ಲೇಖನ
– ಜಯಶ್ರೀ.ಜೆ.ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಕಿಟಕಿಯಿಂದ ತೂರಿದ ಹೊಸ ಮುಂಜಾವಿನ ಕಿರಣಗಳು ನಮ್ಮನ್ನು ಹೊಸ ದಿನಕ್ಕೆ ಸ್ವಾಗತಿಸುತ್ತವೆ. ಆದರೆ ನಮಗೆಲ್ಲಿಯ ನವೋತ್ಸಾಹ? ಅಯ್ಯೋ! ಆಗಲೇ ಸೂರ್ಯ ಮತ್ತೆ ಬಂದನೇ? ಇವನು ತಾನು ನಿದ್ದೆ ಮಾಡುವುದಿಲ್ಲ. ನಮಗೂ ನಿದ್ದೆ ಮಾಡಲು ಬಿಡುವುದಿಲ್ಲ ಎಂದು ಲೊಚಗುಡುವುದರಿಂದಲೇ ದಿನಾರಂಭ. ನಾಳೆ ಬೇಗ ಏಳಬೇಕೆಂದು ಇಟ್ಟ ಅಲಾರಾಂ ಸದ್ದು ಮಾಡಿದಾಗ ಅದರ ತಲೆಗೊಂದು ಹೊಡೆದು ಮತ್ತೆ ಮುಸುಕೆಳೆದು ಮಲಗುವುದು ಸಾಮಾನ್ಯ. ಮನೆಯಲ್ಲಿನ ಹಿರಿಯರು ಹೊದ್ದ ರಗ್ಗು ಜಗ್ಗಿದಾಗ ವಟವಟ ಅನ್ನುತ್ತ ಒಲ್ಲದ ಮನಸ್ಸಿನಿಂದ ಹಾಸಿಗೆಯಿಂದ ಹೊರಬೀಳುವುದು ರೂಢಿ. ಹೀಗಿರುವಾಗ ಗೆಲುವು ಸಿಗುವುದಾದರೂ ಹೇಗೆ ಹೇಳಿ? ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರ ಬಾಯಲ್ಲಿ ಅಯ್ಯೋ ಬೇಜಾರು ಎನ್ನುವ ಪದಗಳನ್ನು ಕೇಳುತ್ತಲೇ ಇರುತ್ತೇವೆ. ಉದ್ಯೋಗ ಕ್ಷೇತ್ರ ಯಾವುದೇ ಇರಲಿ ವಯಸ್ಸು ಎಷ್ಟೇ ಇರಲಿ ಗಂಡಿರಲಿ ಹೆಣ್ಣಿರಲಿ ಅದು ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಅಂದರೆ ಬೇಜಾರು ಅನ್ನುವುದು ತುಂಬಾ ಸಹಜ.

ಎಲ್ಲರದರಲ್ಲೂ ಬೇಜಾರು!
ಬೆಳಿಗ್ಗೆ ಬೇಗ ಎದ್ದು ಮಾಡಲು ಸಾಕಷ್ಟು ಕೆಲಸವಿದ್ದರೂ ಏಳುವುದು ಬೇಜಾರು. ಹೀಗೆ ಮುಂಜಾನೆಯೇ ಬೇಜಾರು ಎಂದರೆ ದಿನವನ್ನು ಸುಂದರವಾಗಿಸುವುದು ಹೇಗೆ? ಹೆಚ್ಚಿನ ಉತ್ಪಾದನಾ ದಿನವನ್ನಾಗಿಸುವುದು ಹೇಗೆ ಅಲ್ಲವೇ? ಬೇಜಾರು ಎಂಬ ಶಬ್ದ ನಮ್ಮ ಬಾಯಲ್ಲಿ ಅದೆಷ್ಟು ಸಲ ಬಂದು ಹೋಗುತ್ತದೆಯೋ ಲೆಕ್ಕವಿಲ್ಲ. ಮಾಡಬೇಕಿರುವ ಯಾವ ಕೆಲಸವೂ ಬೇಡ ಅನಿಸುತ್ತದೆ. ಎಲ್ಲರದಲ್ಲೂ ಬೇಜಾರು. ಬೇಜಾರು ಅನ್ನಬಾರದು ಅಂದುಕೊಂಡರೂ ಪದೇ ಪದೇ ಅದೇ ಪದ ಹೊರಬೀಳುತ್ತದೆ. ಬೇಸರವೆಂದರೇನು? ಇದರಿಂದ ಹೊರ ಬರುವುದು ಹೇಗೆ? ಎಂಬ ಪ್ರಶ್ನೆಗಳು ಕಾಡದೇ ಇರವು ಅಲ್ಲವೇ?
