ವಿಜಯಪುರದಲ್ಲಿ ಖ್ಯಾತ ಚಿತ್ರನಟ ಡಾ.ಸಂಗಮೇಶ ಉಪಾಸೆ ಸುದ್ದಿಗೋಷ್ಟಿ | ಜನರ ಮನದಲ್ಲಿ ಅಚ್ಚಳಿಯದೇ ಉಳಿದ ಸಿಲ್ಲಿಲಲ್ಲಿ ಗೋವಿಂದ ಪಾತ್ರ
ವಿಜಯಪುರ: ಹಾಸ್ಯ, ಅನಾಥ ಮಕ್ಕಳ ರಕ್ಷಣೆಯ ಸಂದೇಶದ ಸಾರವನ್ನು ಹೊಂದಿರುವ ಗಲಿಬಿಲಿ ಗೋವಿಂದ ಚಿತ್ರೀಕರಣ ಆರಂಭವಾಗಿದ್ದು,
ಇಂಚಗೇರಿ ಮಠದಲ್ಲಿ ಚಿತ್ರದ ಮುಹೂರ್ತ ನಡೆದಿದೆ ಎಂದು ಖ್ಯಾತ ಕಲಾವಿದ, ಹಿರಿಯ ಕೆಎಎಸ್ ಅಧಿಕಾರಿ ಡಾ.ಸಂಗಮೇಶ ಉಪಾಸೆ ವಿವರಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಅವರು, ಹಾಸ್ಯ, ಅನಾಥಮಕ್ಕಳ ರಕ್ಷಣೆಯ ಸಂದೇಶ, ವೈಜ್ಞಾನಿಕ-ವೈಚಾರಿಕೆ ಹೀಗೆ ಹಲವು ಆಯಾಮಗಳಲ್ಲಿ ಹೊರ ಬರುತ್ತಿರುವ ಚಿತ್ರವಾಗಿದ್ದು, ಸಿಲ್ಲಿಲಲ್ಲಿ ಗೋವಿಂದ ಪಾತ್ರ ಅತ್ಯಂತ ಜನಪ್ರಿಯವಾಗಿದೆ, ಎಲ್ಲೇ ಹೋದರೂ ಸಹ ನನ್ನನ್ನು ಗೋವಿಂದ ಎಂದೇ ಕರೆಯುತ್ತಿದ್ದಾರೆ, ಅನೇಕ ಪಾತ್ರಗಳನ್ನು ಮಾಡಿದ್ದರೂ ಸಹ ಇಂದಿಗೂ ಗೋವಿಂದ ಪಾತ್ರವೇ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ, ಹೀಗಾಗಿ ಅದನ್ನೇ ಚಿತ್ರದ ಇಡೀ ಆಕರ್ಷಣೆಯ ಕೇಂದ್ರಬಿಂದುವಾಗಿ ಮಾಡಿಕೊಳ್ಳಲಾಗಿದೆ ಎಂದರು.
ಕಲಾ ಸೇವೆ ಮಾಡುತ್ತಾ ಬದುಕು ಕಟ್ಟಿಕೊಂಡವನು ನಾನು, ನಂತರ ಕೆಎಎಸ್ ಅಧಿಕಾರಿಯಾಗಿ ಬದುಕಿನ ಪಯಣ ಸಾಗಿಸಿದ್ದೇನೆ, ಜೀವನ ಏನೂ ಎಂಬುದು ಗೊತ್ತಾಗಿದೆ, ಚಿತ್ರದ ಆರಂಭದಲ್ಲಿಯೇ ಪ್ರೇಕ್ಷಕರಾಗಿ ಧನ್ಯವಾದ ಗೀತೆ ಹಾಡುವ ಹೊಸ ಪ್ರಯತ್ನ ಮಾಡಲಾಗಿದೆ.
