ಬಬಲೇಶ್ವರದಲ್ಲಿ ನಡೆದ ಬಸವಾದಿ ಶರಣರ ಹಿಂದೂ ಸಮಾವೇಶದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಗುಡುಗು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕನೇರಿ ಶ್ರೀಗಳು ದೇವರು, ಈ ದೇವರು ಕ್ಷಮೆ ಕೋರಬೇಕು ಎಂದು ಹೇಳಿದವರೇ ಮೊದಲು ಸಮಸ್ತ ಹಿಂದೂ ಸಮಾಜದ ಕ್ಷಮೆಯಾಚಿಸಬೇಕು, ಕನೇರಿ ಶ್ರೀಗಳ ಹಿಂದೂ ದೇವತೆಗಳನ್ನು ಅಪಮಾನ ಮಾಡಿದವರ ವಿರುದ್ದ ಸಹಜ ಭಾಷೆಯಲ್ಲಿ ಉತ್ತರ ನೀಡಿದ್ದಾರೆ ಅಷ್ಟೇ, ಶ್ರೀಗಳ ಜೊತೆ ಇಡೀ ದೇಶವೇ ಇದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಬಬಲೇಶ್ವರದಲ್ಲಿ ನಡೆದ ಬಸವಾದಿ ಶರಣರ ಹಿಂದೂ ಸಮಾವೇಶದಲ್ಲಿ ಪಾಲ್ಗೊಂಡು ಪ್ರಧಾನ ಭಾಷಣ ಮಂಡಿಸಿದ ಅವರು, ಹಿಂದೂ ಧರ್ಮದ ದೇವಾನು ದೇವತೆಗಳನ್ನು ಹೊಳೆಗೆ ಎಸೆಯಿರಿ ಎಂದರೆ ನಮ್ಮ ರಕ್ತ ಕುದಿಯುವುದಿಲ್ಲವೇ? ಇದೇ ತೆರನಾಗಿ ಪೂಜ್ಯರ ರಕ್ತರ ಕುದಿದಿದೆ, ಅದಕ್ಕಾಗಿ ಸಹಜ ಭಾಷೆಯಲ್ಲಿ ಅವರನ್ನು ಟೀಕಿಸಿದ್ದಾರೆ, ಪೂಜ್ಯರು ಯಾವ ವ್ಯಕ್ತಿಯನ್ನು ಟೀಕಿಸಿಲ್ಲ, ಹಿಂದೂ ಸಿದ್ಧಾಂತವನ್ನು ಟೀಕಿಸಿದವರ ವಿರುದ್ದ ಗುಡುಗಿದ್ದಾರೆ, ಶ್ರೀಗಳನ್ನು ನಿಷೇಧ ಮಾಡುವ ಹಿಂದಿರುವ ವ್ಯಕ್ತಿಗಳು ಇದೇ ಜನ್ಮದಲ್ಲಿ ಪಾಪ ಅನುಭವಿಸುತ್ತಾರೆ ಎಂದರು.
ಅಲ್ಲಾಹು, ಏಸುವಿಗೆ ಬೈದರೆ ಅವರು ಸುಮ್ಮನಿರದೆ ಕೊಂದು ಹಾಕುತ್ತಾರೆ, ನಮ್ಮ ದೇವಾನುದೇವತೆಗಳ ಬಗ್ಗೆ ಅಪಮಾನ ಮಾಡುವ ಅವರು ಬೇರೆ ಧರ್ಮದವರಿಗೆ ಮಾತನಾಡಲಿ ನೋಡೋಣ ಎಂದು ಸವಾಲು ಹಾಕಿದರು.
ಶಾಸಕನೋರ್ವ ಅಧಿಕಾರಿಗೆ ಚಪ್ಪಲಿಯಿಂದ ಹೊಡೆಯುತ್ತೇನೆ ಎಂದಾಗ ಆತನನ್ನು ಏಕೆ ನಿಷೇಧಿಸಲಿಲ್ಲ, ಆತ ಕಾಂಗ್ರೆಸ್ ಎಂದು ಸುಮ್ಮನೆ ಬಿಟ್ಟಿದ್ದೀರಾ ಎಂದು ಪ್ರಶ್ನಿಸಿದರು.