ಬೇಜಾರು ಎಂದರೇನು?
ಬೇಜಾರು ಅಂದರೆ ಯಾವುದೇ ಕೆಲಸದಲ್ಲಿ ಮನಸ್ಸು ಇಲ್ಲದಿರುವ ಆವಸ್ಥೆ. ಯಾವುದರಲ್ಲೂ ಆಸಕ್ತಿ ಇಲ್ಲದಿರುವ ಸ್ಥಿತಿ. ಅವಕಾಶಗಳಿಗೆ ಸ್ಪಂದಿಸದೇ ಇರುವ ಮನೋಭಾವ. ಅಮೂಲ್ಯವಾದ ಸಮಯವನ್ನು ಲೆಕ್ಕಿಸದೇ ಇರುವ ಸಮಯ. ಸ್ವಚ್ಛಂದವಾಗಿ ಹಾರುವ ಮನಸ್ಸೆಂಬ ಹಕ್ಕಿಯನ್ನು ಬಲವಂತವಾಗಿ ಪಂಜರದಲ್ಲಿ ಕೂಡಿ ಹಾಕಿದಂತೆ. ಬೇಸರ ಒಂಥರ ಹಟ ಮಾಡುವ ಮಗುವಿನಂತೆ.
ಬೇಸರ ಯಾವುದಕ್ಕೆ?
ಇಷ್ಟವಿಲ್ಲದ ಕೆಲಸವನ್ನು ಮಾಡುವಾಗ, ಒಂದೇ ಕೆಲಸವನ್ನು ಹೆಚ್ಚು ಹೊತ್ತು ಮಾಡುತ್ತಿದ್ದರೆ, ಕೆಲಸದ ಮೇಲಿನ ಆಸಕ್ತಿ ಕಡಿಮೆ ಆದಾಗ, ಸ್ವತಃ ಏನನ್ನೂ ಮಾಡಿಕೊಳ್ಳಲಾಗದ ಅಸಹಾಯಕತೆ, ಮೇಲಿಂದ ಮೇಲೆ ಆರೋಗ್ಯ ಹದಗೆಡುತ್ತಿದ್ದರೆ, ಎಷ್ಟು ಓದಿದರೇನು ಎಂಬ ನಿರಾಶಾವಾದ. ಏನು ಮಾಡಿದರೇನು ದುರಾದೃಷ್ಟ ಹೋಗಿಬಿಡುತ್ತಾ ಎಂಬ ನಕಾರಾತ್ಮಕ ಧೋರಣೆಗಳು, ಇಷ್ಟವಾಗದ ವಿಷಯ ಕೇಳಿದಾಗ, ಹೇಳಬಾರದ್ದನ್ನು ಹೇಳಿ, ಕೇಳಬಾರದ್ದನ್ನು ಕೇಳಿ ಬೇಜಾರು ಮಾಡಿಕೊಳ್ಳಬೇಡಿ ಅಂದಾಗ ಬೇಸರ ಉಂಟಾಗುತ್ತದೆ
ದಿನ ಹಾಳು
ಜೀವನವೆಂಬುದು ಉಯ್ಯಾಲೆಯಂತೆ. ಮೇಲೆ ಕೆಳಗೆ ಜೀಕುತ್ತಲೇ ಇರಬೇಕು. ಒಳ್ಳೆಯ ಸಮಯ ಬಂದಾಗ ಖುಷಿ. ಕಷ್ಟದ ಸಮಯ ಎದುರಾದಾಗ ಬೇಜಾರು, ದುಃಖವಾಗುವುದು ಸಹಜ. ಆದರೆ ಯಾವುದೇ ಕಷ್ಟಗಳು ಇಲ್ಲದಿದ್ದರೂ ಬೇಜಾರುಗುತ್ತೆ ಎನ್ನುವ ಶಬ್ದ ಅಪಾಯವನ್ನು ತಂದೊಡ್ಡುತ್ತದೆ. ಒಳ ಮನಸ್ಸು ಹೇಳುತ್ತದೆ ಈ ದಿನ ಈ ಕ್ಷಣ ಅಮೂಲ್ಯ ಕಳೆದುಕೊಳ್ಳಬೇಡವೆಂದು. ಬೇಜಾರಿಗೆ ದಿನ ಹಾಳಾಗದಂತೆ ನೋಡಿಕೊಳ್ಳಬೇಕು.