ನಾನು ಚಲನಚಿತ್ರಕ್ಕೆ ಹೋಗಿದ್ದು ಅನೇಕ ಕನಸುಗಳನ್ನು ಕಟ್ಟಿಕೊಂಡು, ಇದೊಂದು ಸಂಕೀರ್ಣ ಮಾಧ್ಯಮ, ಅನೇಕರ ಪ್ರಯತ್ನದ ಫಲವಾಗಿಯೇ ಚಿತ್ರ ಹೊರಬರುತ್ತದೆ, ಕೆಲವೊಬ್ಬರಿಗೆ ಈ ವಿದ್ಯೆ ಒಲಿಯುತ್ತದೆ, ಈ ಗಲಿಬಿಲಿ ಗೋವಿಂದ ಚಿತ್ರ ನಿರ್ದೇಶನ, ನಿರ್ಮಾಣವನ್ನು ನಾನೇ ಮಾಡಿರುವೆ,
ಇಂಚಗೇರಿ ಮಠದಲ್ಲಿ ಜನ ಮರಳೋ ಜಾತ್ರೆ ಮರಳೋ ಎಂಬ ಗೀತೆಯ ಚಿತ್ರೀಕರಣ, ಸಾವಳಸಂಗ ಗುಡ್ಡ ಸೇರಿದಂತೆ ಹಲವು ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ವಿವರಿಸಿದರು.
ಚಿತ್ರರಂಗವನ್ನು ಕಾಪಾಡಿದ್ದು ಉತ್ತರ ಕರ್ನಾಟಕ ಜನತೆ
ನೃತ್ಯ ನಿರ್ದೇಶಕ ಮಾಲೂರು ಶ್ರೀನಿವಾಸ ಮಾತನಾಡಿ, ಇಡೀ ಚಿತ್ರರಂಗವನ್ನು ಕಾಪಾಡಿದ್ದು ಉತ್ತರ ಕರ್ನಾಟಕ ಜನತೆ, ಉತ್ತರ ಕರ್ನಾಟಕ ಜನತೆಯೇ ಚಿತ್ರಗಳನ್ನು ನೋಡಿ ಹರಿಸಿದ್ದೇ ಚಿತ್ರ ರಂಗ ಉಳಿಯಲು ಕಾರಣ ಎಂದರು.
ಉತ್ತರ ಕರ್ನಾಟಕ ಜನತೆಯ ಮನಸ್ಸು ಅತ್ಯಂತ ಸಿಹಿ, ಇಡೀ ಚಿತ್ರ ತಂಡವನ್ನೇ ತಮ್ಮ ಮನೆಯ ಕುಟುಂಬದ ಸದಸ್ಯರಂತೆ ಈ ಭಾಗದ ಜನತೆ ನೋಡಿದ್ದಾರೆ, ನಾನು ಬೆಂಗಳೂರಿನವನಲ್ಲ, ಇಲ್ಲಿಯವನೇ ಎಂಬಂತಾಗಿದೆ ಎಂದರು.
ಭಾವುಕರಾದ ಉಪಾಸೆ
ದಿ.ವಿಷ್ಣುವರ್ಧನ್ ಅವರು ನಟಿಸಿದ ಸೂರಪ್ಪ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ ಕಾರ್ಯನಿರ್ವಹಿಸುವ ವೇಳೆ ತಮ್ಮ ಅನುಭವ ಹಂಚಿಕೊಳ್ಳಲು ಅಣಿಯಾದ ಉಪಾಸೆ, ಚಿತ್ರೀಕರಣ ನಡೆದಾಗ ಮೈಸೂರು ಮೊದಲಾದ ಭಾಗಗಳ ಜನತೆ ಅತ್ಯುತ್ಸಾಹದಿಂದ ಚಿತ್ರೀಕರಣ ಆನಂದಿಸುತ್ತಿದ್ದರು, ಈ ರೀತಿಯ ಚಿತ್ರೀಕರಣ ನಮ್ಮೂರಿನಲ್ಲಿ ಯಾವಾಗ ಮಾಡುತ್ತೇನೋ ಎಂದುಕೊಂಡಿದ್ದೆ, ಈಗ ಅದು ಸಾಕಾರವಾಗುತ್ತಿದೆ ಎಂದಾಗ ಉಪಾಸೆ ಕಣ್ಣೀರಿಟ್ಟು ಕೆಲ ಕಾಲ ಭಾವುಕರಾದರು. ನಂತರ ಸಾವರಿಸಿಕೊಂಡು ಮಾತು ಮುಂದುವರೆಸಿದರು.