ಹಿಂದೂ ಧರ್ಮ ಹಾಗೂ ಹಿಂದೂ ದೇವತೆಗಳ ಅಪಮಾನ ಸಹಿಸಲ್ಲ, ಹಿಂದೂಗಳ ಸುದ್ದಿಗೆ ಬರಬೇಡಿ, ಹಿಂದೂ ಧರ್ಮಕ್ಕೆ ಆಗಿರುವ ಅನ್ಯಾಯದ ವಿರುದ್ದ ಇಲ್ಲಿ ಜನಸ್ತೋಮವೇ ಸೇರಿದೆ, ಇದು ಕೇವಲ ಟ್ರೇಲರ್ ಮಾತ್ರ, ಪಿಚ್ಚರ್ ಅಭಿ ಬಾಕಿ ಹೈ ಎಂದು ಈಶ್ವರಪ್ಪ ಗುಡುಗಿದರು.

ಬಸವೇಶ್ವರರು ಹಿಂದೂ ಧರ್ಮದ ನೇತಾರ
ಬಸವೇಶ್ವರರು ನಮ್ಮ ಹಿಂದೂ ಧರ್ಮದ ನೇತಾರ, ನಾವು ಅವರ ದಾರಿಯಲ್ಲಿ ಸಾಗಿದ್ದೇವೆ, ನಮಗೆ ಅವರೇ ನೇತಾರ ಎಂದು ಈಶ್ವರಪ್ಪ ಹೇಳಿದರು.
ವಿನಾಕಾರಣ ಕನೇರಿ ಶ್ರೀಗಳನ್ನು ನಿಷೇಧ ಮಾಡಲು ಕಾರಣಿಯಾದವರಿಗೆ ಈ ಬಬಲೇಶ್ವರದಿಂದಲೇ ಜನತೆ ನಿಷೇಧಿಸುತ್ತಾರೆ ಎಂದರು.

ಕರ್ನಾಟಕ ಸಾವಯವ ಬೀಜ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ ಮಾತನಾಡಿ, ಸಮಾವೇಶಕ್ಕೆ ಅಡಚಣೆ ಬಂದವು. ರಾತ್ರಿ 12 ರವರೆಗೆ ಯಾರೂ ಸ್ವಾಮೀಜಿ ಬರಲ್ಲ, ಜನ ಸೇರಲ್ಲ ಎಂದು ಅಪಪ್ರಚಾರ ಮಾಡಿದರು, ಆದರೆ ಇಲ್ಲಿ ನೆರೆದ ಜನಸ್ತೋಮವೇ ಅವರಿಗೆ ಉತ್ತರ ಎಂದರು.
ಧರ್ಮ ಒಡೆದು ಆಳುವವರಿಗೆ ತಕ್ಕ ಪಾಠ ಕಲಿಸಬೇಕು.
ಸಮಾನತೆ, ಏಕತೆ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದವರೇ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಅಡ್ಡಿಯುಂಟು ಮಾಡಿದ್ದಾರೆ, ಆದರೆ ಭಕ್ತರು ಇದನ್ನು ಯಶಸ್ವಿಯಾಗಿ ಮಾಡಿ ಇದನ್ನು ಸುವರ್ಣಾಕ್ಷರಗಳಲ್ಲಿ ಬರೆಯುವ ಸಮಾವೇಶವಾಗಿ ರೂಪಿಸಿದ್ದೀರಿ ಎಂದರು.
ಬಬಲೇಶ್ವರ ಬೃಹನ್ಮಠದ ಶ್ರೀ
ಡಾ.ಮಹಾದೇವ ಶಿವಾಚಾರ್ಯರು ಎಲ್ಲ ಕಾರ್ಯಕ್ರಮಗಳಿಗೆ ಬರುತ್ತಿದ್ದರು, ಆದರೆ ಅವರು ಇಲ್ಲಿ ಏಕೆ ಬರಲಿಲ್ಲ? ಅದನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದರು.

