ಜಮಖಂಡಿಯಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಭರವಸೆ
ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ನಿರ್ಮಾಣಕ್ಕೆ ಮುಜರಾಯಿ ಇಲಾಖೆಯಿಂದ 50ಲಕ್ಷ ರೂ. ಅನುದಾನ ನೀಡಲಾಗುವದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಗರದ ಹೊರವಲಯದ ಕುಂಚನೂರ ಆರ್‌ಸಿಯಲ್ಲಿನ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದ ಆವರಣದಲ್ಲಿ ವೇಮ ವಿಕಾಸ ವೇದಿಕೆಯ ಆಶ್ರಯದಲ್ಲಿ ನಡೆದ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನ ಎಲ್ಲ ಸಮುದಾಯಗಳಿಗೂ ಅನುಕೂಲ ವಾಗುತ್ತಿದೆ ಅದರ ಹಾಗೆ ದೇವಸ್ಥಾನ ಎಲ್ಲ ಸಮುದಾಯಕ್ಕೂ ಅನುಕೂಲವಾಗಬೇಕು ಎಂದರು.
ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾತನಾಡಿ, ವೈಯಕ್ತಿಕವಾಗಿ ರೂ.2 ಲಕ್ಷ ಹಾಗೂ ಶಾಸಕರ ನಿಧಿಯಿಂದ ರೂ.5 ಲಕ್ಷ ಅನುದಾನ ನೀಡುಲಾಗುವದು ಎಂದು ಹೇಳಿದರು. ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ನಡೆಯುವ ವಿವಾಹಗಳ ನೂತನ ದಂಪತಿಗೆ ನಮಸ್ಕರಿಸಲು ದೇವಾಲಯ ಅತ್ಯವಶ್ಯಕವಾಗಿತ್ತು. ಈಗ ಹೇಮರಡ್ಡಿ ಮಲ್ಲಮ್ಮನವರ ದೇವಸ್ಥಾನ ನಿರ್ಮಿಸುತ್ತಿರುವುದು ಒಳ್ಳೆಯ ಸಂಗತಿ ಎಂದರು.
ಮಾಜಿ ಸಚಿವ ಎಸ್.ಆರ್. ಪಾಟೀಲ ಮಾತನಾಡಿ, ರೆಡ್ಡಿ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಮುಂದೆ ಬಂದಿದೆ. ಹೇಮರಡ್ಡಿ ಮಲ್ಲಮ್ಮನವರ ಆದರ್ಶಗಳು ಕೇವಲ ಸಮಾಜಕ್ಕಲ್ಲದೆ ಇಡೀ ವಿಶ್ವದ ಮಹಿಳೆಯರಿಗೆ ಸಿಕ್ಕ ಅನರ್ಥ್ಯ ರತ್ನ. ಅವರು ಸಾತ್ವಿಕ ಗುಣಗಳನ್ನು ಹೊಂದಿದ ಆದರ್ಶ ಮಹಿಳೆ. ಅವರ ಆದರ್ಶಗಳನ್ನು ಎಲ್ಲ ಮಹಿಳೆಯರು ಮೈಗೂಡಿಸಿಕೊಳ್ಳಬೇಕು ಎಂದರು.
ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಸಮಾಜದಲ್ಲಿ ರೆಡ್ಡಿ ಸಮುದಾಯ ಚಿಕ್ಕದಿದ್ದರು ಶಕ್ತಿಯಲ್ಲಿ ಹೆಚ್ಚಾಗಿದೆ. ಸಮಾಜದ ಬಾಂದವರು ಬೇರೆ ಸಮಾಜದವರಿಗೆ ಸಹಕಾರ ನೀಡುವ ವ್ಯಕ್ತಿತ್ವ ಹೊಂದಿದವರಾಗಿದ್ದಾರೆ ಎಂದರು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ರೆಡ್ಡಿ ಜನಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ಶೇಖರ ರೆಡ್ಡಿ ಮಾತನಾಡಿದರು.
ವೇದಿಕೆಯಲ್ಲಿ ರೆಡ್ಡಿ ಗುರುಪೀಠದ ವೇಮಾನಂದ ಮಹಾಸ್ವಾಮಿ, ಚಿನಗುಂಡಿ ಲಕ್ಕಮ್ಮತಾಯಿ, ವಿಪ ಸದಸ್ಯ ಹನಮಂತ ನಿರಾಣಿ, ವಿಪ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ, ಶಿವನಗೌಡ ಪಾಟೀಲ, ರಾಮನಗೌಡ ಚಿಕ್ಕನಗೌಡರ, ಡಾ.ಜಿ.ವಿ. ಉದಪುಡಿ, ಎಲ್.ಆರ್. ಉದಪುಡಿ, ಕೃಷ್ಣಾರೆಡ್ಡಿ, ಕುಮಾರ ಪಾಟೀಲ ಇತರರು ಇದ್ದರು.
ಸರಸ್ವತಿ ಸಬರದ ಪ್ರಾರ್ಥಿಸಿದರು, ವೇಮ ವಿಕಾಸ ವೇದಿಕೆಯ ತಾಲ್ಲೂಕಾ ಅಧ್ಯಕ್ಷ ಡಾ.ಆರ್.ಎನ್. ಸೋನವಾಲ್ಕರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ವೇತಾ ಕಲ್ಲೂರ, ಅನಿತಾ ಪಾಟೀಲ ನಿರೂಪಿಸಿದರು.

