ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ವಿಜಯಪುರ ನಗರ, ತಾಲೂಕಾ ಮಟ್ಟದ ಹಾಗೂ ಹೋಬಳಿ ಮಟ್ಟದ ನಗರಗಳಲ್ಲಿ 2026 ರ – ಹೊಸ ವರ್ಷ ಆಚರಣೆ ಮಾಡುವ ಕಾಲಕ್ಕೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಮುಂಜಾಗ್ರತೆ ವಹಿಸಿ, ಜಿಲ್ಲೆಯ ಎಲ್ಲ ಹೋಟೆಲ್, ಲಾಡ್ಜ್, ರೆಸ್ಟೋರೆಂಟ್ ಹಾಗೂ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಸಂಬ0ಧಪಟ್ಟ ಮಾಲೀಕರು, ಮ್ಯಾನೇಜರುಗಳ ಸಭೆ ಕೈಕೊಂಡಿದ್ದು, ಸಭೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಎಲ್ಲ ಅಗತ್ಯ ಮುಂಜಾಗ್ರತೆ ಕ್ರಮ ವಹಿಸುವ ಕುರಿತು ಸೂಚಿಸಿದ್ದಲ್ಲದೇ ಎಲ್ಲ ರೀತಿಯ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಲು, ಸಿಸಿಟಿವ್ಹಿ ಅಳವಡಿಸಿ – ಸುಸ್ಥಿತಿಯಲ್ಲಿರುವ ಬಗ್ಗೆ ಕ್ರಮ ಕೈಕೊಳ್ಳುವಂತೆ ಸೂಕ್ತ ತಿಳುವಳಿಕೆ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಈ ಕುರಿತು ಮಂಗಳವಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ ಅವರು, ವಿಜಯಪುರ ಜಿಲ್ಲೆಯಾದ್ಯಂದ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಾದ್ಯಂತ 165 ಕಡೆಗಳಲ್ಲಿ ಬ್ಯಾರಿಕೆಡಿಂಗ್ ವ್ಯವಸ್ಥೆ, 39 ಕಡೆಗಳಲ್ಲಿ ಚೆಕ್ ಪಾಯಿಂಟ್ಗಳ ವ್ಯವಸ್ಥೆ, ಪ್ರಮುಖ 16 ಸಾರ್ವಜನಿಕ ಸ್ಥಳಗಳನ್ನು ಎಎಸ್‌ಸಿ (Anti Sabotage Check) ತಂಡದವರಿಂದ ಪರಿಶೀಲಿಸಲಾಗಿದೆ ಹಾಗೂ ಹೆಚ್ಚುವರಿ ಎಸ್‌ಪಿ-01, ಡಿಎಸ್‌ಪಿ-06, ಪಿಐ/ಸಿಪಿಐ-13, ಪಿಎಸ್ಐ-46, ಎಎಸ್ಐ-75, ಸಿಎಚ್‌ಸಿ/ಸಿಪಿಸಿ-643, ಗೃಹ ರಕ್ಷಕ ಸಿಬ್ಬಂದಿ-200 ಹೀಗೆ ಒಟ್ಟು 987 ಜನ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಜನರನ್ನು ಬಂದೋಬಸ್ತ ಕರ್ತವ್ಯಕ್ಕೆ ನೇಮಿಸಿದ್ದಲ್ಲದೇ 10-ಡಿಎಆರ್, 01-ಐಆರ್‌ಬಿ ತುಕಡಿಗಳನ್ನು ಜಿಲ್ಲೆಯಾದ್ಯಂತ ನಿಯೋಜಿಸಲಾಗಿದೆ.
ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯ ಸೂಚನೆಗಳು:
ಹೊಸ ವರ್ಷದ ಸಂಭ್ರಮಾಚರಣೆಯನ್ನು ಎಲ್ಲರೂ ಶಾಂತಿ, ಸೌಹಾರ್ಧತೆ ಹಾಗೂ ಸುರಕ್ಷಿತವಾಗಿ ಆಚರಿಸಬೇಕೆಂದು ಪೊಲೀಸ್ ಇಲಾಖೆ ವತಿಯಿಂದ ಸಾರ್ವಜನಿಕರಲ್ಲಿ ಕೋರಲಾಗಿದೆ.