ಬೇಡ ಏಕತಾನತೆ
ನನಗೂ ಬೇಸರದಿಂದ ಹೊರಬರಬೇಕೆಂಬ ಆಸೆ ಇಲ್ಲದೇ ಇಲ್ಲ. ಬೇಸರವನ್ನು ದೂರ ತಳ್ಳುವುದು ಹುಡುಗಾಟವೇನು? ಹಾಗಂತ ಇದಕ್ಕೆ ಖರ್ಚಿನ ಬಾಬತ್ತೇನೂ ಇಲ್ಲ. ಸೂಕ್ಷ್ಮವಾಗಿ ಗಮನಿಸಿದಾಗ ಅರ್ಥವಾಗುವ ಅಂಶಗಳೆಂದರೆ ಕೆಲಸ ಮಾಡುವುದು ಎಷ್ಟು ಮುಖ್ಯವೋ ಅದನ್ನು ಗಮನವಿಟ್ಟು ಮಾಡುವುದು ಸಹ ಅಷ್ಟೇ ಮುಖ್ಯ. ಕೆಲಸದ ಏಕತಾನತೆಯನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ದಿನವೂ ಒಂದೇ ದಾರಿಯಲ್ಲಿ ಒಂದೇ ಪಾರ್ಕಿಗೆ ಹೋಗುತ್ತಿದ್ದರೆ ಅದನ್ನು ಆಗಾಗ ಬದಲಾಯಿಸುವುದು ಸೂಕ್ತ.
ನಿರಂತರ ಪರಿಶ್ರಮ
ಯಾವುದಕ್ಕೆ ಆಗಲಿ ಗುರಿಯಿಡುವುದು ಮಾತ್ರ ಸಾಲದು, ನೀವು ಹೊಡೆಯಲೂ ಬೇಕು. ಜೀವನದಲ್ಲಿ ಬರುವ ಅವಕಾಶ, ಮತ್ತು ಯಶಸ್ಸು ಕೇವಲ ಪ್ರತಿಭೆಗೆ ದೊರೆತದ್ದಲ್ಲ. ಅವರ ನಿರಂತರ ಪರಿಶ್ರಮಕ್ಕೆ ದೊರೆತದ್ದು. ಎನ್ನುವ ಸಂಗತಿ ಥಾಮಸ್ ಅಲ್ವಾ ಎಡಿಸನ್ ಅವರಂತಹ ಜೀವನಗಾಥೆಗಳಿಂದ ತಿಳಿದು ಬರುತ್ತದೆ. ಪ್ರತಿಭೆಯಿದ್ದರೂ ಪರಿಶ್ರಮದ ಕೊರತೆಯಿದ್ದರೆ ಅವಕಾಶಗಳ ಪ್ರವಾಹವಿದ್ದರೂ ಉಪಯೋಗವಿಲ್ಲ.
ಉತ್ತಮ ಮಾರ್ಗ
ಹಳೆಯ ದಾರಿ ತಪ್ಪಿನಿಂದ ಕೂಡಿದೆ ಎಂದು ಅಂದುಕೊಳ್ಳುವುದಕ್ಕಿಂತ, ಇನ್ನೂ ಉತ್ತಮ ಮಾರ್ಗವಿರಬಹುದು ಎಂದು ಅಂದುಕೊಳ್ಳುವುದು ಕ್ಷೇಮಕರ. ಬೇಜಾರಿನ ದಾರಿ ಬಿಟ್ಟು ಪಾದರಸದಂತಿರುವ ದಾರಿಯನ್ನು ಆಯ್ಕೆ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ವೇದನೆಯಿರಲಿ, ಕೋಪವಿರಲಿ, ಅವಮಾನವಿರಲಿ, ಹತಾಶೆಯಿರಲಿ ಅವೆಲ್ಲವೂ ಬದುಕಿನ ಇನ್ನೊಂದು ಮುಖವೆಂದು ತಿಳಿಯಬೇಕು. ಇನ್ನೊಂದು ಮುಖವಾದ ಧೈರ್ಯ, ಛಲಗಳನ್ನು ಬಲಗೊಳಿಸಿದರೆ ಬೇಸರ ಬಗೆಹರಿದಂತೆ ಸರಿ. ತಾಳ್ಮೆಗೂ ಮತ್ತು ಬೇಸರಕ್ಕೂ ಸಂಬಂಧವಿದೆ. ತಾಳ್ಮೆಗೆಟ್ಟರೆ ಬೇಜಾರು ಮನೆ ಮಾಡುತ್ತದೆ. ತಾಳ್ಮೆ ಹೆಚ್ಚಾದಷ್ಟು ಬೇಸರ ಕಡಿಮೆಯಾಗುತ್ತದೆ.
