ವಿಜಯಪುರ ಮಹಾನಗರ ಪಾಲಿಕೆ ಮಾಜಿ ಸದಸ್ಯ ಮೈನುದ್ದೀನ್ ಬೀಳಗಿ ಆರೋಪ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಪರಮಾಪ್ತರಿಗೆ ಅನುಕೂಲವಾಗಲು ಪಾಲಿಕೆಗೆ ಸೇರಿದ ಕೋಟ್ಯಂತರ ರೂ. ಮೌಲ್ಯದ ಜಮೀನು ಸರಿಸುಮಾರು ೨೬ ಗುಂಟೆ (ಸರ್ವೆ ನಂ. ೩೮೧//೧೦೬ ಗಂಗನಹಳ್ಳಿ ಲೇಔಟ್‌ನಲ್ಲಿರುವ ಬಯಲು ಜಾಗೆಯನ್ನು ನಿರ್ವಹಣೆಗೆ ಸಂಬಂಧಿಸಿದಂತೆ ಶ್ರೀ ಅಮೋಘಸಿದ್ದೇಶ್ವರ ವಿವಿಧೋದ್ದೇಶ ಕ್ಷೇಮಾಭಿವೃದ್ಧಿ ಸಂಸ್ಥೆಗೆ ನೀಡಲು ಠರಾವು ಪಾಸು ಮಾಡಿರುವುದು ಖಂಡನೀಯ, ಇದು ಶಾಸಕರ ಲ್ಯಾಂಡ್ ಮಾಫಿಯಾಕ್ಕೆ ಒಂದು ಉದಾಹರಣೆ ಎಂದು ಪಾಲಿಕೆ ಮಾಜಿ ಸದಸ್ಯ ಮೈನುದ್ದೀನ್ ಬೀಳಗಿ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಶಾಸಕರಿಗೆ ಪರಮಾಪ್ತರಿಗೆ ಅನುಕೂಲವಾಗಲು ಕೋಟ್ಯಂತರ ರೂ. ಮೌಲ್ಯದ ಬಯಲು ಜಾಗೆಯನ್ನು ನಿರ್ವಹಣೆಗೆ ನೀಡುತ್ತಿರುವುದು ಕಾನೂನು ಬಾಹಿರ, ಉದ್ಯಾನವನ, ಬಯಲು ಜಾಗೆ, ಕ್ರೀಡಾಂಗಣವನ್ನು ಯಾವ ಕಾರಣಕ್ಕೂ ಯಾರಿಗೂ ಪರಭಾರೆ ಮಾಡಬಾರದು ಎಂಬ ನಿಯಮವಿದೆ, ಈ ಬಗ್ಗೆ ಮೇಯರ್ ಹಾಗೂ ಆಯುಕ್ತರಿಗೂ ಸಹ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರೂ ಸಹ ಅವರು ನಮಗೆ ಸ್ಪಂದಿಸಿಲ್ಲ, ಈ ಬಗ್ಗೆ ಲಿಖಿತವಾಗಿಯೂ ದೂರು ಸಲ್ಲಿಸಿರುವೆ, ಕೂಡಲೇ ಈ ಠರಾವು ರದ್ದುಗೊಳಿಸಿಬೇಕು, ಇಲ್ಲವಾದರೆ ಕೂಡಲೇ ಕಾನೂನಾತ್ಮಕ ಹೋರಾಟಕ್ಕೆ ಅಣಿಯಾಗಲಾಗುವುದು ಎಂದರು. ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯ ಅಜೆಂಡಾದಲ್ಲಿ ವಿಷಯ ೧೩ ರಲ್ಲಿ ಆಸ್ತಿ ವಿವರ – ಸಿಟಿಎಸ್ ನಂ.