತ್ತು ಆಭರಣಗಳ ಸಾಗಣೆಯನ್ನು ಮೌನವಾಗಿ ಹಾಗೂ ವಿಭಿನ್ನ ಸಮಯದಲ್ಲಿ ಮಾಡುವುದು. ಅನುಮಾನಸ್ಪದ ಚಟುವಟಿಕೆ ಹಾಗೂ ವ್ಯಕ್ತಿಗಳ ಕುರಿತು ಕೂಡಲೇ ಪೊಲೀಸ್‌ರ ಗಮನ ಸೆಳೆಯುವ ಕುರಿತಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಸಿಬ್ಬಂದಿ ಮಲ್ಲಿಕಾರ್ಜುನ ಕತ್ತಿ, ಎ.ಎಸ್.ಬಿರಾದಾರ, ಆರ್.ಬಿ.ಕುಂಬಾರ ಸಹಿತ ವಿವಿಧ ಅಂಗಡಿಗಳ ಮಾಲೀಕರು ಇದ್ದರು.

