ಕೊಲ್ಹಾರ ತಾಲೂಕಿನ ಅರಷಣಗಿ, ಹಣಮಾಪುರ, ರೋಣಿಹಾಳ ಗ್ರಾಮ ಪಂಚಾಯಿತಿಗಳಿಗೆ ಭೇಟಿ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ತಾಲೂಕಿನ ಅರಷಣಗಿ, ಹಣಮಾಪುರ, ರೋಣಿಹಾಳ ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಪ್ರಕಾಶ ವಡ್ಡರ ಅವರು ಮಂಗಳವಾರ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
ಅರಷಣಗಿ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಭೇಟಿ ನೀಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ಯೋಜನೆಗಳಾದ ಕಳೆದ ಮೂರು ವರ್ಷದ ತರಿಗೆ ವಸೂಲಾತಿ, ಸ್ವಚ್ಛ ಭಾರತ ಮಿಷನ್, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪ್ರಗತಿ ಹಂತದಲ್ಲಿರುವ ರಾಜೀವ್ ಗಾಂಧಿ ಸೇವಾ ಕೇಂದ್ರಕ್ಕೆ ಭೇಟಿ ಮಾಡಿ, ಅತೀ ತುರ್ತಾಗಿ ಕಾಮಗಾರಿಯನ್ನು ಮುಕ್ತಾಯಗೊಳಿಸಲು ಸೂಚಿಸಿದರು. ಇ-ಕೆವೈಸಿ, ಹೊಸ ಉದ್ಯೋಗ ಚೀಟಿಗಳು ಮತ್ತು ಪ್ರಗತಿ ಪರಿಶೀಲನೆ ನಡೆಸಿದರು.
ಹಣಮಾಪುರ ಗ್ರಾಪಂ. ಭೇಟಿ ನೀಡಿ ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ವೀಕ್ಷಣೆ ಮಾಡಿ, ರೋಣಿಹಾಳ ಗ್ರಾಮ ಪಂಚಾಯಿತಿಗೆ ಭೇಟಿ ನೀಡುವ ಮೂಲಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗ್ರಂಥಾಲಯ, ನರೇಗಾ ಯೋಜನೆಯಡಿ ನಿರ್ಮಾಣಗೊಂಡಿರುವ, ಗೊಧಾಮು, ರಾಜೀವ್ ಗಾಂಧಿ ಸೇವಾ ಕೇಂದ್ರ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲಾ ಮಕ್ಕಳ ಹಾಜರಾತಿ, ಶಾಲೆಯಲ್ಲಿ ಕುಡಿಯುವ ನೀರು ಮತ್ತು ಸ್ವಚ್ಛತೆಯಲ್ಲಿ ಅತ್ಯಂತ ಕಾಳಜಿಯಿಂದ ಕಾರ್ಯನಿರ್ವಹಿವಂತೆ ಶಿಕ್ಷಕರಿಗೆ ತಿಳಿಸಿದರು. ಬಿಸಿಯೂಟ ಕೋಣೆ ಪರಿಶೀಲನೆ ನಡೆಸಿ ದಿನದ ವೇಳಾಪಟ್ಟಿಯಂತೆ ಆಹಾರ ಸಿದ್ಧಪಡಿಸಿರುವುದನ್ನು ಪರಿಶೀಲನೆ ಮಾಡಿದರು.
ಶಾಲಾ ಆವರಣದಲ್ಲಿ ಸ್ಥಳಾವಕಾಶ ಇರುವುದರಿಂದ ಪೌಷ್ಟಿಕ ಕೈತೋಟ ನಿರ್ಮಾಣ ಮಾಡಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸಲಹೆ ನೀಡಿದರು.
ನಂತರ ತರಗತಿಗಳಿಗೆ ತೆರಳಿ ಮಕ್ಕಳಿಗೆ ಪಾಠ ಬೋಧಿಸಿದರು. ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಬೆಳಸಿಕೊಳ್ಳಬೇಕು, ಸಾಧನೆಯ ಗುರಿ ತಲುಪಿ ಎಂಬ ಕಿವಿ ಮಾತು ಹೇಳಿದರು.
ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಮದ್ದಿನ, ಅರಷಣಗಿ, ಹಣಮಾಪುರ ಮತ್ತು ರೋಣಿಹಾಳ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯವರು, ಗ್ರಾಪಂ. ಕಾರ್ಯದರ್ಶಿಯವರು ಹಾಗೂ ಗ್ರಾಮ ಪಂಚಾಯಿತಿ ಎಲ್ಲ ಸಿಬ್ಬಂದಿಯವರು, ಊರಿನ ನಾಗರಿಕರು ಉಪಸ್ಥಿತರಿದ್ದರು.

