ಉದಯರಶ್ಮಿ ದಿನಪತ್ರಿಕೆ
ಚಡಚಣ: ಕುವೆಂಪು ಅವರು ಮಾನವಕುಲಕ್ಕೆ ನೀಡಿದ ಮಾರ್ಗದರ್ಶನ ಹಾಗೂ ಆದರ್ಶಗಳು ಸಾರ್ವಕಾಲಿಕವಾಗಿದ್ದು, ಅವರ ವಿಶ್ವಮಾನವ ಸಂದೇಶದ ಚಿಂತನೆಗಳು ಇಂದಿನ ಜಾಗತಿಕ ಸಮಸ್ಯೆಗಳಿಗೆ ಪರಿಹಾರವಾಗಿವೆ ಎಂದು ಶಿಕ್ಷಕ ಬಸವರಾಜ ಕರಜಗಿ ಹೇಳಿದರು.
ಅವರು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ–2 ಮರಡಿ ಶಾಲೆಯಲ್ಲಿ ಕುವೆಂಪು ಅವರ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ‘ವಿಶ್ವಮಾನವ ದಿನಾಚರಣೆ’ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವಮಾನವ ಸಂದೇಶವು ಮನುಜಕುಲ, ವಿಶ್ವಪಥ, ಸರ್ವೋದಯ, ಸಮನ್ವಯ ಹಾಗೂ ಪೂರ್ಣದೃಷ್ಟಿ ಎಂಬ ಮೌಲ್ಯಗಳ ಮೇಲೆ ನಿಂತಿದ್ದು, ಯಾವುದೇ ವ್ಯಕ್ತಿ ಜಾತಿಯಿಂದಲ್ಲ, ನೈತಿಕ ವ್ಯಕ್ತಿತ್ವದಿಂದ ಮುಖ್ಯವಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದ್ದಾಗಿತ್ತು. ನಾವೆಲ್ಲರೂ ಅವರ ಆಶಯದಂತೆ ಬದುಕಬೇಕು ಎಂದು ಹೇಳಿದರು.
ಶಿಕ್ಷಕ ಜಗದೀಶ ಚಲವಾದಿ ಮಾತನಾಡಿದರು.
ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಾದ ಮೌನೇಶ್ ವಿಭೂತಿ, ಗಗನ ಶಂಖು, ಶ್ರುತಿ ಕ್ಷತ್ರಿ, ಅಂಜಲಿ ಇಟಗಾರ, ಶ್ರಾವಣಿ ಕೋಳಿ, ಅನಿತಾ ಕೋಳಿ, ದೀಕ್ಷಿತಾ ಗಾಡಿವಡ್ಡರ, ರಕ್ಷಿತಾ ನಾಟಿಕಾರ, ನೇತ್ರಾ ಕರ್ಜಗಿ, ಯಶೋದಾ ಸಾವಳೆ, ನದೀಮ್ ಕಾಜಿ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಪ್ರಬಂಧ ಸ್ಪರ್ಧೆಯಲ್ಲಿ ನದೀಮ್ ಕಾಜಿ, ಮೌನೇಶ್ ವಿಭೂತಿ, ಗಗನ ಶಂಖು, ಅಂಜಲಿ ಇಟಗಾರ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ಮಹಾಂತೇಶ ಉಮರಾಣಿ ವಹಿಸಿದ್ದರು.
ಶಿಕ್ಷಕ ಡಿ.ಎಸ್. ಬಗಲಿ ಅವರು ಸ್ವಾಗತಿಸಿ ನಿರೂಪಿಸಿದರು. ಶಿಕ್ಷಕ ಮಹಾದೇವ ಐಹೊಳ್ಳಿ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಹಾದೇವ ಆದಿಗೊಂಡೆ, ಎಚ್.ಜೆ. ಲೋಣಿ, ವಿ.ಎಸ್. ಪತ್ತಾರ, ಸುನಂದಾ ಕೋಟಿ, ಅಪೇಕ್ಷಾ ಕರಜಗಿ, ಪ್ರೇಮಾ ಧೋತ್ರೆ, ಅಡುಗೆ ಸಹೋದರಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

