ಕೆರುಟಗಿಯಲ್ಲಿ ಹಳೆಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ಗುರುವಂದನೆ | ಅದ್ಧೂರಿ ಮೆರವಣಿಗೆ | ಪುಷ್ಪವೃಷ್ಟಿ
ಉದಯರಶ್ಮಿ ದಿನಪತ್ರಿಕೆ
ವಿಶೇಷ ವರದಿ: ರಾಜು ಕೆರುಟಗಿ
ವಿಜಯಪುರ: ಅಲ್ಲಿ ಹಳೆಯ ನೆನಪುಗಳ ಕಲರವ. ತಾವು ಒಂದು ಕಾಲದಲ್ಲಿ ಕಲಿತ ಶಾಲೆ, ಕಲಿಸಿದ ಗುರುವೃಂದ, ಆ ವಾತಾವರಣದಲ್ಲಿ ಶಿಷ್ಯರು ಅಂದು ನಿಜಕ್ಕೂ ಕಳೆದುಹೋಗಿದ್ದರು. ಮೊಗೆದಷ್ಟೂ ಬರುತ್ತಿದ್ದ ನೆನಪುಗಳು ಅವರ ಸಂಭ್ರಮವನ್ನು ಹೆಚ್ಚಿಸುತ್ತಿದ್ದವು. ಅಂದಿನ ಗುರು-ಶಿಷ್ಯರ ಸಾರ್ಥಕ ಮಿಲನ ಕಂಡು ಆ ಪರಿಸರದ ಗಿಡ-ಮರಗಳು ತಲೆದೂಗುತ್ತಿದ್ದವು.
ಈ ಎಲ್ಲ ಘಟನೆ ಕಂಡದ್ದು
ಜಿಲ್ಲೆಯ ಕೆರೂಟಗಿ ಗ್ರಾಮದ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಅಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ ತಮಗೆ ವಿದ್ಯಾದಾನ ಮಾಡಿದ ಗುರು ವೃಂದಕ್ಕೆ ಅಭಿನಂದನೆ ಸಲ್ಲಿಸಲು ಅಂದು ಗುರುವಂದನಾ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಶ್ರೀ ಸಿದ್ದರಾಮೇಶ್ವರ ಮಠದಿಂದ ಶಾಲೆಯವರೆಗೂ ಎಲ್ಲ ಶಿಕ್ಷಕರನ್ನು ಭಾಜ-ಭಜಂತ್ರಿ, ಡೊಳ್ಳುವಾದ್ಯಗಳ ನಿನಾದದಲ್ಲಿ ಮೆರವಣಿಗೆಯೊಂದಿಗೆ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು.
ವೇದಿಕೆಯಲ್ಲಿ ಶಿಷ್ಯರು ತಮ್ಮ ನೆಚ್ಚಿನ ಶಿಕ್ಷಕರೊಂದಿಗಿನ ತಮ್ಮ ವಿದ್ಯಾರ್ಥಿ ಜೀವನದ ಘಟನೆಗಳನ್ನು ಸ್ಮರಿಸಿಕೊಳ್ಳುತ್ತಿದ್ದರೆ, ಆಯಾ ಶಿಕ್ಷಕರು ನೆನಪಿನ ಅಂಗಳಕ್ಕೆ ಜಾರಿ ಆ ದಿನಗಳನ್ನು ಕಣ್ಮುಂದೆ ತಂದುಕೊಳ್ಳಲು ಯತ್ನಿಸುತ್ತಿದ್ದರು.
