ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಶಿಕ್ಷಣ, ತಂತ್ರಜ್ಞಾನ, ಸಂಸ್ಕೃತಿಯನ್ನು ಸಂಯೋಜಿಸುವ ಒಂದು ವಿಶಿಷ್ಠ ಕಾರ್ಯಕ್ರಮವಾಗಿದ್ದು, ಮಕ್ಕಳಲ್ಲಿ ವೈಜ್ಞಾನಿಕ ಆಸಕ್ತಿ, ನಾವೀನ್ಯತೆ ಮತ್ತು ಸ್ಥಳೀಯ ಸಂಪ್ರದಾಯಗಳ ಅರಿವನ್ನು ಬೆಳೆಸುತ್ತದೆ ಎಂದು ಶಿಕ್ಷಕ ಸಿದ್ಧಲಿಂಗ ಚೌಧರಿ ಹೇಳಿದರು.
ಸಿಂದಗಿ ಪಟ್ಟಣದ ವಿಜಯಪುರ ರಸ್ತೆಯ ಚಿಕ್ಕಸಿಂದಗಿ ಬಳಿ ಇರುವ ಶಿವಕಾಶಿ ಮಹಿಳಾ ಸಂಘದ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಹಳ್ಳಿ ಹಬ್ಬ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಪೋಷಕರ ಮತ್ತು ಶಾಲೆಗಳ ಆದ್ಯ ಕರ್ತವ್ಯ. ಜ್ಞಾನ ಮತ್ತು ತಂತ್ರಜ್ಞಾನದೆಡೆಗೆ ಮಕ್ಕಳನ್ನು ಕರೆದುಕೊಂಡು ಹೋಗುವಲ್ಲಿ ಶಾಲೆಯು ಉತ್ತಮ ವಾತಾವರಣ ಪ್ರದರ್ಶಿಸುತ್ತಿದೆ ಎಂದರು.
ಈ ವೇಳೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಸುಧಾಕರ ಚವ್ಹಾಣ ಮಾತನಾಡಿ, ಇದು ಪಠ್ಯಕ್ರಮದ ಒಂದು ಭಾಗವೇ ಆಗಿದ್ದು, ಮಕ್ಕಳಲ್ಲಿರುವ ಪ್ರತಿಭೆ ಅನಾವರಣ ಮಾಡಲು ಉತ್ತಮ ವೇದಿಕೆ ಎಂದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪತ್ರಕರ್ತ ನಾಗೇಶ ತಳವಾರ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಮಹಾಂತೇಶ ನೂಲಾನವರ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಶೇಖ ಮಾತನಾಡಿ, ಮಕ್ಕಳ ಬೆಳವಣಿಗೆಯಲ್ಲಿ ಶಾಲಾ ಶಿಕ್ಷಕರ ಪಾತ್ರ ಎಷ್ಟು ಮುಖ್ಯವೋ ಪಾಲಕರ ಪಾತ್ರವು ಅಷ್ಟೇ ಮುಖ್ಯವಾಗಿದೆ. ಪಾಲಕರು ಮಕ್ಕಳ ಅಧ್ಯಯನದೆಡೆಗೆ ನಿಗಾ ವಹಿಸುವುದು ಅಗತ್ಯವಾಗಿದೆ. ಸುಷ್ಮಾ ಶಾಲೆಯ ಆವರಣದಲ್ಲಿ ದೇಸೀ ಸೊಗಡನ್ನು ಪರಿಚಯಿಸುವ ಹಳ್ಳಿ ಹಬ್ಬ ಒಂದು ವಿಶಿಷ್ಟ ಕಾರ್ಯಕ್ರಮ ಎಂದರು.
ವಸ್ತು ಪ್ರದರ್ಶನದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ನಾನಾ ಬಗೆಯ ಮಾದರಿ ಪ್ರದರ್ಶನ ಆಕರ್ಷಕವಾಗಿತ್ತು. ಹಳ್ಳಿ ಹಬ್ಬಕ್ಕೆ ಸಂಬಂಧಿಸಿದ ಗ್ರಾಮೀಣ ಸೊಗಡಿನ ಚಿತ್ರಣಗಳು ಜನಮನ ಸೆಳೆದವು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಮುಖ್ಯಸ್ಥ ಶರಣಗೌಡ ಬಿರಾದಾರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕ ಮಲ್ಲಿಕಾರ್ಜುನ ಬಿರಾದಾರ, ಕಾವ್ಯ ಬಿರಾದಾರ, ಮುಖ್ಯಗುರುಮಾತೆ ವಿಜಯಲಕ್ಷ್ಮಿ ಬಿರಾದಾರ, ಮಲ್ಲಮ್ಮ ಕುಂಬಾರ, ಪೂಜಾ ಕರ್ನಾಳ, ಭಾರತಿ ಅಗಸರ, ಜಯಶ್ರೀ ಚಲವಾದಿ, ವೈಷ್ಣವಿ ಗುತ್ತೇದಾರ, ರಿಜ್ವಾನ ತಾಂಬೋಳಿ, ಸಿದ್ದಮ್ಮ ಹರವಾಳ, ರಾಘವೇಂದ್ರ ನಾಯಕ, ಸಂಗಮೇಶ ಕರಡಿ, ಪವನ ಕುಲಕರ್ಣಿ, ಕುಮಾರ ಗುಡಿಮನಿ, ಸುಧೀರ ಕೆಂಭಾವಿ, ಪಿ.ಎಸ್.ಸಾಸನೂರ, ಶಾಂತು ಬಿರಾದಾರ, ಕಲ್ಯಾಣಿ ಧೂಪ, ರವಿ, ಗೋಕುಲ ನಾಯಕ ಸೇರಿದಂತೆ ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.