೩೮೧/೮/೬ ಗಂಗನಹಳ್ಳಿ ಬಯಲು ಜಾಗೆಯನ್ನು ಅಮೋಘಸಿದ್ದೇಶ್ವರ ಸಂಸ್ಥೆಗೆ ನಿರ್ವಹಣೆಗೆ ನೀಡುವ ವಿಷಯ ಸೇರ್ಪಡೆ ಮಾಡಿದ್ದೇ ಅವೈಜ್ಞಾನಿಕ, ಯಾವ ರಾಜಕೀಯ ಒತ್ತಡದ ಮೇಲೆ ಎನ್ನುವುದಕ್ಕಿಂತ ನಗರ ಶಾಸಕರ ಒತ್ತಡದಿಂದಲೇ ಈ ಕಾರ್ಯ ನಡೆದಿದೆ, ಈ ವಿಷಯದಲ್ಲಿ ಭ್ರಷ್ಟಾಚಾರ ಎದ್ದು ಕಾಣುತ್ತಿದೆ ಎಂದು ದೂರಿದರು. ಜಮೀನು ಮಾಫಿಯಾ ಎಂದು ಟೀಕೆ ಮಾಡುವ ನಗರ ಶಾಸಕರೇ ಜಮೀನು ಮಾಫಿಯಾ ಕುಮ್ಮಕ್ಕು ನೀಡಿದ್ದಾರೆ, ಸರ್ಕಾರದ ದೊಡ್ಡ ಆಸ್ತಿ ಗುಳುಂ ಮಾಡುವ ಹುನ್ನಾರ ನಡೆದಿದೆ, ಈಗಾಗಲೇ ಠರಾವು ಸಹ ಸ್ವೀಕರಿಸಲಾಗಿದೆ, ಕೂಡಲೇ ಇದನ್ನು ವಾಪಸ್ಸು ಪಡೆಯಬೇಕು ಎಂದು ಒತ್ತಾಯಿಸಿದರು.
ಯಾವ ದಾರಿ ಹಿಡಿದಿದೆ ಗೊತ್ತಿಲ್ಲ..
ಪಾಲಿಕೆ ಮಾಜಿ ಸದಸ್ಯ ಪ್ರಕಾಶ ಮಿರ್ಜಿ ಮಾತನಾಡಿ, ಇಂದಿನ ಮಾರುಕಟ್ಟೆ ದರ ಆಧರಿಸಿ ಅವಲೋಕಿಸಿದರೆ ೭ ರಿಂದ ೮ ಕೋಟಿ ರೂ. ಮೌಲ್ಯದ ಬಯಲು ಜಾಗೆಯನ್ನು ಯಾರಿಗೂ ಪರಭಾರೆ ಮಾಡಲು, ಲೀಜ್ ಮಾಡಲು ಸಾಧ್ಯವಿಲ್ಲ, ಮಹಾನಗರ ಪಾಲಿಕೆಯೇ ಇದನ್ನು ನಿರ್ವಹಣೆ ಮಾಡಬೇಕು, ಆದರೆ ಈ ನಿಯಮವನ್ನು ಗಾಳಿಗೆ ತೂರಿ ಸಂಸ್ಥೆಗೆ ಲೀಜ್ ನೀಡಲು ಸಾಧ್ಯವೇ ಇಲ್ಲ, ಆದರೂ ಸಹ ಪಾಲಿಕೆ ಈ ಪ್ರಕ್ರಿಯೆಗೆ ಮುಂದಾಗಿರುವುದು ನೋಡಿದರೆ ಹಾಗೂ ಅಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ನೋಡಿದರೆ ಪಾಲಿಕೆ ಯಾವ ದಾರಿ ಹಿಡಿದಿದೆಯೋ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಪಾರದರ್ಶಕ ಆಡಳಿತಕ್ಕೆ ಒತ್ತು ಎಂದು ಹೇಳಿದ್ದಾರೆ, ಆದರೆ ಇಂದಿಗೂ ಪಾಲಿಕೆಯಲ್ಲಿ ಪಾರದರ್ಶಕತೆ ಇಲ್ಲ, ಅಲ್ಲಿ ನಡೆದಿರುವ ಭ್ರಷ್ಟಾಚಾರ ಹಗರಣಗಳ ಬಗ್ಗೆ ಬೆಳಕು ತರುವ ಕೆಲಸ ಮಾಡಿದರೂ ಯಾವುದೇ ಕ್ರಮ ಆಗಿಲ್ಲ ಎಂದರು.

