ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ರಾಜ್ಯದಲ್ಲಿ ಬೀದರನಿಂದ ಚಾಮರಾಜನಗರ ಜಿಲ್ಲೆಯ ವರೆಗೆ ಎಲ್ಲ ಕಬ್ಬು ಬೆಳೆಗಾರರಿಗೆ ಸಿದ್ಧರಾಮಯ್ಯ ನೇತೃತ್ವದ ನಮ್ಮ ಸರ್ಕಾರ ಐತಿಹಾಸಿಕ ದರ ನೀಡಿದೆ. ಇದರೊಂದಿಗೆ ಕೇಂದ್ರ ಸರ್ಕಾರವೂ ಮಾಡದ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ಮಲಘಾಣ ಗ್ರಾಮದಲ್ಲಿ ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಗ್ರಾಮ ಹಾಗೂ ತಾಂಡಾದಲ್ಲಿ ತಲಾ ಒಂದೊಂದು ಅಂಗನವಾಡಿ ಕಟ್ಟಡ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ನಮ್ಮ ಸರ್ಕಾರದ ನಿರ್ಧಾರದಿಂದ ಕಬ್ಬು ಬೆಳೆಗಾರರಿಗೆ ಪ್ರತಿ ಟನ್ ಕಬ್ಬು ಬೆಳೆಗೆ 200-350 ರೂ. ಹೆಚ್ಚಿನ ದರ ಸಿಕ್ಕಿದೆ ಎಂದರು.
ರೈತರು ಹೆಚ್ಚು ಇಳುವರಿ ಪಡೆಯುವ ವೈಜ್ಞಾನಿಕ ಕೃಷಿ ಮಾಡಬೇಕು. ಕೃಷಿಯಲ್ಲಿ ಕಬ್ಬು ಬೆಳೆ ಅಧಿಕ ಉತ್ಪಾದನೆ ನಿಟ್ಟಿನಲ್ಲಿ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಕ್ಕರೆ ಕಾರ್ಖಾನೆ ಮಾಲೀಕರು ಸಮನ್ವಯದಿಂದ ಕಬ್ಬು ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಮಲಘಾಣ ಭಾಗದಲ್ಲಿ ನೀರಾವರಿ ಕ್ರಾಂತಿಯಾಗಿ ಬರಡು ಭೂಮಿಗೆ ಚಿನ್ನದ ಬೆಲೆ ಬಂದಿರುವುದು ನೀರಾವರಿ ಸೌಲಭ್ಯದಿಂದಾಗಿ. ಮುಖ್ಯಮಂತ್ರಿ ಆಗಿದ್ದ ರಾಮಕೃಷ್ಣ ಹೆಗಡೆ ಅವರು ಅಡಿಗಲ್ಲು ಹಾಕಿದ ಮಲಘಾಣ ಏತ ನೀರಾವರಿ ಯೋಜನೆಗೆ ಅಗತ್ಯ ಅನುದಾನ ನೀಡಿ ಅನುಷ್ಠಾನಕ್ಕೆ ನೆರವಾದವರು ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು. ಈ ಇಬ್ಬರು ನಾಯಕರ ಸಹಕಾರದಿಂದ ನಾನು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದ್ದರಿಂದ ನೀರಾವರಿ ಸೌಲಭ್ಯ ದಕ್ಕಿದ್ದು, ಈ ಮಹಾನ್ ನಾಯಕರಿಗೆ ನಾವು ಋಣಿಯಾಗಿರಬೇಕಿದೆ ಎಂದರು.
ಹೀಗಾಗಿ ರೈತರು ನೀರಿನ ಸದ್ಬಳಕೆ ಮಾಡಿಕೊಳ್ಳಬೇಕು. ಜೊತೆಗೆ ಕೇವಲ ಕಬ್ಬು ಮಾತ್ರ ಬೆಳೆಯದೇ ಆರ್ಥಿಕ ಪ್ರಗತಿಗಾಗಿ ಸಮಗ್ರ, ಮಿಶ್ರ ಕೃಷಿಯಲ್ಲೂ ತೊಡಗಬೇಕು. ಈ ಬಾರಿ ದ್ರಾಕ್ಷಿ ಬೆಳೆಗೆ 350-400 ರೂ. ಐತಿಹಾಸಿಕ ದರ ಸಿಕ್ಕಿದೆ. ದಾಳಿಂಬೆ ಹಣ್ಣಿಗೆ ಕಳೆದ ಐದು ವರ್ಷದಿಂದ 150 ರೂ. ದರ ಇಳಿದಿಲ್ಲ. ಹೀಗಾಗಿ ರೈತರು ವಾಣಿಜ್ಯದ ಏಕ ಬೆಳೆಗೆ ಆದ್ಯತೆ ನೀಡದೇ ಆಹಾರ ಉತ್ಪಾದನೆ ಕಡೆಗೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮೀ ಮಾದರ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಸುರೇಶ ವಠಾರ, ಅಶೋಕ ನಿಂಗನೂರ, ರವೀಂದ್ರ ಕಲಗುರ್ಕಿ, ನಿವೃತ್ತ ಮುಖ್ಯಗಯರುಗಳಾದ ಎಸ್.ಎಸ್.ಗರಸಂಗಿ, ವಕೀಲರಾದ ಸದಾನಂದ ನಿಂಗನೂರ, ತಾ.ಪಂ. ಇಒ ಸುನೀಲ್ ಮದ್ದೀನ, ಬಿಇಒ ವಸಂತ ರಾಠೋಡ, ಸಿಡಿಪಿಒ ಶಿಲ್ಪಾ ಹಿರೇಮಠ ಸೇರಿದಂತೆ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಪುಟ್ಟು ಪಾಟೀಲ ಸ್ವಾಗತಿಸಿ, ನಿರೂಪಿಸಿದರು.