ಸಾರ್ವಜನಿಕ ಶಾಂತಿ ಕಾಪಾಡಿ
ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ರೀತಿಯ ಚಟುವಟಿಕೆಗಳಲ್ಲಿ ತೊಡಗಬಾರದು. ಗಲಾಟೆ, ಅಶಾಂತಿ, ಹಲ್ಲೆ ಅಥವಾ ಅಸಭ್ಯ ವರ್ತನೆ ಕಾನೂನು ಬಾಹಿರವಾಗಿದೆ.
ಮಧ್ಯಪಾನ ಮಾಡಿ ವಾಹನ ಚಾಲನೆ ನಿಷೇಧ
ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಶಬ್ದ ಮಾಲಿನ್ಯ ನಿಯಂತ್ರಣ
ನಿಗದಿತ ಸಮಯ ಮೀರಿಸಿ ಜೋರಾಗಿ ಸಂಗೀತ, ಡಿಜೆ, ಪಟಾಕಿ ಸಿಡಿಸುವುದು ನಿಷೇಧ. ದ್ವೀ-ಚಕ್ರ ವಾಹನಗಳ ಸೈಲೆನ್ಸ್ರ್ ತೆಗೆದು ಮೋಟಾರ್ ಸೈಕಲ್ ಚಾಲನೆ ಮಾಡುವುದು ಶಬ್ದ ಮಾಲಿನ್ಯವಾಗಿದ್ದು, ಅಂತಹವರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಕೊಳ್ಳಲಾಗುವುದು. ಕಾರಣ ಸಾರ್ವಜನಿಕರು ಶಬ್ದ ಮಾಲಿನ್ಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಪೊಲೀಸ್ ತಪಾಸಣೆಗೆ ಸಹಕರಿಸಿ
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪೊಲೀಸ್ ತಪಾಸಣೆ ಹೆಚ್ಚಿಸಲಾಗಿದ್ದು, ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು.
ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆ
ಮಹಿಳೆಯರ ಮತ್ತು ಮಕ್ಕಳ ಮೇಲೆ ದುರ್ವರ್ತನೆ, ಕಿರುಕುಳ, ಚುಡಾಯಿಸುವುದು ಕಂಡುಬ0ದಲ್ಲಿ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
ನಿಗದಿತ ಸಮಯ ಪಾಲನೆ
ಸಾರ್ವಜನಿಕ ಸ್ಥಳಗಳಲ್ಲಿ ನಿಗದಿತ ಸಮಯ ಮೀರಿಸಿ ಗುಂಪುಗೂಡುವುದು, ವಾಹನಗಳನ್ನು ವೇಗವಾಗಿ ಚಲಾಯಿಸುವುದು, ರಸ್ತೆ ತಡೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
ತುರ್ತು ಪರಿಸ್ಥಿತಿ – ಸಹಾಯವಾಣಿ:
ಯಾವುದೇ ತುರ್ತು ಪರಿಸ್ಥಿತಿ ಅಥವಾ ಅಹಿತಕರ ಘಟನೆ ಕಂಡುಬ0ದಲ್ಲಿ ತಕ್ಷಣ 112 ಗೆ ಕರೆ ಮಾಡಬೇಕು.
ಹೊಸ ವರ್ಷವನ್ನು ಎಲ್ಲ ನಾಗರೀಕರು ಜವಾಬ್ದಾರಿಯುತವಾಗಿ, ಸುರಕ್ಷಿತವಾಗಿ ಮತ್ತು ಸಂತೋಷದಿ0ದ ಆಚರಿಸುವಂತೆ ಪೊಲೀಸ್ ಇಲಾಖೆ ವತಿಯಿಂದ ಕೋರಲಾಗಿದೆ. ಸಾರ್ವಜನಿಕರ ಸಹಕಾರವೇ ಶಾಂತಿಪೂರ್ಣ ಆಚರಣೆಗೆ ಮುಖ್ಯವಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

