ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ಇತ್ತೀಚೆಗೆ ಬೆಚ್ಚಿ ಬೀಳಿಸಿದ ಸರಗಳ್ಳತನದ ಪ್ರಕರಣ ಬೇಧಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವ ಮೂಲಕ ಅಪಹರಿಸಿದ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಇಲ್ಲಿನ ಸ್ಟೇಷನ್ ರಸ್ತೆಯ ದಿವಟಗೇರಿಯಲ್ಲಿ ಕಳೆದ ಶುಕ್ರವಾರ ಸಂಜೆ ಪಾದಚಾರಿ ಮಹಿಳೆ ಮೇಲೆ ಆರೋಪಿಗಳು ದಾಳಿ ನಡೆಸಿ ಚಿನ್ನಾಭರಣ ದೋಚಿದ್ದರು. ಅಲ್ಲದೆ, ಮಹಿಳೆಯನ್ನು ಗಂಭೀರವಾಗಿ ಗಾಯಗೊಳಿಸಿದ್ದರು. ಈ ಕುರಿತು ಗೋಲಗುಂಬಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಿದ ಗೋಲ್ ಗುಂಬಜ್ ಠಾಣೆಯ ಪೊಲೀಸರು, ಆರೋಪಿಗಳಾದ ಆಸೀಫ ಮೈಬೂಬ ಜಮಾದಾರ ಹಾಗೂ ದಿವಟಗೇರಿಯ ನಿವಾಸಿ ರಿಯಾನ ಸಯ್ಯದ ರಿಹಾನ ಅಮಿನ ಸಲಾವುದ್ದಿನ ಮನಿಯಾರ ಎಂಬುವವರನ್ನು ಬಂಧಿಸಿ ಹೆಡೆಮುರಿ ಕಟ್ಟಿ ತಂದಿದ್ದಾರೆ.
ಸದರಿ ಆರೋಪಿಗಳಿಂದ ಒಟ್ಟು 44,000 ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ ಹಾಗೂ ಡಿಎಸ್‌ಪಿ ಡಾ. ಬಸವರಾಜ ಯಲಿಗಾರ ಮಾರ್ಗದರ್ಶನದಲ್ಲಿ ಸಿಪಿಐ ಸಂಜೀವ ಬಳಿಗಾರ ನೇತೃತ್ವದಲ್ಲಿ ಗೋಲಗುಂಬಜ ಪೊಲೀಸ್ ಠಾಣೆಯ ಪಿಎಸ್‌ಐಗಳಾದ ಎಂ.ಡಿ. ಘೋರಿ, ಹಸೀನಾ ವಾಲಿಕಾರ, ಎಎಸ್‌ಐ ಎಸ್.ಆರ್. ಹಂಗರಗಿ ಹಾಗೂ ಸಿಬ್ಬಂದಿಗಳಾದ ಜೆ.ಎಸ್. ವನಜಕರ, ಕುಶಾ ರಾಠೋಡ, ಅಬ್ದುಲ್‌ಖಾದಿರ ಕೋಲೂರ, ಮಲ್ಲಿಕಾರ್ಜುನ ಚಾವರ, ಸೋಮಯ್ಯಾ ಮಠ, ಮಹಾದೇವ ಅಡಿಹುಡಿ ಅವರನ್ನೊಳಗೊಂಡ ತನಿಖಾ ತಂಡ ಕಾರ್ಯಾಚರಣೆ ನಡೆಸಿತ್ತು.

