ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸುಕ್ಷೇತ್ರ ಶೇಗುಣಸಿಯಲ್ಲಿರುವ ಹರಳಯ್ಯನಗುಂಡದಲ್ಲಿ ಮಹಾಶಿವಶರಣ ಹರಳಯ್ಯ ಹಾಗೂ ಮಾತೋಶ್ರೀ ಕಲ್ಯಾಣಮ್ಮನವರ ಮೂರ್ತಿ ಪ್ರತಿಷ್ಠಾಪನೆ ವೈಭವದಿಂದ ನಡೆಯಿತು.
ಸಮಾರಂಭವನ್ನು ಉದ್ಘಾಟಿಸಿದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಹರಳಯ್ಯ ಸಮಾಜ ಕಾಯಕವನ್ನೇ ನಂಬಿದ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡ ಸಮಾಜ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಹರಳಯ್ಯ ಸಮಾಜದ ಅಭಿವೃದ್ಧಿಗೆ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡಬೇಕು, ಈ ಎಲ್ಲ ಸಮುದಾಯಗಳಿಗೆ ಹೋರಾಡುವ ಶಕ್ತಿ ಇಲ್ಲ, ಸರ್ಕಾರವೇ ಸ್ವಯಂ ಪ್ರೇರಿತವಾಗಿ ಈ ಸಣ್ಣ ಸಮುದಾಯಗಳ ಧ್ವನಿಯಾಗಬೇಕು, ಈ ಎಲ್ಲ ಸಮಾಜಗಳಿಗೆ ಹೆಚ್ಚಿನ ಮೀಸಲಾತಿ, ವಿವಿಧ ಸ್ವಯಂ ಉದ್ಯೋಗ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಶಿವಶರಣ ಹರಳಯ್ಯನವರ ಕಾಯಕನಿಷ್ಠೆ, ಅವರ ಶ್ರೇಷ್ಠ ಸಂದೇಶಗಳು ಪ್ರತಿಯೊಬ್ಬರಿಗೂ ಮಾದರಿ, ಅಣ್ಣ ಬಸವಣ್ಣನವರ ಮಾನವೀಯತೆ, ಡಾ.ಅಂಬೇಡ್ಕರ ಅವರು ಸಾರಿದ ಸಮಾನತೆಯ ಬಲದಿಂದ ಇಂದು ದೇಶ ಸಮೃದ್ಧವಾಗಿದೆ, ಭಾರತೀಯ ಸಂವಿಧಾನ ಫಲವಾಗಿ ಪ್ರತಿಯೊಬ್ಬರು ಘನತೆಯಿಂದ ಬದುಕುವಂತಾಗಿದೆ, ಈ ಎಲ್ಲ ರಾಷ್ಟ್ರಭಕ್ತರ ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಿದರು.
ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ಶಿವಶರಣ ಹರಳಯ್ಯ ಸಮಾಜದ ಪ್ರಗತಿಗೆ ನಾನು ಪ್ರಾಮಾಣಿಕವಾಗಿ ಶ್ರಮಿಸುವೆ, ಸಮಾಜ ಬಾಂಧವರೊಡನೆ ಉತ್ತಮ ಬಾಂಧವ್ಯವಿದೆ, ಅವರ ಏಳ್ಗೆಗಾಗಿ ನಾನು ಸದಾ ಸಿದ್ಧ, ಸಣ್ಣ ಸಮುದಾಯಗಳ ಧ್ವನಿಯಾಗಿ ಸರ್ಕಾರಕ್ಕೆ ವಿವಿಧ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸುವೆ, ಶರಣ ಹರಳಯ್ಯನವರ ಮೂರ್ತಿ ಪ್ರತಿಷ್ಠಾಪನೆಯಾಗಿರುವುದು ಪ್ರತಿಯೊಬ್ಬರು ಸಂತೋಷಪಡುವ ವಿಷಯ, ಇದೇ ರೀತಿ ಸಮಾಜ ಸಂಘಟಿತವಾಗಿ ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿಯೂ ಮುಂದೆ ಬರಬೇಕು ಎಂದು ಕರೆ ನೀಡಿದರು.
ಜೇವರ್ಗಿಯ ಜಗರಳ್ಳಿ ಗುರುಪೀಠದ ಶ್ರೀ ಸಿದ್ಧಬಸವ ಕಬೀರ ಮಹಾಸ್ವಾಮೀಜಿ, ಮಾತೋಶ್ರೀ ಅಕ್ಕ ಗಂಗಾಂಬಿಕೆ ಮಾತಾಜಿ ಸಾನಿಧ್ಯ ವಹಿಸಿದ್ದರು.
ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಬಾಪುಗೌಡ ಪಾಟೀಲ ಶೇಗುಣಸಿ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಪ್ರೊ.ರಾಜು ಆಲಗೂರ, ಹರಳಯ್ಯ ಸಮಾಜದ ರಾಜ್ಯಾಧ್ಯಕ್ಷ ಜಗದೀಶ ಬೇಟಗೇರಿ, ಹರಳಯ್ಯ ಸಮಾಜದ ಜಿಲ್ಲಾದ್ಯಕ್ಷ ಶ್ರೀನಿವಾಸ ಶಹಾಪೂರ, ಸಮಾಜದ ಮುಖಂಡರು ಭಾಗವಹಿಸಿದ್ದರು.

