ಪ್ರಕರಣ ಎನ್‌ಐಎ ತನಿಖೆಗೆ ವಹಿಸಲು ವಿಪಕ್ಷ ನಾಯಕ ಆರ್.ಅಶೋಕ ಆಗ್ರಹ
ಬೆಂಗಳೂರು: ಕೋಗಿಲು ಕ್ರಾಸ್‌ನ ಫಕೀರ್ ಬಡಾವಣೆ ಕ್ರಮೇಣ ಸ್ಲೀಪರ್ ಸೆಲ್‌ಗಳ ಕೇಂದ್ರವಾಗುವ ಅಪಾಯವಿದೆ. ಆದ್ದರಿಂದ ಅಕ್ರಮ ನಿವಾಸಿಗಳ ಪೌರತ್ವವನ್ನು ಸರ್ಕಾರ ಪರಿಶೀಲಿಸಬೇಕು. ಹೀಗಾಗಿ ಇದನ್ನು ಎನ್‌ಐಎ ತನಿಖೆಗೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ.
ಕೋಗಿಲು ಕ್ರಾಸ್‌ನಲ್ಲಿ ಒತ್ತುವರಿ ತೆರವು ಮಾಡಿದ ವಿವಾದಿತ ಸ್ಥಳಕ್ಕೆ ಪ್ರತಿಪಕ್ಷ ನಾಯಕ ಆರ್.ಅಶೋಕ ಅವರು ಇಂದು ಬಿಜೆಪಿ ಮುಖಂಡರೊಂದಿಗೆ ಭೇಟಿ ನೀಡಿದರು. ಸ್ಥಳದಲ್ಲೇ ಇದ್ದ ನಿವಾಸಿಗಳ ಜೊತೆ ಮಾತನಾಡಿದ ಅವರು, ಗುರುತಿನ ಚೀಟಿ ಹಾಗೂ ಇತರೆ ದಾಖಲೆಗಳನ್ನು ಕೇಳಿ ಪರಿಶೀಲಿಸಿದರು.
ಭೇಟಿ ವೇಳೆ ಸ್ಥಳೀಯ ಮಹಿಳೆಯೊಂದಿಗೆ ಮಾತುಕತೆ ನಡೆಸಿದ ಅವರು, ಇಲ್ಲಿ ಎಷ್ಟು ವರ್ಷಗಳಿಂದ ವಾಸಿಸುತ್ತಿದ್ದೀರಿ, ಕರೆತಂದವರು ಯಾರು, ನಿವೇಶನ ಮಂಜೂರು ಮಾಡಲಾಗಿದೆಯೇ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆ, ಕಳೆದ 25 ವರ್ಷಗಳಿಂದ ಇಲ್ಲಿ ವಾಸವಿದ್ದೇವೆ ಎಂದು ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ, ಗೂಗಲ್ ನಕ್ಷೆಯಲ್ಲಿ 1 ವರ್ಷದ ಹಿಂದೆ ಮನೆಗಳು ಇರಲಿಲ್ಲ. ಯಾರ ಬಳಿಯೂ ಗುರುತಿನ ಚೀಟಿ ಇಲ್ಲ ಎಂದು ಅಶೋಕ ಹೇಳಿದರು.
“ಸಿಎಂ ಸಿದ್ದರಾಮಯ್ಯ ನೇತೃತ್ವದ ಟೋಪಿ ಸರ್ಕಾರ ಕನ್ನಡಿಗರಿಗೆ ಟೋಪಿ ಹಾಕಿ ಕರ್ನಾಟಕದ ವಿವಿಧೆಡೆ ಮಿನಿ ಬಾಂಗ್ಲಾದೇಶಗಳನ್ನು ಸೃಷ್ಟಿಸಿದೆ. ಕರ್ನಾಟಕ ಈಗ ಮಿನಿ ಬಾಂಗ್ಲಾಗಳ ಹಬ್ ಆಗುತ್ತಿದೆ. ನಾನು ಇಲ್ಲಿಗೆ ಭೇಟಿ ನೀಡುವ ಮುಂಚೆಯೇ ಬಿಜೆಪಿ ಮುಖಂಡರು ಇಲ್ಲಿ ಸರ್ವೆ ಮಾಡಿದ್ದಾರೆ. ನಾನು ಇಲ್ಲಿ ಮಾತನಾಡಿಸಿದಾಗ, ಆಂಧ್ರಪ್ರದೇಶದ ಪೆನುಗೊಂಡದಿಂದ ಬಂದವರು ಎಂದು ತಿಳಿದುಬಂದಿದೆ. ಒಬ್ಬ ಮಹಿಳೆ 26 ವರ್ಷದಿಂದ ಇಲ್ಲಿಯೇ ಇದ್ದೇವೆ ಎನ್ನುತ್ತಾರೆ. ಅಂದರೆ ಆಕೆ ಎರಡು ವರ್ಷದ ಮಗುವಿದ್ದಾಗ ಹೇಗೆ ನಡೆದುಕೊಂಡು ಇಲ್ಲಿಗೆ ಬಂದಳು ಎಂಬ ಪ್ರಶ್ನೆ ಮೂಡುತ್ತದೆ. ಇದು ನಿಜಕ್ಕೂ ಸಾಧ್ಯವೇ?”
– ಆರ್ ಅಶೋಕ
ವಿಧಾನಸಭೆ ವಿಪಕ್ಷ ನಾಯಕರು