ಒಂದು ಕಾಲದ ಶಿಷ್ಯರ ಪ್ರೀತಿ-ಅಭಿಮಾನದ ಸುರಿಮಳೆಯಲ್ಲಿ ಹಾಗೂ ಪುಷ್ಪವೃಷ್ಟಿಯಲ್ಲಿ ತೊಯ್ದು ತೊಪ್ಪೆಯಾದ ಗುರುವೃಂದದಲ್ಲಿ ಧನ್ಯತಾ ಭಾವ ಮಾಡಿದ್ದರೆ, ತಮ್ಮ ನೆಚ್ಚಿನ ಶಿಕ್ಷಕರನ್ನು ಗೌರವಿಸಿ, ಅವರ ಪ್ರೀತಿಗೆ ಪಾತ್ರರಾದ ಶಿಷ್ಯರ ಮೊಗದಲ್ಲಿ ಸಾರ್ಥಕ ಭಾವ ಎದ್ದುಕಾಣುತ್ತಿತ್ತು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಸ್ಥಳೀಯ ಶ್ರೀ ಸಿದ್ದರಾಮೇಶ್ವರ ಮಠದ, ಪಿಠಾಧಿಪತಿ ಶಿವಬಸವ ಶಿವಾಚಾರ್ಯರು ಮಾತನಾಡಿ, ಗುರು ಋಣ ತಾಯಿ ಮತ್ತು ತಂದೆ ಋಣವನ್ನ ತೀರಿಸುವುದು ಬಹಳ ಮುಖ್ಯ. ಗುರುವಿನ ಋಣವನ್ನ ಅವರ ಕೈಯಲ್ಲಿ ಕಲಿತಿರುವ ನೀವೆಲ್ಲ ವಿಧ್ಯಾರ್ಥಿಗಳು ಇಂದು ತೀರಿಸಿದ್ದೀರಿ ಎಂದರು.
ಶಾಲಾ ಮುಖ್ಯ ಗುರು ಎಸ್.ಎಸ್. ಸಾತಿಹಾಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ
ಎಂ.ಸಿ.ಕಾಸರ,(ನಿವೃತ್ತ ಶಿಕ್ಷಕರು), ಎಸ್. ಬಿ.ಚೌಧರಿ (ಪಿ.ಟಿ. ಶಿಕ್ಷಕರು), ಎಮ್.ಸಿ.ಕಾಸರ, ಎಸ್.ಎಂ.ಗೌರ (ಮುಖ್ಯ ಶಿಕ್ಷಕರು), ಎಲ್.ಟಿ. ಗೊಂಧಳಿ (ಶಿಕ್ಷಕರು), ಎಲ್.ಐ.ರಾಥೋಡ,
ಡಿ.ಎನ್. ಚಿಕ್ಕಮಠ, ಜಿ.ವೈ.ಬಸಟ್ಟಿ, ಆರ್.ಪಿ.ಕಟ್ಟಿ ಮೇಡಂ, ಎಂ.ಎನ್.ಕಾಚೂರ, ಎಂ.ಎನ್.ದೇವಣಗಾಂವ, ಎಸ್.ಎಂ.ಬಿರಾದಾರ, ಸಂತೋಷ್ ಗುಮಶೆಟ್ಟಿ ಪಾಲ್ಗೊಂಡಿದ್ದರು.
ಕೆರುಟಗಿಯ ರೇಣುಕಾಚಾರ್ಯ ಗವಾಯಿಗಳು, ಮಹಾಂತೇಶ ಕಾಳಗಿ (ತಬಲಾ ವಾದಕರು) ಸಂಗೀತ ಸೇವೆ ನಡೆಸಿಕೊಟ್ಟರು.
ಶ್ರೀ ಬೀರಲಿಂಗೇಶ್ವರ ಡೋಳ್ಳಿನ ವಾಲಗ ಸಂಘ ಕೆರುಟಗಿ ಇವರ ಆಕರ್ಷಕ ಡೋಳ್ಳು ಕುಣಿತ ಎಲ್ಲರ ಮನಸೂರೆಗೊಂಡಿತು.
ಅಶೋಕ
ಬಿರಾದಾರ (ಸಿಂದಗಿ) ನಿರೂಪಿಸಿದರು.
