ಪಂಚಮಸಾಲಿ ಸಮಾಜದ ಮುಖಂಡರಿಂದ ವಿಜಯಪುರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ಅನಾವರಣಗೊಳ್ಳಲಿರುವ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆಯು ಸರ್ಕಾರದ ಯಾವುದೇ ಪ್ರತಿನಿಧಿ ಗಳಿಂದಾಗಲಿ
ಅಥವಾ ಯಾವುದೇ ಸಮಾಜದ ಸ್ವತಂತ್ರ ಹೋರಾಟಗಾರರ ಮೂಲಕ ಉದ್ಘಾಟನೆಗೊಳ್ಳಲಿ ಎಂದು ಪಂಚಮಸಾಲಿ ಸಮಾಜದ ಮುಖಂಡರು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಜಿಲ್ಲೆಯ ಪಂಚಮಸಾಲಿಗರ ಹಾಗೂ ಕೆಲವು ದಾನಿಗಳ ಸಹಕಾರದಿಂದ ಕಿತ್ತೂರು ರಾಣಿ ಚನ್ನಮ್ಮನ ಪ್ರತಿಮೆ ವಿಜಯಪುರ ಬಸ್ ನಿಲ್ದಾಣದಲ್ಲಿ ನಿರ್ಮಾಣಗೊಂಡಿದೆ. ಇದರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಆಮಂತ್ರಿಸಿರುವ ಸುದ್ದಿ ಕೇಳಿ ಸಮಾಜ ಬಾಂಧವರಿಗೆ ತುಂಬಾ ನೋವಾಗಿದೆ. ಏಕೆಂದರೆ ಕಳೆದ ಐದು ವರ್ಷಗಳಿಂದ ಪಂಚಮಸಾಲಿ ಬಡ ಮಕ್ಕಳ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ನಮ್ಮ ಜಗದ್ಗುರುಗಳ ನೇತೃತ್ವದಲ್ಲಿ ನ್ಯಾಯಸಮ್ಮತ ಹೋರಾಟ ಮಾಡುತ್ತಾ ಬಂದಿದ್ದೇವೆ. ಕಳೆದ ವರ್ಷ ಸಿದ್ದರಾಮಯ್ಯನವರು ಬೆಳಗಾಂವಿಯಲ್ಲಿ ಶಾಂತಿಯುತವಾಗಿ ಸಮಾವೇಶ ಮಾಡುವಾಗ
ನಮ್ಮ ಸಾವಿರಾರು ಹೋರಾಟಗಾರರ
ಮೇಲೆ ಕಾನೂನು ಬಾಹಿರವಾಗಿ ಪೋಲೀಸರ ಮೂಲಕ ಹಲ್ಲೆ ಮಾಡಿಸಿದ್ದಾರೆ. ಅಷ್ಟೇ ಅಲ್ಲ ಇದುವರೆಗೂ ಸಮಾಜದ
ಬೇಡಿಕೆಗೆ ಸ್ಪಂದಿಸುವ ಪ್ರಯತ್ನನೂ ಮಾಡಿಲ್ಲ ಹಾಗೂ ಅಧಿವೇಶನದಲ್ಲಿ ಹೋರಾಟಗಾರರಿಗೆ ನೋವಾಗುವ ರೀತಿಯಲ್ಲಿ ಉತ್ತರ ಕೊಟ್ಟಿದ್ದಾರೆ. ಈ ಘಟನೆ ಇನ್ನೂ ನಮ್ಮ ಮನಸಿನಿಂದ ದೂರವಾಗಿಲ್ಲ.
ಪಂಚಮಸಾಲಿಗಳ ಭಾವನೆಗೆ ನೋವುಂಟು ಮಾಡಿದ ಸಿದ್ದರಾಮಯ್ಯನವರಿಂದ ಚನ್ನಮ್ಮ ಪ್ರತಿಮೆ ಅನಾವರಣ ಬೇಡ ಎನ್ನುವುದು ನಮ್ಮೆಲ್ಲರ ಒಕ್ಕೊರಲಿನ ಮನವಿಯಾಗಿದೆ. ಸಿದ್ದರಾಮಯ್ಯನವರನ್ನು ಹೊರತುಪಡಿಸಿ ಸರ್ಕಾರದ ಯಾವದೇ ಜನಪ್ರತಿನಿದಿಗಳ ಅಥವಾ ಯಾವುದೇ ಸಮುದಾಯದ ಸ್ವತಂತ್ರ ಹೋರಾಟಗಾರ ಮೂಲಕ ಮಾಡಿಸಬೇಕು ಎಂದು ಮನವಿ ಮಾಡಿದರು.
ಒಂದು ವೇಳೆ ನಮ್ಮ ಭಾವನೆಗಳಿಗೆ ಸ್ಪಂದಿಸದಿದ್ದರೆ ಜಿಲ್ಲೆಯ ಸಮಾಜ ಬಾಂಧವರು ಕಪ್ಪು ಬಟ್ಟೆ ಧರಿಸಿ ಮೌನ ಸತ್ಯಾಗ್ರಹ ಮಾಡುತ್ತೇವೆ ಎಂದು
ಎಚ್ಚರಿಕೆ ನೀಡಿದರು.
ಈ ವೇಳೆ ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ಬಿಎಮ್ ಪಾಟೀಲ್, ನಿಂಗನಗೌಡ ಸೋಲಾಪುರ್, ಸಂತೋಷ್ ಮುಂಜಾನೆ, ಈರಣ್ಣ ಗೌಡ ಬಿರಾದಾರ, ಕುಮಾರ್ ಪಾಟೀಲ್, ಸಿದ್ದಣ್ಣ ಮುಕಾತಿಹಾಳ್, ಈರಣ್ಣ ಶಿರಮಗೊಂಡ, ಅಶೋಕ್ ಅಲ್ಲಾಪುರ್, ಮಲ್ಲಿಕಾರ್ಜುನ್ ಕೆಂಗನಾಳ, ಸಿದ್ದನಗೌಡ ಬಿರಾದಾರ್, ಸಾಹೇಬ್ ಗೌಡ ಯರನಾಳ, ಶ್ರೀಶೈಲ್ ಬುಕ್ಕಣಿ, ರುದ್ರೇಶ್ ಯರನಾಳ ಇತರರಿದ್ದರು