ಚುರುಕಾಗಿರಿ

ಯಾವಾಗಲೂ ಚುರುಕಾಗಿದ್ದರೆ ಸಾಲದು: ಇರುವೆಗಳು ಸಹ ಚುರುಕಾಗಿರುತ್ತವೆ. ಪ್ರಶ್ನೆ ಏನೆಂದರೆ ನಾವು ಚುರುಕಾಗಿರುವುದು ಯಾವುದರ ಬಗ್ಗೆ? ಎಂಬುವುದು ಸಹ ಮುಖ್ಯವಾಗುತ್ತದೆ. ಮುಖ್ಯವಾದುದನ್ನು ನಿಯಮಿತವಾಗಿ ಮಾಡುವುದರಿಂದ ಗೆಲುವು ದಕ್ಕುವುದು ಖಚಿತ. ದೈನಂದಿನ ಧೋರಣೆ, ವರ್ತನೆ, ಚಟುವಟಿಕೆಗಳಲ್ಲಿ ಉತ್ಸಾಹ ತುಂಬಿದ್ದರೆ ಆಕಾಶವನ್ನೇ ಮುಟ್ಟಬಹುದು. “ನೀವು ನಿಮ್ಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರಬೇಕೆಂದು ಬಯಸುವುದಾದರೆ ಎಲ್ಲವನ್ನೂ ಆಳವಾಗಿ ಕಾಣುವ ಎಲ್ಲವನ್ನೂ ಆಳವಾಗಿ ಮಾಡುವ ವ್ಯಕ್ತಿಯಾಗಿರಿ. ಎಂತಹ ಒತ್ತಡದ ಸಮಯದಲ್ಲೂ ತಾಳ್ಮೆ ಕಳೆದುಕೊಳ್ಳದೇ ಹಸನ್ಮುಖಿಯಾಗಿರಿ..
ಧೈರ್ಯದಿಂದ ಮುನ್ನುಗ್ಗಿ
ಯಾವಾಗಲೂ ಪ್ರಪಂಚದ ಗತಿಯೊಡನೆ ಕಾಲು ಹಾಕಬೇಕು. ಬೇಜಾರು ಎಂದು ಕುಳಿತುಕೊಂಡರೆ ಸಾಧ್ಯವೆನಿಸಿದ್ದನ್ನು ಮಾಡಲು ಸಮಯ ಸಿಗುವುದಿಲ್ಲ. ಹೇಗಿದ್ದೆವೆಯೋ ಹಾಗೆ ಇದ್ದುಬಿಡುವುದು ಸಲ್ಲ. ಸದಾ ಬದುಕಿನ ಸವಾಲುಗಳನ್ನು ಎದುರಿಸುವ ಅನಿವಾಯರ್ಯತೆ ಇದೆ. ವಾಸ್ತವದ ಜಗತ್ತಿಗೆ ನಮ್ಮನ್ನು ತೆರೆದಿಕೊಳ್ಳದಿರುವ ಕಾರಣ ಮುಂದಿರುವ ಸವಾಲುಗಳನ್ನು ಎದುರಿಸಲು ಎಲ್ಲಿ ಅಸಮರ್ಥನಾಗುವೆನೋ ಎಂಬ ಆತಂಕ. ಬೇರೆಯವರ ಕಣ್ಣಲ್ಲಿ ದುರ್ಬಲನಾಗಿ ಕಾಣಿಸಿಬಿಡುವೆನೆಂಬ ಅಂಜಿಕೆಯಿಂದ ಚೆಂದದ ಬದುಕು ಕಟ್ಟಿಕೊಳ್ಳವುದು ಕನಸಿನ ಮಾತೇ ಆಗಿ ಉಳಿಯುವುದು. ಎಲ್ಲ ಹೊಂಗನಸುಗಳು ಸುಂದರ ಭಾವನೆಗಳು ಮುರುಟಿ ಹೋಗುವವು. ಬೇಜಾರು ಕಳವಳವನ್ನು ಒಪ್ಪಿಕೊಂಡು ಅವುಗಳಾಚೆ ಬಂದು ಸಾಧನಾಲೋಕಕ್ಕೆ ಕಾಲಿಡುವುದು ಧೈರ್ಯದಿಂದ ಮುನ್ನುಗ್ಗುವುದು ಸವಾಲು ಎನಿಸಿಬಿಡುವುದು ನಿಜ. ಬೇಸರವನ್ನು ಸ್ವೀಕರಿಸಿ ಅದನ್ನು ಸಕಾರಾತ್ಮಕವಾಗಿ ಬದಲಾಯಿಸಿ ಅದರತ್ತ ಹೆಜ್ಜೆ ಹಾಕುವುದು ಬಹಳ ಶಕ್ತಿಯುತವಾದದ್ದು. ನೆನಪಿರಲಿ, ಅವಕಾಶಗಳೇ ಬದುಕಿನ ಜೀವಾಳ.