ಕೆರುಟಗಿ ಗ್ರಾಮದ ಗುರು- ಹಿರಿಯರು, ಗಣ್ಯರು, ಗ್ರಾಮಸ್ಥರು ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿಶೇಷ ಗೌರವ ವಂದನೆ
ಪ್ರಕಾಶ ತಿಳಗೂಳ, (ಆದರ್ಶ ಶಿಕ್ಷಕರು), ರಾಜಶೇಖರ ಕಾಸರ (ಶಿಕ್ಷಕರು), ರೇವಣಸಿದ್ಧ ಹುಡೇದ (ಶಿಕ್ಷಕರು) ಗುರುವೃಂದಕ್ಕೆ ಪುಷ್ಪವೃಷ್ಟಿಗರೆದು ಶಿಷ್ಯವರ್ಗದಿಂದ ವಿಶೇಷ ಗೌರವ ವಂದನೆ ಸಲ್ಲಿಸಲಾಯಿತು.

“ಈ ತರಹದ ಗುರುವಂದನಾ ಕಾರ್ಯಕ್ರಮವನ್ನು, ನಾನು ಈವರೆಗೆ ನೋಡಿಲ್ಲ. ಇದೆಲ್ಲವನ್ನು ನೋಡಿ ನನಗೆ ಬಹಳ ಸಂತೋಷವಾಗಿದೆ. ನಾನು ನಿವೃತ್ತಿ ಹೊಂದಿದ ಶಾಲೆ ಇದು, ಇದು ಬರಿ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಅಷ್ಟೇ ಅಲ್ಲ, ಇದೊಂದು ಕೂಡಲಸಂಗಮ.”
– ಸಿ.ಎಂ.ಕಾಸರ
ನಿವೃತ್ತ ಮುಖ್ಯ ಶಿಕ್ಷಕರು

” ಈ ಊರಿನಲ್ಲಿ ಇರುವಂತಹ ಜನ, ಮಕ್ಕಳು, ಎಲ್ಲಿಯೂ ನೋಡಿಲ್ಲ. ಎನ್ ಬೇಕು ಅಂತ ಕೇಳಿದ್ರೂ ತಕ್ಷಣ ಈ ಊರು ಕೋಡ್ತದೆ. ಈ ಶಾಲೆ ಇನ್ನೂ ಅಭಿವೃದ್ಧಿ ಆಗಬೇಕಾಗಿದೆ, ಶಾಲೆಗೆ ಮುಖ್ಯವಾಗಿ ಇನ್ನು ಹೆಚ್ಚಿನ ಜಾಗದ ಅವಶ್ಯಕತೆ ಇದೆ.”
– ಎಸ್.ಬಿ.ಚೌಧರಿ
ದೈಹಿಕ ಶಿಕ್ಷಕರು

” ನಾನು ನನ್ನ ವೃತ್ತಿ ಜೀವನವನ್ನು ಪ್ರಾರಂಭ ಮಾಡಿದ ಶಾಲೆ ಇದು. ನನಗೆ ಇಂತಹ ಮಕ್ಕಳು, ಶಿಷ್ಯಂದಿರು ಆಗಿ ಸಿಗುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ.”
– ಜಿ.ವಾಯ್. ಬಸೇಟ್ಟಿ
ವಿಜ್ಞಾನ ಶಿಕ್ಷಕರು

” ನಾವು ಎಲ್ಲರೂ ಎಲ್ಲೆಲ್ಲೊ ಇದ್ವಿ, ಇವತ್ತು ಎಲ್ಲರೂ ಒಂದೇ ಕಡೆ ಸೇರೀವಿ, ಇದೆ ಸಂಗಮ ಆಗಿದೆ ಇವತ್ತು. ನೀವು ಎಲ್ಲೆ ಇರಿ, ಹೇಗೆ ಇರಿ, ಒಳ್ಳೆಯ ಸಂಸ್ಕಾರವಂತರಾಗಿರಿ; ನಿಮ್ಮ ಮಕ್ಕಳಿಗೂ ಕೂಡಾ ಒಳ್ಳೇಯ ಶಿಕ್ಷಣ ಮತ್ತು ಸಂಸ್ಕಾರವನ್ನು ಕೋಡೂದು ಮರಿಬ್ಯಾಡ್ರಿ.”
– ಡಿ.ಎನ್.ಚಿಕ್ಕಮಠ
ಶಿಕ್ಷಕರು

